ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆ ಸಹಿತ ಬೋಧಕ ಸಿಬ್ಬಂದಿ ವರ್ಗಾವಣೆ!

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಕ್ರಮದ ವಾಸನೆ
Last Updated 8 ಜುಲೈ 2018, 19:36 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಕ್ರಮಗಳು ನಡೆದಿರುವ ಸಂಶಯಕ್ಕೆ ಪುಷ್ಟಿ ನೀಡುವಂತೆ, ಬೋಧಕ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಿಂದ ಹುದ್ದೆ ಸಮೇತ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಿರುವುದು ಗಮನಕ್ಕೆ ಬಂದಿದೆ.

ಅಷ್ಟೇ ಅಲ್ಲ, ವಿವಿಯಲ್ಲಿ ಬೋಧಕೇತರ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ನೇರ ನೇಮಕಾತಿ ಮಾಡಿಕೊಂಡಿರುವುದು, ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡುವ ಸಂದರ್ಭದಲ್ಲಿ ಅಂಕಗಳ ತಿದ್ದುಪಡಿ ಮಾಡಿರುವುದು ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.

ವಿವಿ ಅಧೀನ ಘಟಕ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಪದವಿ ಶಿಕ್ಷಣ ನೀಡುವುದು ವಿವಿಯ ಜವಾಬ್ದಾರಿ. ಘಟಕ ಕಾಲೇಜುಗಳ ಉಪನ್ಯಾಸಕರನ್ನು ವಿವಿ ಹುದ್ದೆ ಸಮೇತ ವರ್ಗಾವಣೆ ಮಾಡಿರುವುದರಿಂದ ಘಟಕ ‌ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ‘ಹುದ್ದೆ ಸಮೇತ ಬೋಧಕರನ್ನು ವಿವಿಗೆ ಕರೆಸಿಕೊಂಡಿದ್ದು, ಅವರಿಗೆ ಆಡಳಿತ ವ್ಯವಸ್ಥೆಯ ಹೊಣೆಗಾರಿಕೆ ನೀಡಲಾಗಿದೆ. ಇದು ಶೈಕ್ಷಣಿಕ ಚಟುವಟಿಕೆಗೆ ಮಾಡಿರುವ ಅನ್ಯಾಯವಾಗಿದೆ’ ಎಂದು ಹಿರಿಯ ಪ್ರಾಧ್ಯಾಪಕರು ಅಭಿಪ್ರಾಯಪಡುತ್ತಾರೆ.

ವಿವಿಯಲ್ಲಿ ತೀವ್ರ ಸಿಬ್ಬಂದಿಯ ಕೊರತೆ ಇದ್ದು, ಬೋಧಕ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡುವ ಅವಕಾಶ ಇದೆ. ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆಬೋಧಕೇತರ ಸಿಬ್ಬಂದಿ ಪೈಕಿ ಹಲವರನ್ನು ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳದೇ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ‘ಇದು ವಿವಿಯೊಳಗೆ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯ ಅಸಮಾಧಾನಕ್ಕೂ ಕಾರಣವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

2002 ಮತ್ತು 2013ರಲ್ಲಿ ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನಡೆದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಇತ್ತೀಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಸದಸ್ಯರಾಗಿದ್ದ ಹರೀಶ್‌ ಆಚಾರ್ಯ ಅವರು ಕಾರ್ಯಸೂಚಿ ಮಂಡಿಸಿ, ನೇಮಕಾತಿ ಪ್ರಕ್ರಿಯೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಅಲ್ಲದೆ ನೇಮಕಾತಿ ಪ್ರಕ್ರಿಯೆಯ ಅಕ್ರಮದ ವಿರುದ್ಧ ತನಿಖೆ ನಡೆಸುವಂತೆ ರಾಜ್ಯಪಾಲರು ಮತ್ತು ಶಿಕ್ಷಣ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಗಿತ್ತು.

‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳನ್ನು ಗಮನಿಸಿದಾಗ,ಅಂಕಗಳ ತಿದ್ದುಪಡಿ, ಬೋಧನೆಯ ಅನುಭವದ ಕೊರತೆಯಿದ್ದರೂ ರಿಯಾಯಿತಿ ನೀಡಿರುವುದು ಗಮನಕ್ಕೆ ಬರುತ್ತದೆ. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಅರ್ಜಿ ಮತ್ತು ನೇಮಕಾತಿ ಪ್ರಕ್ರಿಯೆ ನಿರ್ವಹಿಸಿದ ಕಡತವೇ ವಿಶ್ವವಿದ್ಯಾಲಯದಲ್ಲಿ ಲಭ್ಯವಿಲ್ಲ ಎಂಬ ಮಾಹಿತಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರಬಹುದಾದ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.

ಪ್ರಾಧ್ಯಾಪಕರ ಹುದ್ದೆಗೆ 10 ವರ್ಷಗಳ ಬೋಧನೆಯ ಅನುಭವ, ಅತ್ಯುತ್ತಮ ಸಂಶೋಧನೆಯ ಹಿನ್ನೆಲೆ ವಿಶ್ವವಿದ್ಯಾಲಯ ಅಥವಾ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಅನುಭವ ಸೇರಿದಂತೆ ರಾಷ್ಟ್ರಮಟ್ಟದ ಸಂಸ್ಥೆಯಲ್ಲಿ ಸಂಶೋಧನೆ ಮಾಡಿದ ಅನುಭವ ಇರಬೇಕು ಎಂದು ನೇಮಕಾತಿ ಅಧಿಸೂಚನೆ ಮತ್ತು ಯುಜಿಸಿ ನಿಯಮಾವಳಿ ವಿವರಿಸುತ್ತದೆ.2002ರಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವ ಡಾ.ವಿಶ್ವನಾಥ್‌, ಮಾನಸ ಗಂಗೋತ್ರಿಯಲ್ಲಿ 8 ವರ್ಷ ಮಾತ್ರ ಕಾಯಂ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಸಂದರ್ಶನದ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯ ಸಂದರ್ಶನದ ಅಂಕಗಳನ್ನು, ಬೋಧನಾ ಅನುಭವದ ಅಂಕಗಳನ್ನು ತಿದ್ದಿ ಕಡಿಮೆ ನಮೂದಿಸಲಾಗಿದೆ. ಈ ಅಕ್ರಮದ ಬಗ್ಗೆ ಚರ್ಚೆಗೆ ಮುಂದಾದ ಸಿಂಡಿಕೇಟ್‌ ಸದಸ್ಯರಿಗೆ ಸ್ಪರ್ಧಿಯ ಅರ್ಜಿ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ನಿರ್ವಹಿಸಿದ ಕಡತ ವಿವಿ ಬಳಿ ಇಲ್ಲ ಎಂಬ ಉತ್ತರ ಅಚ್ಚರಿ ಮೂಡಿಸುವಂತಿದೆ.

ನೇಮಕಾತಿ ಆದ ನಾಲ್ಕು ವರ್ಷದೊಳಗೆ ಒಬ್ಬರು ಸಂಶೋಧನಾ ವಿದ್ಯಾರ್ಥಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಬೇಕು ಎಂಬ ಷರತ್ತು ಉಲ್ಲೇಖಿಸಿ ವಿಶ್ವನಾಥ್‌ ಅವರಿಗೆ ನೇಮಕಾತಿ ಆದೇಶನೀಡಿರುವುದು ಆದೇಶದ ಬಗ್ಗೆಯೇ ಸಂಶಯಗಳನ್ನು ಮೂಡಿಸುತ್ತಿವೆ. ಅಲ್ಲದೆ 1999ರ ಡಿಸೆಂಬರ್‌ನಲ್ಲಿ ಪಿಎಚ್‌.ಡಿ. ಮುಗಿಸಿರುವ ವಿಶ್ವನಾಥ್‌ 1999ರಿಂದಲೇ ಪಿಎಚ್‌.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದಾಗಿ ಮಾಹಿತಿ ಲಗತ್ತಿಸಿದ್ದಾರೆ.

ಯೋಗ ಮತ್ತು ಮಾನವಿಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಶರ್ಮ ಅವರ ಕೊಠಡಿಯಲ್ಲಿ ಡಾ. ಶಾಮಸುಂದರ್‌ ಮತ್ತು ಡಾ. ಕೃಷ್ಣ ಶರ್ಮ ನಡುವೆ ನಡೆದ ವಾಗ್ವಾದ, ಗಲಾಟೆಯು ಸಿಸಿಟಿವಿ ಫೂಟೇಜ್‌ ಪ್ರಾಧ್ಯಾಪಕ ಹುದ್ದೆಯ ಗೌರವಕ್ಕೆ ಧಕ್ಕೆ ತರುವಂತಿದೆ. ‘ಪ್ರಜಾವಾಣಿ’ಗೆ ಲಭ್ಯ ಇರುವ ಸಿಸಿಟಿವಿ ಫೂಟೇಜ್‌ನಲ್ಲಿಉನ್ನತ ಸ್ಥಾನದ ಅಧ್ಯಾಪಕರು ಕೂಡ ಕೀಳು ಸಂಭಾಷಣೆಯನ್ನು ಬಳಸಿರುವುದು ಕಂಡು ಬಂದಿದ್ದು, ಪ್ರಾಧ್ಯಾಪಕರ ಮೇಲಿನ ಗೌರವ ಕಡಿಮೆ ಮಾಡುವಂತಿದೆ. ಈ ಎಲ್ಲ ವಿಷಯಗಳು ಆಡಳಿತದ ಗಮನಕ್ಕೆ ಬಂದರೂ ಇದುವರೆಗೆ ಯಾವುದೇ ಕ್ರಮ ಜರುಗಿದ ನಿದರ್ಶನ ಇಲ್ಲ.

ಈ ವಿವಾದದ ಕುರಿತು ಮಾಧ್ಯಮದ ಜತೆ ಮಾತನಾಡಲು ವಿಶ್ವವಿದ್ಯಾಲಯದ ಕುಲಸಚಿವರ ಪ್ರೊ.ನಾಗೇಂದ್ರ ಪ್ರಕಾಶ್‌ ಮತ್ತು ಹಾಲಿ ಸಿಂಡಿಕೇಟ್‌ ಸದಸ್ಯ ಅಶೋಕ್‌ ಕುಮಾರ್ ರೈ ನಿರಾಕರಿಸಿದ್ದಾರೆ.

ಅಕ್ರಮಗಳ ತನಿಖೆ ಅಗತ್ಯ

2002 ಮತ್ತು 2013ರಲ್ಲಿ ನಡೆದ ಬ್ಯಾಕ್‌ಲಾಗ್‌ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದರಲ್ಲಿ ಸಂಶಯವಿಲ್ಲ. ಈ ಕುರಿತು ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ವಿವಿ ಆಡಳಿತವು ಅಕ್ರಮಗಳ ಕಡೆಗೆ ಕಣ್ಣುಮುಚ್ಚಿ ಕುಳಿತಿರುವುದು ಬೇಸರದ ಸಂಗತಿ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಿಂಡಿಕೇಟ್‌ ಮಾಜಿ ಸದಸ್ಯ ಹರೀಶ್‌ ಆಚಾರ್ಯ ಹೇಳಿದ್ದಾರೆ.

* ಹುದ್ದೆಗಳ ನೇಮಕಾತಿ ಕುರಿತು ಸಿಂಡಿಕೇಟ್‌ ಸಭೆಯಲ್ಲಿ ವಿವರವಾದ ಚರ್ಚೆ ನಡೆದಿತ್ತು. ಅಕ್ರಮಗಳ ತನಿಖೆ ನಡೆಸುವಂತೆ ಪತ್ರ ಬರೆಯಲು ಸಿಂಡಿಕೇಟ್‌ನಲ್ಲಿ ಅಂಗೀಕರಿಸಲಾಗಿತ್ತು

–ಪ್ರಸನ್ನ ಕುಮಾರ್‌ ರೈ, ಸಿಂಡಿಕೇಟ್‌ ಮಾಜಿ ಸದಸ್ಯ

ಮುಖ್ಯಾಂಶಗಳು

* ನಿಯಮಗಳೇ ಬೇರೆ, ಆಗಿರುವುದೇ ಬೇರೆ

* ಅನ್ಯಾಯಕ್ಕೊಳಗಾದ ಅಭ್ಯರ್ಥಿಯ ಅರ್ಜಿಯೇ ನಾಪತ್ತೆ

* ಬೋಧಕೇತರ ಸಿಬ್ಬಂದಿ–ಏಜೆನ್ಸಿ ಬದಲಿಗೆ ನೇರ ನೇಮಕಾತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT