ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ 16,700ಕ್ಕೂ ಹೆಚ್ಚು ಜೌಗು ಭೂಮಿ ತಾಣ: ಈಶ್ವರ ಖಂಡ್ರೆ

ಜೌಗು ಭೂಮಿ ಪ್ರಾಧಿಕಾರದ ವೆಬ್‌ಸೈಟ್ ಉದ್ಘಾಟನೆ
Published 6 ಮಾರ್ಚ್ 2024, 15:24 IST
Last Updated 6 ಮಾರ್ಚ್ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ 2.25 ಹೆಕ್ಟೇರ್‌ಗಿಂತ ಹೆಚ್ಚು ವ್ಯಾಪ್ತಿಯ ಕೆರೆ, ಕುಂಟೆಗಳನ್ನು ಜೌಗು ಭೂಮಿಯೆಂದು ಗುರುತಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಇಂತಹ 16,700ಕ್ಕೂ ಹೆಚ್ಚು ತಾಣಗಳನ್ನು ಗುರುತಿಸಲಾಗಿದೆ. ಸಂಬಂಧಿಸಿದ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅನುಮತಿ ಪಡೆದು ಈ ತಾಣಗಳನ್ನು ಅಧಿಕೃತವಾಗಿ ಜೌಗು ಭೂಮಿ ಪ್ರದೇಶ ಎಂದು ಘೋಷಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕರ್ನಾಟಕ ಚೌಗು ಭೂಮಿ ಪ್ರಾಧಿಕಾರದ (ವೆಟ್ ಲ್ಯಾಂಡ್ ಅಥಾರಿಟಿ) ಅಂತರ್ಜಾಲ ತಾಣಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ 2017ರಲ್ಲಿ ಜೌಗು ಪ್ರದೇಶ ಘೋಷಣೆ ಮತ್ತು ಅಭಿವೃದ್ದಿಗೆ ಮಾನದಂಡಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಈವರೆಗೆ ರಾಜ್ಯದಲ್ಲಿ ಜೌಗು ಭೂಮಿಯ ಅಧಿಕೃತ ಪ್ರಕಟಣೆ ಆಗಿಲ್ಲ. ಹೀಗಾಗಿ, ತಜ್ಞರ ತಂಡ ರಚಿಸಿ, ತಕ್ಷಣ ಜೌಗು ಭೂಮಿ ಪ್ರಾಧಿಕಾರವನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ’ ಎಂದರು.

‘ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರಿಗೆ ಜೌಗು ಪ್ರದೇಶ ಘೋಷಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ, ಕಾಯ್ದೆ, ನಿಯಮ ನಿಬಂಧನೆಗಳ ಕುರಿತಂತೆ ಮಾಹಿತಿ ನೀಡಲಾಗುವುದು. ಅಲ್ಲದೆ, ಜೌಗು ಭೂಮಿಯಲ್ಲಿ ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು’ ಎಂದರು.

‘ರಾಜ್ಯದಲ್ಲಿ ನಾಲ್ಕು ತಾಣಗಳನ್ನು ರಾಮ್ಸರ್ ತಾಣಗಳೆಂದು ಘೋಷಿಸಲಾಗಿದೆ. ಅದೇ ರೀತಿ ನಾವು ಜೌಗು ಭೂಮಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಜೌಗು ಭೂಮಿ ಪ್ರದೇಶ ಮಾಡಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT