ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1

Published 9 ಆಗಸ್ಟ್ 2023, 9:30 IST
Last Updated 9 ಆಗಸ್ಟ್ 2023, 9:30 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಆನೆ ಗಣತಿ ವರದಿ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 6,395 ಆನೆಗಳಿವೆ. ಹುಲಿ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕವು, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '2017ರ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದವು. ಈ ವರ್ಷ 6,395 ಆನೆಗಳಿರುವುದು ಗಣತಿಯಲ್ಲಿ ಪತ್ತೆಯಾಗಿದೆ. ಆನೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ' ಎಂದರು.

2023ರ ಮೇ 17ರಿಂದ ಮೇ 19ರವರೆಗೆ ಮೂರು ದಿನಗಳ ಕಾಲ ರಾಜ್ಯದ 32 ವಿಭಾಗಗಳಲ್ಲಿ ಆನೆ ಗಣತಿ ನಡೆಸಲಾಗಿದೆ. ಸುಮಾರು 3,400 ಅಧಿಕಾರಿಗಳು, ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

32 ವಿಭಾಗಗಳ ಪೈಕಿ 23 ವಿಭಾಗಗಳಲ್ಲಿ ಗಣತಿ ಸಮಯದಲ್ಲಿ ನೇರವಾಗಿ ಆನೆಗಳು ಕಂಡುಬಂದಿವೆ. 2,219 ಆನೆಗಳನ್ನು ನೇರವಾಗಿ ಗುರುತಿಸಲಾಗಿದೆ ಎಂದರು.

ತಂತ್ರಾಂಶ ಅಳವಡಿಕೆ

ಅರಣ್ಯ ಇಲಾಖೆಯ ಆಡಳಿತ ನಿರ್ವಹಣೆಗೆ ಸಂಪೂರ್ಣ ತಂತ್ರಾಂಶ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಡಳಿತ ನಿರ್ವಹಣೆ, ನಾಗರಿಕರಿಗೆ ಸ್ಪಂದನೆ ಮತ್ತು ಅರಣ್ಯ ಜಮೀನು ಹಾಗೂ ಇತರ ಸಂಪನ್ಮೂಲದ ನಿರ್ವಹಣೆಗೆ ಪ್ರತ್ಯೇಕ ತಂತ್ರಾಂಶಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಂಜಯ್ ಕುಮಾರ್ ನೇತೃತ್ವದ ಪರಿಶೀಲನಾ ಸಮಿತಿ ನೇಮಿಸಿದೆ. ಆ ಸಮಿತಿ ವರದಿ ಸಲ್ಲಿಕೆಯಾದ ಬಳಿಕ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಅರಣ್ಯ ಮತ್ತು ಪರಿಸರದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಎರಡೂ ಸರ್ಕಾರದ ಆದ್ಯತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT