ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನ ಪೊಲೀಸ್‌ ವಶಕ್ಕೆ ಆದಿತ್ಯ ರಾವ್‌, ತೀವ್ರ ವಿಚಾರಣೆ

ಸ್ಫೋಟಕ ಕುರಿತು ವಿಪರೀತವಾಗಿ ಅಧ್ಯಯನ ಮಾಡಿದ್ದ *ಒಬ್ಬನೇ ಕೃತ್ಯದಲ್ಲಿ ಭಾಗಿ
Last Updated 23 ಜನವರಿ 2020, 21:46 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್‌ನನ್ನು 10 ದಿನ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಬುಧವಾರ ರಾತ್ರಿ ವಿಚಾರಣೆ ನಡೆಸಿದ ಬಳಿಕ, ಗುರುವಾರ ವೆನ್ಲಾಕ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ನಗರದ 6 ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ಬಾಕಿ ಇರುವುದರಿಂದ ಆರೋಪಿಯನ್ನು ಪೊಲೀಸ್‌ ವಶಕ್ಕೆ ನೀಡುವಂತೆ ತನಿಖಾ ತಂಡದ ಎಸಿಪಿ ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶ ಕಿಶೋರ್‌ ಕುಮಾರ್‌ ಅವರು, ಈ ಆದೇಶ ಹೊರಡಿಸಿದರು.

ಸ್ಫೋಟಕದ ಕುರಿತು ವಿಪರೀತ ಜ್ಞಾನ: ‘ಆದಿತ್ಯರಾವ್ ಸುಧಾರಿತ ಸ್ಫೋಟಕ ತಯಾರು ಮಾಡಲು ತಿಂಗಳಿಂದಲೇ ಅಧ್ಯಯನ ಮಾಡಿದ್ದಾನೆ. ಯೂಟ್ಯೂಬ್‌ನಲ್ಲಿ ಸುಧಾರಿತ ಸ್ಫೋಟಕ ತಯಾರಿಕೆಗೆ ಬೇಕಾದ ಎಲ್ಲ ಮಾಹಿತಿ ಪಡೆದಿದ್ದಾನೆ. ಸ್ಫೋಟಕಗಳ ಕುರಿತು ವಿಪರೀತವಾದ ಜ್ಞಾನ ಆತನಲ್ಲಿದೆ’ ಎಂದು ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ ತಿಳಿಸಿದರು.

‘ಆತನ ಜತೆ ಯಾರೂ ಇರಲಿಲ್ಲ. ಒಬ್ಬನೇ ಕೃತ್ಯ ನಡೆಸಿರುವುದಾಗಿ ಸದ್ಯದ ತನಿಖೆಯಲ್ಲಿ ತಿಳಿದುಬಂದಿದೆ. ಬೆಂಗಳೂರಿನ ನಂತರ ಮಂಗಳೂರು ವಿಮಾನ ನಿಲ್ದಾಣವೇ ಆತನಿಗೆ ಹೆಚ್ಚು ಪರಿಚಿತವಾಗಿದ್ದರಿಂದ, ಇಲ್ಲಿ ಸ್ಫೋಟಕ ಇರಿಸಿದ್ದ ಎನ್ನುವುದು ಗೊತ್ತಾಗಿದೆ. ವಿಮಾನ ನಿಲ್ದಾಣದಲ್ಲಿ ಕೆಲಸ ಸಿಗದೇ ಇರುವುದಕ್ಕೆ ಪ್ರತೀಕಾರವಾಗಿ ವಿಮಾನ ನಿಲ್ದಾಣಗಳನ್ನೇ ಈತ ಗುರಿಯಾಗಿಸಿದ್ದಾನೆ’ ಎಂದು ತಿಳಿಸಿದರು.

ಕಾರ್ಕಳದಲ್ಲಿ ಅಂತಿಮ ರೂಪ: ‘ಮಂಗಳೂರಿನ ಹೋಟೆಲ್‌ನಲ್ಲಿ ಇದ್ದುಕೊಂಡೇ ಸ್ಫೋಟಕ ತಯಾರಿಕೆಯ ಮಾಹಿತಿ ಕಲೆ ಹಾಕಿದ್ದ ಆದಿತ್ಯರಾವ್‌, ನಂತರ ಕಾರ್ಕಳದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಇದೇ 19 ರಂದು ಕಾರ್ಕಳದ ಹೋಟೆಲ್‌ನ ರೂಮ್‌ನಲ್ಲಿ ಸ್ಫೋಟಕಕ್ಕೆ ಅಂತಿಮ ರೂಪ ನೀಡಿದ್ದ. ಅದು ಸರಿಯಾಗಿದೆ ಎನ್ನುವುದು ಮನವರಿಕೆ ಆಗಿದ್ದರಿಂದ ಇದೇ 20 ರಂದು ಕಾರ್ಕಳದಿಂದ ನಗರಕ್ಕೆ ಬಸ್‌ನಲ್ಲಿ ಬಂದು, ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿ ಪರಾರಿಯಾಗಿದ್ದ. ಸ್ಫೋಟಕಕ್ಕೆ ಟೈಮರ್‌ ಅಳವಡಿಸಿದ್ದಾಗಿಯೂ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಮಾಹಿತಿ ನೀಡಿದರು.

ಎರಡು ಪ್ರಕರಣ: ದೇಶದ ಆಂತರಿಕ ಭದ್ರತೆಗೆ ಧಕ್ಕೆ ತಂದಿರುವ ಆರೋಪದಡಿ ಒಂದು ಪ್ರಕರಣ ದಾಖಲಾಗಿದ್ದು, ವಿಮಾನಯಾನ ಸಂಸ್ಥೆಗೆ ಕರೆ ಮಾಡಿ, ಹುಸಿ ಬಾಂಬ್‌ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಕರಣ ದಾಖಲಾಗಿದೆ. ವಿಮಾನಯಾನ ಸಂಸ್ಥೆಯಿಂದ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.

ಬಿಡಿಡಿಎಸ್‌ ಕಾರ್ಯಾಚರಣೆ: ಸೋಮವಾರ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಯಾದ ನಂತರ ಸಂಪೂರ್ಣ ಕಾರ್ಯಾಚರಣೆಯನ್ನು ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್‌) ನಡೆಸಿದೆ. ಇದರಲ್ಲಿ ಪೊಲೀಸರ ಪಾತ್ರವಿಲ್ಲ’ ಎಂದು ಡಾ. ಹರ್ಷ ಸ್ಪಷ್ಟಪಡಿಸಿದರು.

ಖಚಿತ ಯೋಜನೆ ರೂಪಿಸಿದ್ದ ಆರೋಪಿ
ಮಂಗಳೂರು:
ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ವಿಮಾನ ನಿಲ್ದಾಣಗಳನ್ನೇ ಗುರಿಯಾಗಿಸುತ್ತಿದ್ದ ಆರೋಪಿ ಆದಿತ್ಯರಾವ್‌, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸುವ ಮೊದಲು ಖಚಿತ ಯೋಜನೆ ರೂಪಿಸಿದ್ದ ಎನ್ನುವುದು ತನಿಖೆಯಿಂದ ಸ್ಪಷ್ಟವಾಗಿದೆ.

ನಗರದ ಕುಡ್ಲ ಹೋಟೆಲ್‌ನಲ್ಲಿ ಇದ್ದುಕೊಂಡೇ ಸ್ಫೋಟಕ ತಯಾರಿಕೆಯ ಮಾಹಿತಿ ಸಂಗ್ರಹಿಸಿದ್ದ ಆರೋಪಿ, ಇದೇ 18 ರಂದು ಕಾರ್ಕಳಕ್ಕೆ ತೆರಳಿ ಕಿಂಗ್ಸ್‌ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಅಂದೂ ಆದಿತ್ಯರಾವ್‌ ‘23’ ಸಂಖ್ಯೆಯ ಟೊಪ್ಪಿಗೆ ಹಾಗೂ ಬಿಳಿ ಬಣ್ಣದ ಶರ್ಟ್‌ ಧರಿಸಿರುವುದು ಕಿಂಗ್ಸ್‌ಬಾರ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಫೋಟಕ ಸಿದ್ಧವಾಗಿರುವುದು ಮನವರಿಕೆಯಾಗಿದ್ದರಿಂದ ಇದೇ 20 ರಂದು ಬೆಳಿಗ್ಗೆ 5 ಗಂಟೆಗೆ ಕಾರ್ಕಳದ ಬಾರ್‌ನಿಂದ ಹೊರಟು ಬಂದಿದ್ದ. ಕಾರ್ಕಳದಿಂದ ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ಗೆ ಬಸ್‌ನಲ್ಲಿಯೇ ಬಂದಿದ್ದ ಆದಿತ್ಯರಾವ್‌, ಅಲ್ಲಿಂದ ಕೆಂಜಾರಿನವರೆಗೆ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದ್ದ. ಕೆಂಜಾರಿನ ಸಲೂನ್‌ಗೆ ತೆರಳಿ, ದೊಡ್ಡ ಬ್ಯಾಗ್ ಅನ್ನು ಅಲ್ಲಿಯೇ ಇಟ್ಟು, ಸ್ಫೋಟಕ ಇದ್ದ ಒಂದೇ ಬ್ಯಾಗ್‌ನೊಂದಿಗೆ ಆಟೊದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ.

‘ಸ್ಫೋಟಕ ಇರಿಸುವ ಬಗ್ಗೆ ಮೊದಲೇ ನಿರ್ಧರಿಸಿದ್ದ ಆರೋಪಿ, 3-4 ಬಾರಿ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಸ್ಫೋಟಕ ಇಡುವ ಜಾಗ, ತೆರಳಬೇಕಾದ ರೀತಿ ಇತ್ಯಾದಿಗಳ ಖಚಿತ ಯೋಜನೆ ರೂಪಿಸಿದ್ದ. ಸ್ಫೋಟಕ ಇಟ್ಟ ಬಳಿಕ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿದ್ದಾಗಿ ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರಿಗೆ ಕರೆ ಮಾಡಿ ಬೆದರಿಸಿದ್ದಾನೆ’ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ.

‘ಸ್ಫೋಟಕ ಇರಿಸಿದ ಬಳಿಕ ಶಿರಸಿ, ಶಿವಮೊಗ್ಗಕ್ಕೆ ತೆರಳಿದ್ದ. ಮಾಧ್ಯಮಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಫೋಟೊ ಪ್ರಸಾರವಾಗಿದ್ದರಿಂದ ಬೆಂಗಳೂರಿಗೆ ತೆರಳಿ ಶರಣಾಗಲು ತೀರ್ಮಾನಿಸಿದ್ದ. ಶಿವಮೊಗ್ಗದಿಂದ ಕೆಎಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಹೋಗಿದ್ದಾನೆ’ ಎಂದು ಮಾಹಿತಿ ನೀಡಿದರು.

ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಡಿಯೊ ವೈರಲ್‌
ಉಡುಪಿ:
ಬಾಂಬ್‌ ಇರಿಸುವ ಎರಡು ದಿನ ಮೊದಲು ಆದಿತ್ಯರಾವ್‌ ಕಾರ್ಕಳದ ಕಿಂಗ್ಸ್‌ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿವೆ.

ಈ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಬಾರ್‌ ಮಾಲೀಕ ಅಶೋಕ್‌ ಶೆಟ್ಟಿ, ‘ಜ.18ರಂದು ಆದಿತ್ಯರಾವ್‌ ಕೆಲಸ ಕೇಳಿಕೊಂಡು ಬಾರ್‌ಗೆ ಬಂದಿದ್ದ. ಈ ಸಂದರ್ಭ ಮ್ಯಾನೇಜರ್‌ ಆತನ ಪೂರ್ವಾಪರ ವಿಚಾರಿಸಿದಾಗ, ಮಂಗಳೂರಿನಲ್ಲಿ ವೇಯ್ಟರ್ ಆಗಿ ಕೆಲಸ ಮಾಡಿರುವ ಅನುಭವ ಇದೆ ಎಂದು ತಿಳಿಸಿದ್ದ. ಬಳಿಕ ಆದಿತ್ಯನ ಆಧಾರ್ ಕಾರ್ಡ್ ಪ್ರತಿ ಪಡೆದು ಕೆಲಸ ಕೊಡಲಾಗಿತ್ತು. 18ರಂದು ರಾತ್ರಿ 7ಕ್ಕೆ ಕೆಲಸಕ್ಕೆ ಹಾಜರಾಗಿದ್ದ ಆತ, 19ರಂದು ಪೂರ್ತಿ ಕೆಲಸ ಮಾಡಿ, 20ರಂದು ಬ್ಯಾಗ್ ಸಮೇತ ನಾಪತ್ತೆಯಾಗಿದ್ದ. ಹೋಗುವಾಗ 2 ಡಂಬಲ್ಸ್‌ಗಳನ್ನು ಮಲಗುವ ಕೋಣೆಯಲ್ಲಿಯೇ ಬಿಟ್ಟುಹೋಗಿದ್ದಾನೆ’ ಎಂದು ಅಶೋಕ್‌ ಶೆಟ್ಟಿ ತಿಳಿಸಿದರು.

ತನಿಖೆಯಲ್ಲಿ ಗೊಂದಲವಿಲ್ಲ: ಗೃಹ ಸಚಿವ
ದಾವಣಗೆರೆ:
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣದ ತನಿಖೆ ನಡೆಯುತ್ತಿದೆ. ಯಾವುದೇ ಗೊಂದಲವಿಲ್ಲ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಆರೋಪಿಯು ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಕೆ ನೀಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಮೊದಲ ಹಂತದ ತನಿಖೆ ಮುಗಿದಿದೆ. ನ್ಯಾಯಾಲಯದಿಂದ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ತನಿಖೆ ಮುಂದುವರಿಯಲಿದೆ ಎಂದು ಮಂಗಳೂರಿನ ಕಮಿಷನರ್‌ ಈಗಾಗಲೇ ಹೇಳಿದ್ದಾರೆ’ ಎಂದು ತಿಳಿಸಿದರು.

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೋದಾಗ ಬಿಜೆಪಿಯವರು ವಿರೋಧಿಸಿದ್ದರು. ಈಗ ಅವರೇ ಜಾರಿಗೆ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದರಲ್ಲಿ ತುಂಬಾ ಗೊಂದಲಗಳಿದ್ದವು. ಅವುಗಳನ್ನು ನಿವಾರಣೆ ಮಾಡಲಾಗಿದೆ. ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಕುಮಾರಸ್ವಾಮಿ ಹೇಳಿಕೆ ಬಗ್ಗೆ ಅವರನ್ನೇ ಕೇಳಿ. ಆರ್‌ಎಸ್‌ಎಸ್‌, ಬಜರಂಗದಳ ದೇಶಭಕ್ತಿಯ ಸಂಘಟನೆಗಳು. ಜನರು ಸಂಕಷ್ಟದಲ್ಲಿ ಇರುವಾಗ ಸೇವೆ ಮಾಡಿದ್ದಾರೆ. ಅಪಘಾತ, ನೆರೆ ಹಾವಳಿಯಾದಾಗ ಸೇವೆಯಿಂದ ದೇಶಕ್ಕೇ ಮಾದರಿಯಾಗಿದ್ದಾರೆ. ಈ ಸಂಘಟನೆಗಳನ್ನು ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸಿನಿಮಾ ನಿರ್ಮಾಣ!
ಬೆಂಗಳೂರು:
ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ.
‘ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ’ ಎಂಬ ಶೀರ್ಷಿಕೆಯನ್ನು ತುಳಸಿ ರಾಮ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ನೋಂದಣಿ ಮಾಡಿಸಿದ್ದಾರೆ.

‘ಈ ಚಿತ್ರದ ಚಿತ್ರೀಕರಣವು ಇನ್ನು ಎರಡರಿಂದ ಮೂರು ತಿಂಗಳಲ್ಲಿ ಆರಂಭವಾಗುತ್ತದೆ. ಬಿ.ಆರ್. ಕೇಶವ್ ಅವರು ಚಿತ್ರದ ನಿರ್ದೇಶನ ಮಾಡಲಿದ್ದಾರೆ’ ಎಂದು ತುಳಸಿ ತಿಳಿಸಿದರು.

**
ತಪ್ಪು ಮಾಡಿದವರಿಗೆ ಗುಂಡಿಕ್ಕಿ: ಶ್ರೀರಾಮುಲು
ಮೈಸೂರು:
‘ಸಮಾಜದಲ್ಲಿ ಶಾಂತಿ ಕದಡುವವರಿಗೆ ಗುಂಡಿಕ್ಕಬೇಕು. ಆಗ ಎಲ್ಲರಲ್ಲೂ ಭಯ ಮೂಡುತ್ತದೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಗುರುವಾರ ಇಲ್ಲಿ ಹೇಳಿದರು.

‘ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡು ದುಷ್ಕೃತ್ಯ ಎಸಗುತ್ತಿದ್ದಾರೆ. ಗಲಭೆಗಳು ಆದಾಗ ಅದನ್ನು ದುರುಪಯೋಗಪಡಿಸಿ ಬೆಂಕಿ ಹಚ್ಚುತ್ತಿದ್ದಾರೆ. ಅವರು ಯಾವುದೇ ಸಂಘಟನೆಗೆ ಸೇರಿರಲಿ, ಕಠಿಣ ಶಿಕ್ಷೆ ವಿಧಿಸಬೇಕು. ಒಂದಿಬ್ಬರು ತಪ್ಪಿತಸ್ಥರಿಗೆ ಗುಂಡಿಕ್ಕಿದರೆ ಸಮಾಜಘಾತುಕ ಶಕ್ತಿಗಳಲ್ಲಿ ಭಯ ಮೂಡುತ್ತದೆ’ ಎಂದು ಹೇಳಿದರು.

*
ಆರೋಪಿ ಆದಿತ್ಯ ರಾವ್ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತಂದಿದ್ದು, ಗಂಭೀರ ಪ್ರಕರಣಗಳನ್ನು ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ.
–ಡಾ.ಪಿ.ಎಸ್‌. ಹರ್ಷ, ನಗರದ ಪೊಲೀಸ್‌ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT