ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಇಬ್ಬರು ಶಿಕ್ಷರಿಗೆ ರಾಷ್ಟ್ರ ಪ್ರಶಸ್ತಿ

Last Updated 25 ಆಗಸ್ಟ್ 2022, 14:44 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು ನೀಡುವ ರಾಷ್ಟ್ರೀಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಮೇಶ್‌ ಟಿ.ಪಿ. ಹಾಗೂತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕಿ ವಿ.ಪೊನಶಂಕರಿ ಭಾಜನರಾಗಿದ್ದಾರೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ. 5ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 46 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

27 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವ ಪೊನಶಂಕರಿ ಅವರು, 2019ರಿಂದ ತುಮಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ತಮಿಳುನಾಡಿನವರಾಗಿದ್ದು ಆರಂಭದ ದಿನಗಳಲ್ಲಿ ಗುಜರಾತ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಬೆಂಗಳೂರಿನ ಯಶವಂತಪುರದ ಐಐಎಸ್‌ಸಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ 12 ವರ್ಷ ಕೆಲಸ ಮಾಡಿದ್ದಾರೆ. ನಿವೃತ್ತಿಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ.

2004ರಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿರುವ ಉಮೇಶ್‌, 2006ರಲ್ಲಿ ತಾಲ್ಲೂಕಿನ ಕೇಶವಾಪುರ ಶಾಲೆಗೆ ವರ್ಗಾವಣೆಯಾಗಿ ಬಂದರು. 2009ರಿಂದ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿದರು. ಆರಂಭದಲ್ಲಿದ್ದ 39 ವಿದ್ಯಾರ್ಥಿಗಳ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸಿದರು. ದಾನಿಗಳ ನೆರವು ಪಡೆದು ಶಾಲೆಗೆ ಮೂಲಸೌಕರ್ಯ ಒದಗಿಸಿದರು.

ಶಿಕ್ಷಕ ಉಮೇಶ್ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿದ್ದಾರೆ. ‘ನನ್ನಯ ಸೈಕಲ್‌ ಟ್ರಿಣ್‌ ಟ್ರಿಣ್‌’, ‘ವಚನಾಂಜಲಿ’, ‘ವಚನವಾಣಿ’, ‘ಫೋಟೋಕ್ಕೊಂದು ಫ್ರೇಮು’, ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’, ‘ದೇವರಿಗೆ ಬೀಗ’ ಎಂಬ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

***

ಪ್ರಶಸ್ತಿಯನ್ನು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶಾಲಾಭಿವೃದ್ಧಿ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಎಲ್ಲ ಅಧಿಕಾರಿಗರಿಗಳಿಗೆ ಅರ್ಪಿಸುತ್ತೇನೆ.

ಟಿ.ಪಿ.ಉಮೇಶ್, ಅಮೃತಪುರ ಜಿಎಲ್‌ಪಿಎಸ್‌ ಶಾಲೆಯ ಶಿಕ್ಷಕ

***

ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಎಲ್ಲೆಡೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ.

- ವಿ. ಪೊನಶಂಕರಿ, ಅಮಲಾಪುರ ಕೇಂದ್ರೀಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT