ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯ ಕುರಿತಂತೆ ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.
ಮಂಗಳವಾರ ಬೆಳಗ್ಗೆ ದಿನದ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ವಿಷಯಕ್ಕೆ ಸಂಬಂಧಿಸಿದಂತೆ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿಯನ್ನು ಮುಕ್ತ ನ್ಯಾಯಾಲಯದಲ್ಲಿ ಉಲ್ಲೇಖಿಸಿತು.
‘ರಾಜ್ಯದಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಮತ್ತು 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ. ಇದೊಂದು ಬಹುಮುಖ್ಯ ಸಾರ್ವಜನಿಕ ಹಿತಾಸಕ್ತಿಯ ವಿಚಾರ. ಹಾಗಾಗಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ಆಲಿಸಲಾಗುವುದು’ ಎಂದು ತಿಳಿಸಿತು. ಅಂತೆಯೇ, ‘ಈ ಪ್ರಕರಣದಲ್ಲಿ ವಕೀಲ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ. ಇವರಿಗೆ ಮತ್ತೊಬ್ಬ ಹೈಕೋರ್ಟ್ ವಕೀಲರಾದ ಬಿ.ವಚನ್ ಸಹಾಯ ಮಾಡಲಿದ್ದಾರೆ’ ಎಂದೂ ಆದೇಶಿಸಿತು.
ಪ್ರಕರಣವೇನು?:
'ಭಾರತೀಯ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ ಒಕ್ಕೂಟವು (ಎಫ್ಐಸಿಸಿಐ) ಕಳೆದ ಸೆಪ್ಟೆಂಬರ್‌ನಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 16,500 ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ' ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂತೆಯೇ, ‘723 ಎಂಬಿಬಿಎಸ್ ಪದವೀಧರ ವೈದ್ಯರು, 7,492 ನರ್ಸ್‌ಗಳು, 1,517 ಲ್ಯಾಬ್ ಟೆಕ್ನೀಶಿಯನ್ಸ್, 1,512 ಫಾರ್ಮಾಸಿಸ್ಟ್‌ಗಳು, 1,752 ಸಹಾಯಕರು ಮತ್ತು 3,253 ʼಡಿʼ ಗ್ರೂಪ್ ಸಿಬ್ಬಂದಿ ಹುದ್ದೆಗಳೂ ಈ ಕೊರತೆ ಪಟ್ಟಿಯಲ್ಲಿ ಸೇರಿವೆ’ ಎಂದೂ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.