ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಏಳು ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ 70 ಆಕಾಂಕ್ಷಿಗಳು

Published 24 ಮೇ 2024, 16:16 IST
Last Updated 24 ಮೇ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿದ್ದು, 70ಕ್ಕೂ ಹೆಚ್ಚು ಆಕಾಂಕ್ಷಿಗಳು ಮೇಲ್ಮನೆ ಪ್ರವೇಶಕ್ಕೆ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಜೂನ್‌ 17ಕ್ಕೆ ನಿವೃತ್ತರಾಗುವ 11 ಸದಸ್ಯರಲ್ಲಿ ಕಾಂಗ್ರೆಸ್‌ನ ನಾಲ್ವರು ಇದ್ದಾರೆ. ವಿಧಾನಸಭೆಯ ಈಗಿನ ಬಲಾಬಲದ ಆಧಾರದಲ್ಲಿ ಕಾಂಗ್ರೆಸ್‌ಗೆ ಏಳು ಸ್ಥಾನಗಳು ದೊರಕಲಿವೆ. ಸದಸ್ಯತ್ವದ ಅವಧಿ ಮುಗಿಯಲಿರುವ ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಪುನರಾಯ್ಕೆಗಾಗಿ ವರಿಷ್ಠರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಪರಿಷತ್‌ನ ಮಾಜಿ ಸಭಾಪತಿಗಳಾದ ವಿ.ಆರ್‌. ಸುದರ್ಶನ್‌, ಬಿ.ಎಲ್‌. ಶಂಕರ್‌ ಸೇರಿದಂತೆ ಪರಿಷತ್‌ನ 12ಕ್ಕೂ ಹೆಚ್ಚು ಮಾಜಿ ಸದಸ್ಯರು ಪುನಃ ಮೇಲ್ಮನೆ ಪ್ರವೇಶಿಸಲು ಬಯಸಿದವರ ಪಟ್ಟಿಯಲ್ಲಿದ್ದಾರೆ. ಐದಕ್ಕೂ ಹೆಚ್ಚು ಮಾಜಿ ಶಾಸಕರೂ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪ್ರಮುಖರು, ಕೆಪಿಸಿಸಿ ಪದಾಧಿಕಾರಿಗಳು ಕೂಡ ಅವಕಾಶಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕೆಲವರಿಗೆ ಕಾಂಗ್ರೆಸ್‌ ವರಿಷ್ಠರು ಹಿಂದೆಯೇ ಆಶ್ವಾಸನೆ ನೀಡಿದ್ದು, ಅವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಈ ಹಿಂದೆ ಪಕ್ಷದ ವರಿಷ್ಠರು ಭರವಸೆ ನೀಡಿರುವ ಆಕಾಂಕ್ಷಿಗಳ ಸಂಖ್ಯೆಯೇ 20ಕ್ಕೂ ಹೆಚ್ಚಿದೆ. ಇದರಿಂದಾಗಿ ಪರಿಷತ್‌ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಭಾರಿ ಕಸರತ್ತು ನಡೆಸಬೇಕಾದ ಇಕ್ಕಟ್ಟಿಗೆ ಕಾಂಗ್ರೆಸ್‌ ನಾಯಕರು ಸಿಲುಕಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಧರ್ಮ, ಜಾತಿ, ಉಪ ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ಪರಿಷತ್‌ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 2018ರಲ್ಲಿ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಒಂದು ಸ್ಥಾನವನ್ನು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿರುವವರಿಗೆ ಮೀಸಲು ಇಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದರು. ಈಗಲೂ ಒಂದು ಸ್ಥಾನವನ್ನು ಸಂಘಟನೆಯಲ್ಲಿ ಸಕ್ರಿಯರಾಗಿರುವವರಿಗೆ ಮೀಸಲಿಡಬೇಕೆಂಬ ಬೇಡಿಯೂ ಬಲವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹಿಂದೆಯೇ ಓಡಾಡುತ್ತಿದ್ದಾರೆ. ಎರಡೂ ಪಟ್ಟಿಗಳಲ್ಲಿ ತಮ್ಮ ಹೆಸರಿರುವಂತೆ ಮನವೊಲಿಸುವ ತಂತ್ರಗಾರಿಕೆಯನ್ನು ಹಲವರು ಅನುಸರಿಸುತ್ತಿದ್ದಾರೆ. ಎಐಸಿಸಿ ಪ್ರಮುಖರ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೆಲವರು ತಮ್ಮ ದೆಹಲಿ ಸಂಪರ್ಕ ಬಳಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT