ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Muda Scam | ಪ್ರಾಸಿಕ್ಯೂಷನ್‌ಗೆ ಅನುಮತಿ: ಕಾನೂನು ತಜ್ಞರು ಏನಂತಾರೆ?

Published 18 ಆಗಸ್ಟ್ 2024, 0:00 IST
Last Updated 18 ಆಗಸ್ಟ್ 2024, 0:00 IST
ಅಕ್ಷರ ಗಾತ್ರ

‘ತನಿಖೆಗಷ್ಟೇ ಅನುಮತಿ’

ಈಗ ಅನುಮತಿ ನೀಡಿರುವುದು ತನಿಖೆಗಷ್ಟೇ, ವಿಚಾರಣೆಗಲ್ಲ. ಯಾವುದೇ ಸಾರ್ವಜನಿಕ ಸೇವಕನ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅವಶ್ಯಕ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17ಎ ಸೆಕ್ಷನ್‌ ಹೇಳುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಾರ್ವಜನಿಕ ಸೇವಕ, ರಾಜ್ಯಪಾಲ ಸಕ್ಷಮ ಪ್ರಾಧಿಕಾರ. ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸಲು ಇದ್ದ ತಡೆ ಈಗ ನಿವಾರಣೆಯಾಗಿದೆ ಅಷ್ಟೆ. ಹೀಗಾಗಿ ಟಿ.ಜೆ.ಅಬ್ರಹಾಂ ನೀಡಿರುವ ದೂರಿನ ಪ್ರಕಾರ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಬಹುದು.

–ಬಿ.ವಿ.ಆಚಾರ್ಯ, ಹಿರಿಯ ವಕೀಲ

‘ತನಿಖೆಯ ಹಾದಿ ಮುಕ್ತ’

ಮುಖ್ಯಮಂತ್ರಿಯವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಅಡಿ ತನಿಖೆ ನಡೆಸಲು ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಈಗ ತನಿಖೆಯ ಹಾದಿ ಮುಕ್ತವಾಗಿದೆ. ನ್ಯಾಯಾಲಯವು ನೇರವಾಗಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಬಹುದು ಅಥವಾ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 202ರ ಅಡಿಯಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆಯೂ ಸಂಬಂಧಿಸಿದ ತನಿಖಾ ಸಂಸ್ಥೆಗೆ ಆದೇಶಿಸಬಹುದು. ತನಿಖೆ ಆರಂಭವಾದ ಬಳಿಕ ದೂರುದಾರರ ಪಾತ್ರ ಸಾಕ್ಷಿಗೆ ಸೀಮಿತವಾಗುತ್ತದೆ. ಸರ್ಕಾರ ಮತ್ತು ಆರೋಪಿತರ ಮಧ್ಯೆ ಪ್ರಕರಣ ಮುಂದುವರಿಯುತ್ತದೆ. ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಸಬೇಕಾದರೆ ತನಿಖಾ ಸಂಸ್ಥೆಯೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 19ರ ಅಡಿಯಲ್ಲಿ ರಾಜ್ಯಪಾಲರಿಂದ ಅನುಮತಿ ಪಡೆದು, ಮುಂದುವರಿಯಬೇಕಾಗುತ್ತದೆ. ಕಾನೂನಿನ ಸಿಂಧುತ್ವ ಮತ್ತು ತಾಂತ್ರಿಕ ಅಂಶಗಳ ಆಧಾರದಲ್ಲಿ ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ದರಾಮಯ್ಯ ಅವರಿಗೆ ಅವಕಾಶವಿದೆ. ರಾಜ್ಯಪಾಲರ ತೀರ್ಮಾನವು ಬಾಹ್ಯ ಪ್ರಭಾವದಿಂದ ಕೂಡಿದೆ ಅಥವಾ ದುರುದ್ದೇಶದಿಂದ ಕೂಡಿದೆ ಅಥವಾ ಮಾರ್ಗಸೂಚಿಗಳನ್ನು ಪಾಲಿಸದೇ ಕೈಗೊಳ್ಳಲಾಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾದರೆ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಬಹುದು. ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ಅಥವಾ ಅದನ್ನು ರದ್ದುಗೊಳಿಸುವ ಆದೇಶ ಬರುವವರೆಗೂ ತನಿಖೆಯ ಹಾದಿ ಅಬಾಧಿತ ವಾಗಿರುತ್ತದೆ.

ಸಿ.ಎಚ್‌. ಹನುಮಂತರಾಯ, ಹಿರಿಯ ವಕೀಲ

‘ಎರಡು ಸಾಧ್ಯತೆಗಳು’

ಇಲ್ಲಿ ಎರಡು ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ತನಿಖೆಯ ಅಗತ್ಯವಿಲ್ಲ. ತನಿಖೆಯಿಂದ ಸಿಗಬಹುದಾದ ಎಲ್ಲಾ ದಾಖಲೆಗಳನ್ನು ನಾವೇ ತೆಗೆದಿದ್ದೇವೆ. ಹೀಗಾಗಿ ವಿಚಾರಣೆ ಆರಂಭಿಸಿ ಎಂದು ಕೇಳಬಹುದು. ಅದಕ್ಕೆ ನ್ಯಾಯಾಧೀಶರು, ‘ಲಭ್ಯವಿರುವ ದಾಖಲೆಗಳ ಆಧಾರದಲ್ಲೇ ವಿಚಾರಣೆ ನಡೆಸಬಹುದು. ಆದರೆ ಈಗ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17ಎ ಸೆಕ್ಷನ್‌ ಅಡಿ ತನಿಖೆಗೆ ಮಾತ್ರ ಅನುಮತಿ ನೀಡಲಾಗಿದೆ. ಕಾಯ್ದೆಯ 19ನೇ ಸೆಕ್ಷನ್‌ ಅಡಿ ವಿಚಾರಣೆ ನಡೆಸಲು ಅನುಮತಿ ದೊರೆತಿಲ್ಲ. ಅಂತಹ ಅನುಮತಿ ದೊರೆತ ನಂತರ ಪ್ರಕರಣದಲ್ಲಿ ಮುಂದುವರೆಯಬಹುದು’ ಎಂದು ಹೇಳಬಹುದು. ಇದು ಮೊದಲನೇ ಸಾಧ್ಯತೆ.

ವಿಚಾರಣೆ ನಡೆಸಿ ಎಂದು ದೂರುದಾರ ಕೋರಿದರೂ ನ್ಯಾಯಾಧೀಶರು, ‘ಲಭ್ಯವಿರುವ ದಾಖಲೆಗಳ ಆಧಾರದಲ್ಲಷ್ಟೇ ವಿಚಾರಣೆ ನಡೆಸಲು ಆಗುವುದಿಲ್ಲ. ತನಿಖೆಯ ಅಗತ್ಯ ಇದೆ’ ಎಂದು ತನಿಖೆಗೆ ಆದೇಶಿಸುವುದು ಎರಡನೇ ಸಾಧ್ಯತೆ. ಹಾಗೆ ಆದೇಶಿಸಿದರೆ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸುತ್ತಾರೆ. ಜಿಲ್ಲಾ ನ್ಯಾಯಾಲಯಗಳೇ ಸಿಬಿಐ ತನಿಖೆಗೆ ಆದೇಶಿಸುವ ಅಧಿಕಾರ ವ್ಯಾಪ್ತಿ ಹೊಂದಿರುವುದಿಲ್ಲ. ಹೀಗಾಗಿ ಅಂತಹ ಸಾಧ್ಯತೆ ಇಲ್ಲ.

ಕೆ.ವಿ.ಧನಂಜಯ, ಹಿರಿಯ ವಕೀಲ

‘ಯಡಿಯೂರಪ್ಪ ಅಧಿಕಾರ ನಡೆಸಲಿಲ್ಲವೇ’

ಯಡಿಯೂರಪ್ಪ ವಿರುದ್ಧವೂ ತನಿಖೆಗೆ ಅನುಮತಿ ನೀಡಲಾಗಿತ್ತು. ಅವರು ಅದರ ಮಧ್ಯೆಯೇ ಅಧಿಕಾರ ನಡೆಸಲಿಲ್ಲವೇ? ಈಗ ಅರವಿಂದ ಕೇಜ್ರಿವಾಲ್‌ ಜೈಲಿನಿಂದಲೇ ಅಧಿಕಾರ ನಡೆಸುತ್ತಿಲ್ಲವೇ? ಈ ಪ್ರಕರಣದಲ್ಲೂ ಹಾಗೇ ಆಗಬಹುದು. ರಾಜಕೀಯವಾಗಿ ಏನು ಆಗುತ್ತದೆ ಎಂದು ಹೇಳಲು ಬರುವುದಿಲ್ಲ.

ಕಾನೂನಾತ್ಮಕವಾಗಿ ಇದೊಂದು ಖಾಸಗಿ ದೂರು. ದೂರು ನೀಡಿದ ವ್ಯಕ್ತಿ ನ್ಯಾಯಾಲಯದ ಮುಂದೆ ಏನನ್ನು ಕೋರುತ್ತಾರೆ ಎಂಬುದರ ಮೇಲೆ ಪ್ರಕರಣ ಹೇಗೆ ಮುಂದುವರೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ಅವರು ತನಿಖೆಗೂ ಕೋರಬಹುದು. ವಿಚಾರಣೆಗೂ ಕೋರಬಹುದು.  ಮುಖ್ಯಮಂತ್ರಿಗೂ ಹಲವು ಆಯ್ಕೆಗಳಿವೆ.

ಉದಯ್‌ ಹೊಳ್ಳ, ಹಿರಿಯ ವಕೀಲ

‘ರಾಜ್ಯಪಾಲರು ವಿವೇಚನೆ ಬಳಸಿಲ್ಲ’

ಈ ಆದೇಶ ಹೊರಡಿಸುವಲ್ಲಿ ರಾಜ್ಯಪಾಲರು ವಿವೇಚನೆ ಬಳಸಿಲ್ಲ. ಅಧಿಕೃತ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ಶಿಫಾರಸು ಮಾಡಿದ್ದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17ಎ ಸೆಕ್ಷನ್‌ ಅನ್ವಯವಾಗುತ್ತದೆ. ಸಿದ್ದರಾಮಯ್ಯ ಅಂತಹ ಯಾವ ಶಿಫಾರಸು ಮಾಡಿದ್ದಾರೆ ಎಂಬ ವಿವರ ಈ ಅನುಮತಿ ಪತ್ರದಲ್ಲಿ ಎಲ್ಲಿಯೂ ಇಲ್ಲ.

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ಎಂದು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಕ್ರಮ ನಡೆದಿದೆ ಎನ್ನಲಾದ ದಿನಗಳಲ್ಲಿ ಸಿದ್ದರಾಮಯ್ಯ ಏನಾಗಿದ್ದರು, ಅವರು ಮುಖ್ಯಮಂತ್ರಿ ಆಗಿದ್ದರೆ, ಅಕ್ರಮದಲ್ಲಿ ಅವರ ಪಾತ್ರ ಏನು ಎಂಬ ವಿಚಾರಗಳನ್ನು ರಾಜ್ಯಪಾಲರು ಪರಿಗಣಿಸಬೇಕಿತ್ತು. ಜತೆಗೆ ಅಧಿಕಾರಿಗಳೂ ಸೇರಿ ಸಂಬಂಧಪಟ್ಟ ಎಲ್ಲರ ವಿರುದ್ಧ ತನಿಖೆ ನಡೆಸಿ ಎಂದು ಹೇಳಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 

ಅಶೋಕ ಹಾರನಹಳ್ಳಿ, ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT