ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭ

Last Updated 27 ಜೂನ್ 2018, 14:14 IST
ಅಕ್ಷರ ಗಾತ್ರ

ರಾಯಚೂರು: ನಗರದ ಎಪಿಎಂಸಿ ರಾಜೇಂದ್ರ ಗಂಜ್ ಆವರಣದಲ್ಲಿ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭವಾಗಿದ್ದು, ಮೊದಲ ದಿನ ಬುಧವಾರ ಕರ್ನಾಟಕ ಎತ್ತುಗಳಿಗಾಗಿ ಏರ್ಪಡಿಸಿದ 1.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯುತ್ತಿದೆ.

28ರಂದು ಆಂಧ್ರಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣದ ಎತ್ತುಗಳಿಂದ 2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. 29ರಂದು ಎತ್ತುಗಳಿಂದ 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ರಾಯಚೂರಿನ ಮುನ್ನೂರು ಕಾಪು ಸಮಾಜವು ಪ್ರತಿ ವರ್ಷ ಮುಂಗಾರು ಕಾರುಹುಣ್ಣಿಮೆಯಂದು ಮೂರು ದಿನಗಳ ಹಬ್ಬವನ್ನು ಆಯೋಜಿಸುತ್ತಾ ಬಂದಿದೆ.

ರೈತರು ತಾವು ಸಾಕುವ ಜಾನುವಾರುಗಳನ್ನು ಮಕ್ಕಳಂತೆಯೇ ಪ್ರೀತಿಸುತ್ತಾರೆ. ಅವುಗಳಿಗೆ ಹಿಂಸೆ ಕೊಡುವ ಉದ್ದೇಶ ಯಾರಿಗೂ ಇರುವುದಿಲ್ಲ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ನಗರದ ರಾಜೇಂದ್ರ ಗಂಜ್‌ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಪಟು ಆಗುವ ಪೂರ್ವ ಸಾಕಷ್ಟು ತಾಲಿಮು ಮಾಡಬೇಕಾಗುತ್ತದೆ. ಅದೇ ರೀತಿ ಪ್ರಾಣಿಗಳಿಗೂ ತಾಲಿಮು ಮಾಡಿಸಲಾಗುತ್ತದೆ. ಕಲ್ಲು ಎಳೆಯುವ ಸಂದರ್ಭದಲ್ಲಿ ಬಲವಂತ ಮಾಡುವುದಿಲ್ಲ. ಗೆಜ್ಜೆಯ ಸದ್ದು ಮಾಡಿ ಭಾರದ ಕಲ್ಲು ಎಳೆಯುವಂತೆ ಎತ್ತುಗಳಿಗೆ ಉತ್ಸಾಹ ತುಂಬಲಾಗುತ್ತದೆ ಎಂದು ಹೇಳಿದರು.

ರೈತರಲ್ಲಿ ಮತ್ತು ಜಾನುವಾರು ಪ್ರೇಮಿಗಳಿಗೆ ರಾಸುಗಳ ಥಳಿಗಳು ಮತ್ತು ಸಂಗೋಪನೆ ವಿಧಾನದ ಬಗ್ಗೆ ಜಾಗೃತಿ ಮೂಡಿಸಲು ರಾಯಚೂರು ಹಬ್ಬ ಆಯೋಜಿಸುವ ಮೂಲಕ ಸಾಧ್ಯವಾಗುತ್ತಿದೆ. ಮುನ್ನೂರುಕಾಪು ಸಮಾಜವು ಕಳೆದ 18 ವರ್ಷಗಳಿಂದ ಈ ಸಾಂಸ್ಕೃತಿಕ ಹಬ್ಬ ಆಯೋಜಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ರೈತರ ಪಾರಂಪರಿಕ ಮುಂಗಾರು ಹಬ್ಬವನ್ನು ರಾಯಚೂರು ಹಬ್ಬವನ್ನಾಗಿ ಪರಿವರ್ತಿಸುವ ಮೂಲಕ ಈ ಭಾಗದಲ್ಲಿ ಪ್ರತಿಷ್ಠಿತ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ ಎಂದರು.

ಕಾರಹುಣ್ಣಿಮೆ ದಿನದಂದು ಕರಿ ಹರಿಯುವ ಸಂದರ್ಭದಲ್ಲಿ ಯಾವ ಬಣ್ಣದ ಎತ್ತು ಪ್ರಥಮ ಸ್ಥಾನದಲ್ಲಿ ಬರುತ್ತವೋ ಆ ವರ್ಷದಲ್ಲಿ ಆ ಬಣ್ಣದ ಬೆಳೆಗೆ ಉತ್ತಮ ಭವಿಷ್ಯ ಎಂದು ಲೆಕ್ಕ ಹಾಕಲಾಗುತ್ತಿತ್ತು. ಇಂತಹವೊಂದು ಸಾಂಸ್ಕೃತಿಕ ಮತ್ತು ರೈತರ ಹಬ್ಬ ಮುನ್ನೂರುಕಾಪು ಸಮಾಜ ರಾಯಚೂರಿನ ಹಬ್ಬವನ್ನಾಗಿ ಆಚರಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಸಾಂಸ್ಕೃತಿಕ ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೂರು ಕಾಪು ಸಮಾಜವು ತುಂಬಾ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿ ವರ್ಷವೂ ಈ ಹಬ್ಬವು ವೈಭವದಿಂದ ಆಚರಿಸಲಾಗುತ್ತಿದೆ. ರಾಸುಗಳ ಆರೋಗ್ಯ, ಅವುಗಳ ಬಲ ಪ್ರದರ್ಶನ ಮತ್ತು ಅವುಗಳ ಕ್ರೀಡಾ ಶಕ್ತಿಯನ್ನು ಈ ಹಬ್ಬದ ಸಂದರ್ಭದಲ್ಲಿ ಕಾಣುವುದಕ್ಕೆ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಬಹಳ ವರ್ಷಗಳ ಬಳಿಕ ಜಿಲ್ಲೆಯಲ್ಲಿ ವೆಂಕಟರಾವ್‌ ನಾಡಗೌಡ ಅವರು ಸಚಿವರಾಗಿದ್ದಾರೆ. ಅವರಿಗೆ ಜಿಲ್ಲೆಯ ಪ್ರತಿಯೊಂದು ಆಗುಹೋಗುಗಳ ಆರಿವಿದೆ. ನಾಡಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಬೇಕು. ತುಂಗಭದ್ರ ಎಡದಂಡೆ ಕಾಲುವೆಯ ಕೊನೆ ಭಾಗದಲ್ಲಿ ರಾಯಚೂರು ತಾಲ್ಲೂಕು ಇದೆ. ಪ್ರತಿ ವರ್ಷವೂ ನೀರಿನ ಸಮಸ್ಯೆಯಾಗುತ್ತಿದೆ. ಕಾಲುವೆ ಕೊನೆಯ ಭಾಗದ ರೈತರ ಸಮಸ್ಯೆ ನಿವಾರಿಸಲು ಶಾಶ್ವತ ಪರಿಹಾರ ನೀಡಬೇಕು. ರಾಯಚೂರಿಗೆ ಕುಡಿಯುವ ನೀರು ಪೂರೈಸುವ ಕುರಿತು ಐಸಿಸಿ ಸಭೆ ಕರೆದು ತೀರ್ಮಾನಿಸಬೇಕು ಎಂದು ಕೋರಿದರು.

ಮುನ್ನೂರು ಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹಾಂತೇಶ ಪಾಟೀಲ ಅತ್ತನೂರು, ಕೇಶವರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ವಿರೂಪಾಕ್ಷಿ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಮುಖಂಡರಾದ ಆರ್‌.ತಿಮ್ಮಯ್ಯ, ಕಡಗೋಲ ಆಂಜನೇಯ, ರಾಚೋಟಿ ಸೋಮವಾರ ಪೇಟೆಯ ಹಿರೇಮಠ ಸ್ವಾಮೀಜಿ, ಗುಳೇದಗುಡ್ಡದ ಸ್ವಾಮೀಜಿ ಹಾಗೂ ಮುನ್ನೂರು ಕಾಪು ಸಮಾಜದ ಮುಖಂಡರು ಇದ್ದರು.

ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ

ರಾಯಚೂರು ಹಬ್ಬದ ಪ್ರಮುಖ ಆಕರ್ಷಣೆಯಾದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನೋಡುವುದಕ್ಕೆ ರೈತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಮೊದಲ ದಿನದಂದು ರಾಜ್ಯದ ಎತ್ತುಗಳ ಮಧ್ಯೆ ಮಾತ್ರ 1.5 ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಸಲಾಯಿತು. ವಿವಿಧ ಜಿಲ್ಲೆಗಳಿಂದ 16 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿದ್ದವು. ಎತ್ತುಗಳು ಭಾರ ಎಳೆಯುವ ನೋಟವು ಸ್ಪೂರ್ತಿದಾಯಕವಾಗಿತ್ತು. ಜನರ ಸಿಳ್ಳೆ, ಚಪ್ಪಾಳೆ ಹಾಗೂ ಹೊಯ್‌... ಎನ್ನುವ ಕೂಗು ಸಾಮಾನ್ಯವಾಗಿತ್ತು.

ಮುಂಗಾರು ಸಾಂಸ್ಕೃತಿಕ ಹಬ್ಬ ಮತ್ತು ಆಯೋಜಿಸುವ ಸ್ಪರ್ಧೆಗಳು ರಾಜ್ಯದ ಜನರ ಗಮನ ಸೆಳೆದಿದ್ದು, ಇದನ್ನು ಸರ್ಕಾರದಿಂದ ಆಯೋಜಿಸಲು ಕ್ರಮ ಕೈಗೊಳ್ಳಬೇಕು.
- ಡಾ.ಶಿವರಾಜ ಪಾಟೀಲ,ರಾಯಚೂರು ನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT