ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರೇವಣ್ಣ ಜಾಮೀನು ಆದೇಶ 20ಕ್ಕೆ

ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪ l ವಿಶೇಷ ನ್ಯಾಯಾಲಯದಲ್ಲಿ ತುರುಸಿನ ವಾದ – ಪ್ರತಿವಾದ
Published 17 ಮೇ 2024, 19:10 IST
Last Updated 17 ಮೇ 2024, 19:10 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಮಧ್ಯ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣ ದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಅರ್ಜಿಯು, ‘ಪರಿಶೀಲನೆಗೆ ಅರ್ಹವೊ ಅಲ್ಲವೋ’ (ಮೆಂಟೇನೆಬಿಲಿಟಿ) ಎಂಬ ಆಕ್ಷೇ‍ಪದ ಮೇಲಿನ ಆದೇಶವನ್ನು ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯ ಇದೇ 20ಕ್ಕೆ ಪ್ರಕಟಿಸಲಿದೆ. ಅಲ್ಲಿಯವರೆಗೂ ರೇವಣ್ಣ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಮುಂದುವರೆಯಲಿದೆ.

ರೇವಣ್ಣ ವಿರುದ್ಧ ದಾಖಲಾಗಿರುವ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದ ಪ್ರಕರಣ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ (42ನೇ ಎಸಿಎಂಎಂ ಕೋರ್ಟ್‌) ವಿಶೇಷ
ನ್ಯಾಯಾಲಯದಲ್ಲಿ ಶುಕ್ರವಾರಕ್ಕೆ (ಮೇ 17) ವಿಚಾರಣೆಗೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರೇವಣ್ಣ ಗುರುವಾರವೇ (ಮೇ 16) ನ್ಯಾಯಾಲಯಕ್ಕೆ ಶರಣಾಗಿ ಅಪರಾಧ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 436 ಅಡಿಯಲ್ಲಿ (ಜಾಮೀನು ಕೊಡಬಹುದಾದ ಅಪರಾಧಗಳಲ್ಲಿ, ಆರೋಪಿಯು ಸಲ್ಲಿಸುವ ಜಾಮೀನು ಅರ್ಜಿ) ಮಧ್ಯಂತರ ಜಾಮೀನು ಕೋರಿದ್ದರು. 

ಈ ಅರ್ಜಿ ಸಲ್ಲಿಸಿದ ಕೂಡಲೇ ಪ್ರಾಸಿಕ್ಯೂಷನ್‌ ತಕರಾರು ತೆಗೆದಿತ್ತು. ‘ಈ ಜಾಮೀನು ಅರ್ಜಿಯನ್ನು ಪರಿಶೀಲಿಸಿ ಜಾಮೀನು ಮಂಜೂರು ಮಾಡುವ ಅಧಿಕಾರವನ್ನು ಈ ಕೋರ್ಟ್‌ ಹೊಂದಿಲ್ಲ. ಇದನ್ನು ಸೆಷನ್ಸ್ ಕೋರ್ಟ್‌ಗೇ
(ಸಿಸಿಎಚ್‌–82) ಕಳುಹಿಸಬೇಕು’ ಎಂದು ಪ್ರತಿಪಾದಿ ಸಿತ್ತು. ಅಂತಿಮವಾಗಿ ನ್ಯಾಯಾಧೀಶೆ ಜೆ.ಪ್ರೀತ್ ಗುರುವಾರ (ಮೇ 16) ಸಂಜೆಯೇ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರು.

ರೇವಣ್ಣ ಪರ ವಕೀಲರು ಪ್ರಾಸಿಕ್ಯೂಷನ್‌ ಆಕ್ಷೇಪಣೆಯನ್ನು ಬಲವಾಗಿ ತಳ್ಳಿ ಹಾಕಿದ್ದರ ಪರಿಣಾಮ ಜಾಮೀನು ಅರ್ಜಿಯ ಪರಿಶೀಲನಾ ತಕರಾರಿಗೆ ಸಂಬಂಧಿಸಿದಂತೆ ನ್ಯಾಯಾಧೀಶೆ ಜೆ.ಪ್ರೀತ್‌ ಶುಕ್ರವಾರ ಉಭಯತ್ರರ ವಾದ–ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ ಇದೇ 20ಕ್ಕೆ ಆದೇಶ ಕಾಯ್ದಿರಿಸಿದರು.

ತಕರಾರು ಏನು?: ಹೊಳೆನರಸೀಪುರ ಟೌನ್‌ ಪೊಲೀಸ್‌ ಠಾಣೆಯಲ್ಲಿ 2024ರ ಏಪ್ರಿಲ್‌ 28ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿ; ಮೊದಲಿಗೆ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354ಎ (ಲೈಂಗಿಕ ಕಿರುಕುಳ), 354ಡಿ (ಮಹಿಳೆಯನ್ನು ಹಿಂಬಾಲಿಸು), 506 (ಕ್ರಿಮಿನಲ್ ಬೆದರಿಕೆ) ಮತ್ತು 509ರ (ಮಹಿಳೆಯ ನಮ್ರತೆಯನ್ನು ಅವಮಾನಿಸುವುದು) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ರೇವಣ್ಣ ಮೊದಲ ಆರೋಪಿಯಾದರೆ ಸಂಸದ ಪ್ರಜ್ವಲ್‌ ರೇವಣ್ಣ ಎರಡನೇ ಆರೋಪಿ. 

ಈ ಎಫ್‌ಐಆರ್‌ನಲ್ಲಿರುವ ಅಪರಾಧಿಕ ಕಲಂಗಳ ಅನುಸಾರ ಆರೋಪಿ ಜಾಮೀನು ಪಡೆಯಬಹುದಾದ ಗುನ್ನೆ ಎಂಬ ರೇವಣ್ಣ ಪರ ವಕೀಲರ ವಾದಕ್ಕೆ ಪ್ರಾಸಿಕ್ಯೂಷನ್‌ ಈ ಮೊದಲು ಸಮ್ಮತಿಸಿತ್ತು. ಆದರೆ, ಸೆಷನ್ಸ್‌ ನ್ಯಾಯಾಲಯದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದ ಬೆನ್ನಲ್ಲೇ ಆವತ್ತೇ ರೇವಣ್ಣ ವಿರುದ್ಧ ಐಪಿಸಿ ಕಲಂ 376 ಅನ್ನು ಎಫ್‌ಐಆರ್‌ಗೆ ಸೇರ್ಪಡೆ ಮಾಡಲಾಗಿತ್ತು.

ಇದೇ ವೇಳೆ ಮೂಲ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ, ‘ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಲಾಗಿದೆ’ ಎಂದು ಆರೋಪಿಸಲಾದ ಪ್ರಕರಣದಲ್ಲಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು.

‘ಆರೋಪಿಯ ವಿರುದ್ಧ ಐಪಿಸಿ ಕಲಂ 376 (ಅತ್ಯಾಚಾರ) ಅಪರಾಧ ಕೂಡಾ ದಾಖಲಾಗಿದೆ. ಈ ಕಾರಣಕ್ಕಾಗಿ ಈ ಕೋರ್ಟ್‌ (42ನೇ ಎಸಿಎಂಎಂ) ಜಾಮೀನು ಅರ್ಜಿ ಪರಿಶೀಲನಾ ವ್ಯಾಪ್ತಿಯನ್ನು ಹೊಂದಿಲ್ಲ. ಅತ್ಯಾಚಾರದ ಆರೋಪ ಇರುವ ಕಾರಣ ಸೆಷನ್ಸ್‌ ಕೋರ್ಟ್‌ನಲ್ಲೇ (ಸಿಸಿಎಚ್‌ 82ನೇ ಕೋರ್ಟ್‌) ಇದು ಇತ್ಯರ್ಥವಾಗಬೇಕು. 42ನೇ ಎಸಿಎಂಎಂ ಕೇವಲ ‘ಕಮಿಟಲ್‌ ಕೋರ್ಟ್‌’ (ಪ್ರಕರಣವನ್ನು ವಿಚಾರಣೆಗಾಗಿ ಮೇಲಿನ ಕೋರ್ಟ್‌ಗೆ ಒಪ್ಪಿಸುವ ಕರ್ತವ್ಯ ನಿರ್ವಹಿಸುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌)’ ಎಂಬ ವಾದವನ್ನು ಪ್ರಾಸಿಕ್ಯೂಷನ್ ಮಂಡಿಸಿತ್ತು.

ಜಾಮೀನು ನೀಡಿದರೆ ಸಾಕ್ಷ್ಯ ನಾಶ: ಪ್ರಾಸಿಕ್ಯೂಷನ್‌ ವಾದ

‘ಎಚ್‌.ಡಿ.ರೇವಣ್ಣ ಶಾಸಕರು ಮಂತ್ರಿಯಾಗಿದ್ದವರು. ಮತಗಟ್ಟೆ ವಶಪಡಿಸಿಕೊಂಡ ಹಿನ್ನೆಲೆಯವರು ದಾದಾಗಿರಿ ತೋಳ್ಬಲ ಉಪಯೋಗಿ ಸಬಲ್ಲವರು. (ಅಪ್ಪ–ಮಗ; ರೇವಣ್ಣ–ಪ್ರಜ್ವಲ್‌ ರೇವಣ್ಣ) ಒಂದೇ ಮನೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇಂತಹವರನ್ನು ಜಾಮೀನಿನ ಮೇಲೆ ಹೊರಗೆ ಬಿಟ್ಟರೆ ಪ್ರಕರಣದ ಸಾಕ್ಷ್ಯ ನಾಶ ಮಾಡಬಹುದು’ ಎಂದು ಪ್ರಾಸಿಕ್ಯೂಷನ್‌ ತೀವ್ರ ಆತಂಕ ವ್ಯಕ್ತಪಡಿಸಿತು.ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಮೊದಲ ಆರೋಪಿ ಶಾಸಕ ಎಚ್‌.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ಪರಿಶೀಲನೆ ಮೇಲಿನ ವಾದವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ) ನ್ಯಾಯಾಧೀಶೆ ಜೆ.ಪ್ರೀತ್‌ ಶುಕ್ರವಾರ ವಿಚಾರಣೆ ನಡೆಸಿದರು.ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ಅಶೋಕ್‌ ನಾಯಕ್‌ ‘ಆರೋಪಿಯು ಈ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಮೂಲಕ ತಪ್ಪು ಹೆಜ್ಜೆ ಇರಿಸಿದ್ದಾರೆ. ಈ ಪ್ರಕರಣದಲ್ಲಿ ತಂದೆ–ಮಗ ಒಬ್ಬ ಮಹಿಳೆಯನ್ನು ಬಳಸಿಕೊಂಡಿದ್ದಾರೆ. ಆಕೆಗೆ ಪದೇ ಪದೇ ಲೈಂಗಿಕ ಹಿಂಸೆ ನೀಡಿ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಈ ಜಾಮೀನು ಅರ್ಜಿಯನ್ನು ಸೆಷನ್ಸ್‌ ಕೋರ್ಟ್‌ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.ರೇವಣ್ಣ ಪರ ಹಾಜರಿದ್ದ ಹೈಕೋರ್ಟ್‌ನ ಹಿರಿಯ ವಕೀಲರಾದ ಸಿ.ವಿ.ನಾಗೇಶ್‌ ‘ಘಟನೆ ನಡೆದು ನಾಲ್ಕೂವರೆ ವರ್ಷಗಳಾಗಿವೆ ಎಂದು ದೂರಿನಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ಎಂದರೇನು ಎಂಬುದೇ ಗೊತ್ತಿಲ್ಲ. ಆಕೆಗೆ ಪೂರ್ವ ತಯಾರಿ ನೀಡಿ ರಾಜಕೀಯ ಪರಿಣಾಮಗಳಿಗಾಗಿ ದುರುದ್ದೇಶದಿಂದ ದೂರು ದಾಖಲಿಸಲಾಗಿದೆ’ ಎಂದು ಪ್ರತಿವಾದ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT