ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ಸಂಕಟ ಮರೆಸಿದ ಜಂಬೂಸವಾರಿ

ಲಕ್ಷಾಂತರ ಮಂದಿ ಭಾಗಿ, ಚಾಮುಂಡೇಶ್ವರಿಗೆ ಮೊಳಗಿದ ಜೈಕಾರ
Published 24 ಅಕ್ಟೋಬರ್ 2023, 22:57 IST
Last Updated 24 ಅಕ್ಟೋಬರ್ 2023, 22:57 IST
ಅಕ್ಷರ ಗಾತ್ರ

ಮೈಸೂರು: ಹಬ್ಬಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ, ನಾಡಹಬ್ಬ ದಸರಾ ಉತ್ಸವದ ವಿಜಯದಶಮಿ–ಜಂಬೂಸವಾರಿ ಮೆರವಣಿಗೆಯು ನಗರದಲ್ಲಿ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಬರಗಾಲವನ್ನು ಮರೆತು ಬಂದಿದ್ದ ಲಕ್ಷಾಂತರ ಮಂದಿ ಈ ಸಂಭ್ರಮಕ್ಕೆ ಸಾಕ್ಷಿಯಾದರು.

ಬರಪೀಡಿತ ತಾಲ್ಲೂಕುಗಳಿಂದಲೇ ಬಂದಿದ್ದ ಬಹುತೇಕ ಕಲಾವಿದರು ಸಂಕಟ ಮರೆತು ಪ್ರದರ್ಶನ ನೀಡಿ ಮೆರವಣಿಗೆಗೆ ಮೆರುಗು ತಂದರು. ತಮ್ಮ ಜಿಲ್ಲೆಗಳ ಸಾಂಸ್ಕೃತಿಕ ವಿಶೇಷಗಳನ್ನು ಸಂಗೀತ- ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸ್ತಬ್ಧಚಿತ್ರಗಳು ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಿದವು.

ಮೆರವಣಿಗೆಯಲ್ಲಿ ಪಾಲ್ಗೊಂಡ //ಸಿಬ್ಬಂದಿಯು// ಇದೇ ಮೊದಲ ಬಾರಿಗೆ ವಿಶೇಷ ಪೋಷಾಕು (ಸೆರೆಮೊನಿ ಡ್ರೆಸ್) ಧರಿಸಿ ಗಮನಸೆಳೆದರು.

ಹಿಂದಿನ ವರ್ಷದಂತೆಯೇ ಈ ಬಾರಿಯೂ ಸಂಜೆ–ಕತ್ತಲಿನಲ್ಲೇ, ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ರಸ್ತೆಯ ನಡುವೆ ಮೆರವಣಿಗೆ ಗಂಭೀರವಾಗಿ ಸಾಗಿತು. ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಅಂಬಾರಿ ಹೊತ್ತ ‘ಅಭಿಮನ್ಯು’ ಸೇರಿದಂತೆ ಒಂಬತ್ತೂ ಆನೆಗಳೂ ಹೊಳೆದವು.

ಮಧ್ಯಾಹ್ನ 1.45ಕ್ಕೆ ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿ, ಅರಮನೆ ಒಳ ಆವರಣಕ್ಕೆ ತೆರದ ಜೀಪಿನಲ್ಲಿ ಬರುತ್ತಿದ್ದಂತೆ ಅವರು ಜನರತ್ತ ಕೈ ಬೀಸಿ ಉತ್ಸಾಹ ತುಂಬಿದರು. ಇದೇ ಮೊದಲ ಬಾರಿಗೆ //108 ನಂದಿಧ್ವಜಗಳ// ಕುಣಿತವನ್ನು ಆಯೋಜಿಸಲಾಗಿತ್ತು. 

ನಂತರ ಕಲಾತಂಡಗಳು ಮತ್ತು ಸ್ತಬ್ದಚಿತ್ರಗಳ ಮೆರವಣಿಗೆಗೆ ಚಾಲನೆ ದೊರಕಿತು. ಬಿರುಬಿಸಿಲನ್ನು ಲೆಕ್ಕಿಸದೆ ಅಪಾರ ಸಂಖ್ಯೆಯ ಜನರು ಎರಡು ಗಂಟೆಗೂ ಹೆಚ್ಚು ಕಾಲ ರಾಜ್ಯದ ಪ್ರಾದೇಶಿಕ, ಸಾಂಸ್ಕೃತಿಕ ವಿಶೇಷಗಳನ್ನು ಕಣ್ತುಂಬಿಕೊಂಡರು.

ಸಂಜೆ 5.09ಕ್ಕೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ.ಯ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್ ಜೊತೆಯಾದರು.

ನಂತರ ಶುರುವಾದ ರಾಷ್ಟ್ರಗೀತೆಯ ನಡುವೆಯೇ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಆನೆಗಳೆಲ್ಲವೂ ಏಕಕಾಲಕ್ಕೆ ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿತು. ಅಂಬಾರಿ ಆನೆ ಜೊತೆ ಕುಮ್ಕಿ ಆನೆಗಳಾಗಿ ‘ವಿಜಯ’ ಮತ್ತು ‘ವರಲಕ್ಷ್ಮಿ’ ಹೆಜ್ಜೆ ಹಾಕಿದರೆ, ಅರ್ಜುನ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿದ.

ವಿವಿಧ ಜಿಲ್ಲೆಗಳ ಸಾಧನೆ, ವಿಶೇಷಗಳನ್ನು ಬಿಂಬಿಸುವ ವೈವಿಧ್ಯಮಯವಾದ 49 ಸ್ತಬ್ದಚಿತ್ರಗಳು, 50 ಜನಪದ ಕಲಾ ತಂಡಗಳ ನೃತ್ಯ ಸಂಭ್ರಮವು ಜನರ ಮುಂದೆ ಸಾಂಸ್ಕೃತಿಕ ವೈಭವದ ಲೋಕವನ್ನು ಅನಾವರಣಗೊಳಿಸಿತು. ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನೂ ಸಾವಿರಾರು ಮಂದಿ ವೀಕ್ಷಿಸುವುದರೊಂದಿಗೆ ಉತ್ಸವಕ್ಕೆ ಸಂಭ್ರಮದ ತೆರೆ ಬಿತ್ತು.

‘ವೈಮಾನಿಕ ಪ್ರದರ್ಶನ’ (ಏರ್‌ಶೋ) ಈ ಬಾರಿಯ ಉತ್ಸವದ ಮತ್ತೊಂದು ಆಕರ್ಷಣೆಯಾಗಿತ್ತು. ಸೋಮವಾರ ನಡೆದ ಮುಖ್ಯ ಪ್ರದರ್ಶನವನ್ನು ಸುಮಾರು 35ಸಾವಿರ ಮಂದಿ ವೀಕ್ಷಿಸಿದರು. ಭಾರತೀಯ ವಾಯುಪಡೆಯ ‘ಸೂರ್ಯಕಿರಣ್‌ ಏರೋಬ್ಯಾಟಿಕ್‌ ತಂಡ’ದವರು ರೋಮಾಂಚನಕಾರಿ ಪ್ರದರ್ಶನ ನೀಡಿದರು.

ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮಂಗಳವಾರ ನಡೆದ ಜಂಬೂಸವಾರಿ ‌ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಕುಮ್ಕಿ ಆನೆಗಳಾದ ‘ವರಲಕ್ಷ್ಮಿ’ ಮತ್ತು ‘ವಿಜಯ’ ಜೊತೆ ಸಾಗಿತು. ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮಂಗಳವಾರ ನಡೆದ ಜಂಬೂಸವಾರಿ ‌ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಕುಮ್ಕಿ ಆನೆಗಳಾದ ‘ವರಲಕ್ಷ್ಮಿ’ ಮತ್ತು ‘ವಿಜಯ’ ಜೊತೆ ಸಾಗಿತು. ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮಂಗಳವಾರ ನಡೆದ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಅರಮನೆಯ ಆವರಣದಲ್ಲಿ ನೆರೆದಿದ್ದ ಜನಸ್ತೋಮ. ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮಂಗಳವಾರ ನಡೆದ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಅರಮನೆಯ ಆವರಣದಲ್ಲಿ ನೆರೆದಿದ್ದ ಜನಸ್ತೋಮ. ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.

ಪೊಲೀಸರಿಗೆ ಬಿಸಿ ಮುಟ್ಟಿಸಿದ ಮಾವುತರು

ಮೈಸೂರು: ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಪೊಲೀಸರು ಹಾಗೂ ಮಾವುತರ ನಡುವೆ ಮಾತಿಕ ಚಕಮಕಿ ನಡೆಯಿತು. ಇದರಿಂದ ಆನೆಗಳನ್ನು ಮೆರವಣಿಗೆಗೆ ಸಿದ್ಧಪಡಿಸುವುದೂ ತಡವಾಯಿತು. ಬೆಳಿಗ್ಗೆ ಆನೆಗಳಿಗೆ ಪೂಜೆ ಸಲ್ಲಿಸುವಾಗ ಅರಣ್ಯಾಧಿಕಾರಿಗಳನ್ನು ಪೊಲೀಸರು ಎಳೆದಾಡಿದ್ದರು. ಆಗಲೂ ಮಾತಿನ ಚಕಮಕಿ ನಡೆದಿತ್ತು. ಮಧ್ಯಾಹ್ನ ಅರಣ್ಯ ಇಲಾಖೆಯ ಜೀಪ್‌ಗಳನ್ನು ಪೊಲೀಸರು ತಡೆದಿದ್ದರು. ಅಲ್ಲದೇ ಮಾವುತರನ್ನು ಬಿಡುವುದಕ್ಕೂ ತೊಂದರೆ ನೀಡಿದ್ದರು. ಆಗಲೂ ವಾಗ್ವಾದ ನಡೆಯಿತು.

ಒಂದು ಹಂತದಲ್ಲಿ ಮಾವುತರು ‘ನಾವು ಹೋಗುತ್ತೇವೆ ನೀವೇ ದಸರಾ ಮಾಡಿಕೊಳ್ಳಿ’ ಎಂದು ಪೊಲೀಸರಿಗೆ ಬಿಸಿ ಮುಟ್ಟಿಸಿದರು. ‘ಪ್ರತಿ ದಸರಾದಲ್ಲೂ ಹೀಗೇ ಮಾಡುತ್ತೀರಿ. ನೀವು ಎಷ್ಟು ಮಂದಿಯಾದರೂ ಬರಬಹುದು. ಆದರೆ ನಮ್ಮನ್ನು ತಡೆಯುತ್ತೀರಿ. ಇಲಾಖೆಯ ಸಿಬ್ಬಂದಿಯ ಜೀಪ್‌ ಬರುವುದಕ್ಕೂ ಅಡ್ಡಿಪಡಿಸುತ್ತೀರಿ. ಪಾಸ್‌ ಇದ್ದರೂ ಬಿಡುವುದಿಲ್ಲ ಎಂದರೆ ಹೇಗೆ? ನೀವೇ ಅಂಬಾರಿ ಕಟ್ಟಿಕೊಳ್ಳಿ ನಾವು ಹೋಗುತ್ತೇವೆ’ ಎಂದು ತರಾಟೆಗೆ ತೆಗೆದುಕೊಂಡರು. ‘ಆನೆಯಿಂದಲೇ ಹೊಡೆಸ್ತೀವಿ ನಿಮಗೆ’ ಎಂದು ಎಚ್ಚರಿಕೆಯನ್ನೂ ನೀಡಿದರು. ನಂತರ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಾವುತರನ್ನು ಸಮಾಧಾನಪಡಿಸಿದರು. ಈ ಘಟನೆಯಿಂದಾಗಿ ನಿಶಾನೆ ಆನೆ ‘ಅರ್ಜುನ’ನನ್ನು ಸಿದ್ಧಪಡಿಸಿ ಕರೆತರುವುದು ತಡವಾಯಿತು. ಮೆರವಣಿಗೆಗೆ ದಿಕ್ಕು ತೋರುವುದಕ್ಕೆ ನಿಶಾನೆ ಆನೆ ಬಳಸಲಾಗುತ್ತದೆ. ಆದರೆ ಕೊಂಬು ಕಹಳೆ ಬಾಗಲಕೋಟೆ ಜಿಲ್ಲೆಯ ಸ್ತಬ್ಧಚಿತ್ರ ಹಾಗೂ ಕೆಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದ ನಂತರ ನಿಶಾನೆ ಆನೆಯನ್ನು ಕರೆತರಲಾಯಿತು.

ಆ ಆನೆಯಿಂದ ಮುಖ್ಯ ಅತಿಥಿಗಳಿಗೆ ಸೊಂಡಿಲೆತ್ತಿಸಿ ಸಲಾಂ ಮಾಡಿ ನಂತರ ಮೆರವಣಿಗೆಯಲ್ಲಿ ಸಾಗುವುದು ಸಂಪ್ರದಾಯ. ಆದರೆ ಈ ಬಾರಿ ಅದನ್ನು ಮುಖ್ಯ ಅತಿಥಿಗಳ ಎದುರಿಗೆ ಕರೆತರಲೇ ಇಲ್ಲ! ನಡುವೆಯೇ ಮೆರವಣಿಗೆಗೆ ಸೇರಿಸಲಾಯಿತು. ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಸಂಜೆ 4.40ರಿಂದ 5 ಗಂಟೆಯ ಒಳಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಬೇಕಿತ್ತು. ಆದರೆ ಒಂಬತ್ತು ನಿಮಿಷ ತಡವಾಗಿ ಈ ಕಾರ್ಯ ನೆರವೇರಿತು. ಸಾಲಾನೆಗಳು ಜಂಬೂಸವಾರಿಗೆ ಚಾಲನೆ ನೀಡುವ ಸ್ಥಳದಿಂದ ಹೊರಡುವ ಬದಲಿಗೆ ಬಲರಾಮ ದ್ವಾರದಲ್ಲಿ ಮೆರವಣಿಗೆಯನ್ನು ಕೂಡಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT