ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹಿಗಳ ಪರ ನಿಂತ ಕಾಂಗ್ರೆಸ್‌ -ಅಶ್ವತ್ಥನಾರಾಯಣ

‘ಟಿಪ್ಪು ನಿಜಕನಸುಗಳು‘ ನಾಟಕ ವೀಕ್ಷಣೆ;ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅಭಿಮತ
Last Updated 16 ಜನವರಿ 2023, 12:59 IST
ಅಕ್ಷರ ಗಾತ್ರ

ಮಂಡ್ಯ: ‘ದೇಶದ್ರೋಹಿಗಳ ಪರವಾಗಿ ಕಾಂಗ್ರೆಸ್ ನಿಂತಿದೆ. ಆದರೆ ಇತಿಹಾಸ ಯಾವತ್ತಾದರೂ ಮರುಕಳಿಸಬೇಕು. ಈಗ ಅದು ‘ಟಿಪ್ಪು ನಿಜಕನಸುಗಳು’ ನಾಟಕದ ಮೂಲಕ ಕಾಣುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮೈಸೂರು ರಂಗಾಯಣದ ವತಿಯಿಂದ ಪ್ರದರ್ಶನಗೊಂಡ ‘ಟಿಪ್ಪು ನಿಜಕನಸುಗಳು’ ಎಂಬ ನಾಟಕ ವೀಕ್ಷಿಸಿ ಅವರು ಮಾತನಾಡಿದರು.

‘ಹಳೇ ಮೈಸೂರು ಭಾಗದಲ್ಲಿ ಟಿಪ್ಪು ತನ್ನ ಆಡಳಿತದ ಅವಧಿಯಲ್ಲಿ ಅಮಾಯಕರ ಪ್ರಾಣ ತೆಗೆದಿದ್ದಾನೆ. ಅಷ್ಟು ಮಾತ್ರವಲ್ಲದೆ ಲಕ್ಷಾಂತರ ಜನರನ್ನು ಮತಾಂತರ ಮಾಡಿರುವುದು ಸಾಬೀತಾಗಿದೆ. ಇತಿಹಾಸವನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ಜನರಿಗೆ ಸತ್ಯ ಗೊತ್ತಾಗುತ್ತದೆ. ಇಷ್ಟ ವರ್ಷ ಕಾಂಗ್ರೆಸ್‌ ಪಕ್ಷ ಸತ್ಯವನ್ನು ಮುಚ್ಚಿಟ್ಟುಕೊಂಡೇ ಬಂದಿದೆ’ ಎಂದರು.

‘ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸತ್ಯವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ‘ಟಿಪ್ಪು ನಿಜ ಕನಸುಗಳು’ ನಾಟಕದ ಮೂಲಕ ಸತ್ಯವನ್ನು ಬಯಲು ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಾಂಗ್ರೆಸ್‌ನವರು ಈಗಲೂ ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ. ಪಿಎಫ್ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಜನರು ಮುಂದೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ಸ್ಯಾಂಟ್ರೋ ರವಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ‘ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏನು ಮಾಡಿದರೂ ಅನುಮಾನವೇ ಆಗಿರುತ್ತದೆ. ಸತ್ಯವನ್ನು ಬಯಲು ಮಾಡಿ ತಪ್ಪಿತಸ್ಥನನ್ನು ನಮ್ಮ ಸರ್ಕಾರ ಬಂಧಿಸಿದೆ. ಗೃಹ ಇಲಾಖೆ ಅಧಿಕಾರಿಗಳು ಚಾಣಾಕ್ಷತನದಿಂದ ಕೆಲಸ ಮಾಡಿದ್ದಾರೆ. ಇದರಲ್ಲಿ ಅನುಮಾನ ಪಡುವುದು ಏನೂ ಇಲ್ಲ. ಈವರೆಗೆ ಬಂಧನವಾಗಿಲ್ಲವೆನ್ನುತ್ತಿದ್ದರು, ಆದರೀಗ ಇನ್ನೊಂದು ರೀತಿ ಮಾತನಾಡುತ್ತಿದ್ದಾರೆ. ನಾವು ಸತ್ಯ ಮತ್ತು ನ್ಯಾಯದ ಪರ ಇದ್ದೇವೆ’ ಎಂದರು.

‘ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ವಹಿಸುತ್ತೇವೆ, ಗೃಹ ಸಚಿವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಹಿಂದಿನ ಸರ್ಕಾರದವರು ಪಿಎಸ್ಐ ಹಗರಣ ಮಾಡಿದ್ದರು, ಕ್ರಮ ವಹಿಸಿದ್ದು ನಮ್ಮ ಗೃಹ ಸಚಿವರು. ಯಾರು ಯಾರನ್ನೂ ಹಿಡಿದಿಟ್ಟುಕೊಂಡಿಲ್ಲ. ಏನು ಬೇಕಾದರೂ ಮುಕ್ತವಾಗಿ ತಿಳಿಸಬಹುದು. ಇದು ಪ್ರಜಾಪ್ರಭುತ್ವ. ಕಾನೂನು ದೊಡ್ಡದು, ಕಾನೂನು ಪಾಲನೆ ಮಾಡುವುದು ನಮ್ಮ ಕರ್ತವ್ಯ’ ಎಂದರು.

ಜಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಉಮೇಶ್, ಮನ್‌ಮುಲ್‌ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡ ಇಂಡುವಾಳು ಸಚ್ಚಿದಾನಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT