ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶ್ರೀ ಬಂಧಿಸಲು ಬಡಗಲಪುರ ನಾಗೇಂದ್ರ ಆಗ್ರಹ

Last Updated 1 ಸೆಪ್ಟೆಂಬರ್ 2022, 9:03 IST
ಅಕ್ಷರ ಗಾತ್ರ

ಮೈಸೂರು: ‘ಪೋಕ್ಸೊ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸರ್ಕಾರವು ಯಾವುದೇ ಕಾರಣಕ್ಕೂ ತಡಮಾಡದೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಶ್ರೀಗಳ ಮೇಲೆ ಕೇಳಿಬಂದಿರುವುದು ಗಂಭೀರವಾದ ಅರೋಪ. ಹೀಗಾಗಿ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಕೆಲಸ ತ್ವರಿತವಾಗಿ ಆಗಬೇಕು. ಪ್ರಕರಣದಲ್ಲಿ ಯಾವುದೇ ಪೂರ್ವಗ್ರಹವಿಲ್ಲದೆ ಆರೋಪಿಯನ್ನು ಈವರೆಗಾಗಲೇ ವಿಚಾರಣೆಗೆ ಒಳಪಡಿಸಬೇಕಾಗಿತ್ತು’ ಎಂದು ವಕೀಲರೂ ಆಗಿರುವ ನಾಗೇಂದ್ರ ಹೇಳಿದರು.

‘ದೂರುದಾರರು ಯಾವುದೇ ಭಯವಿಲ್ಲದೆ, ಮುಜುಗರವಿಲ್ಲದೆ ವಿಚಾರಣೆಯಲ್ಲಿ ಭಾಗವಹಿಸುವುದಕ್ಕೆ ಅಗತ್ಯವಾದ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾದ್ದರಿಂದ ಸತ್ಯಾಂಶ ಬೇಗನೆ ಹೊರಬರಬೇಕು. ಹೀಗಾಗಿ, ವಿಳಂಬ ಧೋರಣೆ ಸಲ್ಲದು’ ಎಂದರು.

‘ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ನಡೆಯು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಆದ್ದರಿಂದ ವಿಶೇಷ ತನಿಖಾ ದಳವನ್ನು ರಚಿಸಬೇಕು. ಅದರಲ್ಲಿ ಹೊರ ರಾಜ್ಯದ ಅಧಿಕಾರಿಗಳಷ್ಟೆ ಇರಬೇಕು. ಸಂತ್ರಸ್ತೆಯರನ್ನು ಕಾನೂನು ಪ್ರಕಾರವಾಗಿ ಗೌರವದಿಂದ ವಿಚಾರಣೆಗೆ ಒಳಪಡಿಸಬೇಕು. ಯಾವುದೇ ಒತ್ತಡ ಹೇರುವ ವಾತಾವರಣ ಇಲ್ಲದಂತೆ ನೋಡಿಕೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರುವವರೆಗೂ ರಾಜಕಾರಣಿಗಳು ಆರೋಪಿಗೆ ಕ್ಲೀನ್ ಚಿಟ್ ಕೊಡುವಂತಹ ಹೇಳಿಕೆಗಳನ್ನು ನೀಡಬಾರದು. ಅನುಕಂಪ ತೋರಿಸಬಾರದು. ಶ್ರೀಗಳ ಮೇಲಿನ ಗೌರವವೇ ಬೇರೆ; ಕಾನೂನೇ ಬೇರೆ. ನಮಗೂ ಗೌರವವಿದೆ ಮತ್ತು ಪೂರ್ವಗ್ರಹಗಳಿಲ್ಲ. ಶ್ರೀಗಳು ಕಾನೂನು ಪ್ರಕಾರ ನಡೆದುಕೊಂಡು ತನಿಖೆಗೆ ಒಳಪಡಬೇಕು. ಸಂಧಾನ ಮಾಡಿಕೊಳ್ಳುವ ವ್ಯಾಪ್ತಿಯಲ್ಲಿ ಬರುವ ಪ್ರಕರಣವಿದಲ್ಲ. ಹೀಗಾಗಿ ಸಂಧಾನಕ್ಕೆ ಸಿದ್ಧ ಎನ್ನುವುದು ಸರಿಯಾಗದು’ ಎಂದು ತಿಳಿಸಿದರು.

ಪದಾಧಿಕಾರಿಗಳಾದ ಮುಖಂಡ ಅಶ್ವತ್ಥನಾರಾಯಣರಾಜೇ ಅರಸ್, ಹೊಸಕೋಟೆ ಬಸವರಾಜ್, ಮಂಡಕಳ್ಳಿ ಮಹದೇವಯ್ಯ, ಮರಂಕಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT