ಬೆಂಗಳೂರು: ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) 50:50 ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನ ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಪರಿಗಣಿಸಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದೆ. ಈ ಮೂಲಕ ಸರ್ಕಾರ ಪರೋಕ್ಷವಾಗಿ ತಪ್ಪು ಒಪ್ಪಿಕೊಂಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪೂರ್ವಾನ್ವಯವಾಗುವಂತೆ 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದೂ ತಪ್ಪು ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಸರ್ಕಾರ ಇದ್ದಾಗ ನೇಮಿಸಿದ್ದ ತಾಂತ್ರಿಕ ಸಮಿತಿ ಮುಡಾ ಅಕ್ರಮದ ಬಗ್ಗೆ ವರದಿ ನೀಡಿ 10 ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತನಿಖೆ ನಡೆಯುತ್ತಿದ್ದರೂ ತಪ್ಪಿತಸ್ಥ ಅಧಿಕಾರಿ ದಿನೇಶ್‌ಕುಮಾರ್ ಅವರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈಗ ದಿಢೀರನೇ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಮುಡಾ ಹಗರಣ ಬಯಲಿಗೆ ಬಂದ ನಂತರ ಗಲಿಬಿಲಿಗೊಂಡಿದ್ದಾರೆ. ಮಂಕಾಗಿದ್ದಾರೆ ಮತ್ತು ಮಾನಸಿವಾಗಿ ಕುಗ್ಗಿ ಹೋಗಿದ್ದಾರೆ. ರಾಜೀನಾಮೆ ಕೊಟ್ಟು ತಮ್ಮ ಗೌರವವನ್ನು ಕಾಪಾಡುವುದರ ಜತೆಗೆ ರಾಜ್ಯದ ಗೌರವವನ್ನೂ ಉಳಿಸಬೇಕು ಎಂದು ಹೇಳಿದರು
ಬೆಂಗಳೂರಿನಲ್ಲಿ ಕಮಿಷನ್ ಆಸೆಗಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾಗಿರುವ ₹1500 ಕೋಟಿಯನ್ನು ತಡೆ ಹಿಡಿದಿದ್ದು, ಇದರಿಂದ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನ ಎಲ್ಲೆಡೆ ಕಸದ ರಾಶಿ ಬಿದ್ದಿದೆ. ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇದು ಕಾಸಿಲ್ಲದ ಬ್ರ್ಯಾಂಡ್ ಬೆಂ
ಎಸ್‌ಸಿ ಮೋರ್ಚಾದಿಂದ ರಾಜ್ಯವ್ಯಾಪಿ ಹೋರಾಟ:
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಕೆಟ್ಟ ಶಬ್ದಗಳಿಂದ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹೇಳಿದ ಅವರು, ಛಲವಾದಿ ಅವರು ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ಅಕ್ರಮಗಳ ವಿರುದ್ಧ ಮಾತನಾಡಿ ತನಿಖೆಗೆ ಒತ್ತಾಯಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ? ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಪಾರ ಗೌರವಿದೆ. ಆದರೆ, ಅವರನ್ನು ಪ್ರಶ್ನಿಸಬಾರದು ಎಂದೇನಿಲ್ಲ ಎಂದರು.
ಯು.ಬಿ.ವೆಂಕಟೇಶ ಅವರು ನಾರಾಯಣಸ್ವಾಮಿ ಕುರಿತು ಇಲ್ಲಸಲ್ಲದ ಮಾತನಾಡಿದ್ದಾರೆ. ನಾರಾಯಣಸ್ವಾಮಿ ಕಳೆದ 45 ವರ್ಷಗಳಿಂದ ದಲಿತರಿಗಾಗಿ ಹೋರಾಟ ಮಾಡಿದ್ದಾರೆ. ನಮ್ಮ ಪಕ್ಷ ಅವರನ್ನು ಗುರುತಿಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ವಿರೋಧ ಪಕ್ಷದ ನಾಯಕದ ಸ್ಥಾನವನ್ನೂ ಕೊಟ್ಟಿದೆ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿಯ ದಲಿತ ನಾಯಕರು. ಯು.ಬಿ.ವೆಂಕಟೇಶ್ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದು ಎಚ್ಚರಿಸಿದರು. ದಲಿತರ ನಾಯಕರು ಅಧಿಕಾರ ದುರ್ಬಳಕೆ ಮಾಡಿದಾಗ ಅದರ ಕುರಿತು ಮಾತನಾಡುವುದು ತಪ್ಪಲ್ಲ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.