ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಸುತ್ತಿನಲ್ಲಿ ‘ಮಿಷನ್ ಇಂದ್ರಧನುಷ್’: ಸಚಿವ ದಿನೇಶ್ ಗುಂಡೂರಾವ್

5 ವರ್ಷದೊಳಗಿನ 1.65 ಲಕ್ಷ ಮಕ್ಕಳು ಫಲಾನುಭವಿಗಳು, ದಡಾರ, ರುಬೆಲ್ಲಾ ನಿರ್ಮೂಲನೆಗೆ ಕ್ರಮ
Published 5 ಆಗಸ್ಟ್ 2023, 15:41 IST
Last Updated 5 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ಇದೇ 7ರಿಂದ ಮೂರು ಸುತ್ತುಗಳಲ್ಲಿ ರಾಜ್ಯದಾದ್ಯಂತ ‘ಮಿಷನ್ ಇಂದ್ರಧನುಷ್ 5.0’ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಬಲಪಡಿಸಲು ಜಿಲ್ಲೆಗಳನ್ನು ವರ್ಗೀಕರಣ ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಶನಿವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅಭಿಯಾನದಡಿ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ, ರುಬೆಲ್ಲಾ ಲಸಿಕೆ ಸೇರಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿನ ಎಲ್ಲಾ ಲಸಿಕೆಗಳನ್ನು ನೀಡಲಾಗುತ್ತದೆ. 5 ವರ್ಷದೊಳಗಿನ 1.65 ಲಕ್ಷ ಮಕ್ಕಳು ಹಾಗೂ 32,917 ಗರ್ಭಿಣಿಯರು ಫಲಾನುಭವಿಗಳಾಗಿದ್ದಾರೆ. ಹೆಚ್ಚಿನ ಅಪಾಯ, ಮಧ್ಯಮ ಅಪಾಯ ಹಾಗೂ ಕಡಿಮೆ ಅಪಾಯ ಎಂದು ಜಿಲ್ಲೆಗಳನ್ನು ವಿಂಗಡಿಸಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ 1.03 ಲಕ್ಷ ಮಕ್ಕಳು ಹಾಗೂ 19,797 ಗರ್ಭಿಣಿಯರು ಹೆಚ್ಚಿನ ಅಪಾಯದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ’ ಎಂದು ಹೇಳಿದರು. 

‘ಆ.7ರಿಂದ 12, ಸೆ.11ರಿಂದ 16 ಹಾಗೂ ಅ.9ರಿಂದ 14ರವರೆಗೆ ಈ ಲಸಿಕಾ ಅಭಿಯಾನ ನಡೆಯಲಿದೆ. ಫಲಾನುಭವಿಗಳು ‘U-WIN’ ಪೋರ್ಟಲ್ ಮೂಲಕ ಲಸಿಕಾಕರಣಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಲಸಿಕೆ ಪಡೆದ ಬಳಿಕ ‘ಇ ಪ್ರಮಾಣ ಪತ್ರ’ವನ್ನೂ ನೀಡಲಾಗುತ್ತದೆ. ಅಭಿಯಾನದಲ್ಲಿ ಅಭಿವೃದ್ಧಿ ಹೊಂದದ ಪ್ರದೇಶಗಳು, ಸಾರ್ವತ್ರಿಕ ಲಸಿಕಾ ಅಭಿಯಾನ ನಡೆಯದ ಹಳ್ಳಿಗಳು, ವಲಸಿಗರು ಇರುವ ನಗರ ಪ್ರದೇಶ, ಅಲೆಮಾರಿಗಳು ವಾಸಿಸುವ ಪ್ರದೇಶಗಳು, ಮೀನುಗಾರರು ವಾಸಿಸುವ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಸಾಂಕ್ರಾಮಿಕ ರೋಗಗಳು ವರದಿಯಾದ ಪ್ರದೇಶ ಸೇರಿ ಹೆಚ್ಚಿನ ಅಪಾಯದಲ್ಲಿರುವ ಪ್ರದೇಶಗಳನ್ನು ಕೇಂದ್ರೀಕರಿಸಲಾಗುತ್ತದೆ’ ಎಂದರು. 

‘ಬಾಗಲಕೋಟೆ, ಬಳ್ಳಾರಿ, ಬಿಬಿಎಂಪಿ, ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯನ್ನು ಹೆಚ್ಚಿನ ಅಪಾಯದ ಜಿಲ್ಲೆಗಳೆಂದು ಗುರುತಿಸಲಾಗಿದೆ’ ಎಂದು ಹೇಳಿದರು. 

‘ಔಷಧ ಪೂರೈಕೆ ಸಮಸ್ಯೆ ನಿವಾರಣೆ’

‘ಸರ್ಕಾರಿ ಆಸ್ಪತ್ರೆಗಳಲ್ಲಿ ಪದೇ ಪದೇ ಔಷಧಗಳ ಕೊರತೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಔಷಧ ಪೂರೈಕೆಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ (ಕೆಎಸ್‌ಎಂಎಸ್‌ಸಿಎಲ್‌) ಪುನಃಶ್ಚೇತನ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಾರ್ಷಿಕ ಟೆಂಡರ್ ಬದಲಿಗೆ ಎರಡು ವರ್ಷಕ್ಕೊಮ್ಮೆ ಟೆಂಡರ್ ಕರೆಯಲಾಗುವುದು. ಔಷಧ ಪೂರೈಕೆ ಪ್ರಕ್ರಿಯೆಯಲ್ಲಿ ಕೆಲ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು’ ಎಂದು ದಿನೇಶ್ ಗುಂಡೂರಾವ್ ಹೇಳಿದರು. ‘ಆಂಬುಲೆನ್ಸ್ ವ್ಯವಸ್ಥೆ ಸರಿಪಡಿಸಲು ಅಗತ್ಯ ಸಲಹೆ ಕೋರಿ ತಾಂತ್ರಿಕ ಸಮಿತಿ ರಚಿಸಲಾಗಿದ್ದು ಸಮಿತಿ ವರದಿ ಆಧರಿಸಿ ಇನ್ನೆರಡು ತಿಂಗಳಲ್ಲಿ ಆಂಬುಲೆನ್ಸ್ ಟೆಂಡರ್ ಕರೆಯಲಾಗುತ್ತದೆ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಸಂಭವಿಸಿದ ಆಮ್ಲಜನಕದ ದುರಂತದ ಬಗ್ಗೆ ನ್ಯಾಯಾಂಗ ದ್ವಿಸದಸ್ಯ ಪೀಠದ ಅಡಿಯಲ್ಲಿ ಮರುತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT