ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ| ಮಹಿಳೆಯರ ಸಬಲೀಕರಣಕ್ಕೆ ಮಾತೃಹೃದಯಿ ನೀತಿಗಳು: ಸುಧಾಕರ್‌

ಕೋವಿಡ್‌ ಸಂಕಷ್ಟಕ್ಕೆ ಮೋದಿ ಮಾನವೀಯತೆಯ ಸ್ಪರ್ಶ: ಡಾ. ಸುಧಾಕರ್‌
Last Updated 19 ಮಾರ್ಚ್ 2023, 21:22 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಮಾತೃ ಹೃದಯದಿಂದ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಮಹಿಳೆಯರ ಅಭಿವೃದ್ಧಿಗೆ ಸಮಗ್ರ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌
ಪ್ರತಿಪಾದಿಸಿದರು.

‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಬ್ರ್ಯಾಂಡ್‌ ಪ್ರಸ್ತುತಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ನವ ಕರ್ನಾಟಕ ಶೃಂಗದಲ್ಲಿ ‘ಆರೋಗ್ಯ ರಕ್ಷಣೆ ಮತ್ತು ಮಹಿಳೆಯರ ಕಲ್ಯಾಣ: ಕರ್ನಾಟಕದ ಮೈಲಿಗಲ್ಲು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿ, ವೈದ್ಯಕೀಯ ಮತ್ತು ಮಹಿಳೆಯರ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳನ್ನು ವಿವರಿಸಿದರು.

‘ಮಹಿಳೆಯರಲ್ಲಿನ ಅಪೌಷ್ಟಿಕತೆ ನಿವಾರಿಸುವುದು ಮತ್ತು ಶಿಕ್ಷಣ ನೀಡುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸಿ ನೀತಿಗಳನ್ನು ರೂಪಿಸಿ ಹೊಸ ಸ್ಪರ್ಶ ನೀಡಲಾಗಿದೆ. ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಲಾಗಿದೆ. ಇದರಿಂದ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ’ ಎಂದು ತಿಳಿಸಿದರು.

‘ಮಹಿಳೆಯರ ಸಬಲೀಕರಣಕ್ಕೆ ₹43 ಸಾವಿರ ಕೋಟಿ ಮೊತ್ತದಷ್ಟು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ದೃಷ್ಟಿಯಿಂದ ‘ಸ್ತ್ರೀ ಸಾಮರ್ಥ್ಯ’ ಯೋಜನೆಯನ್ನು ರೂಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ₹5 ಲಕ್ಷ ನೀಡುವ ಯೋಜನೆ ರೂಪಿಸಲಾಗಿದೆ. ವಸತಿ ಯೋಜನೆಗಳಲ್ಲೂ ಮಹಿಳೆಯರ ಹೆಸರಿನಲ್ಲಿಯೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಕೋವಿಡ್‌ ಸಂಕಷ್ಟದ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಿಂದ ಯಶಸ್ವಿಯಾಗಿ ನಿಯಂತ್ರಿಸಲಾಯಿತು’ ಎಂದು ತಿಳಿಸಿದರು.

‘ಕೋವಿಡ್‌ ಪಿಡುಗಿನ ಮೊದಲ, ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತತ್ತರಿಸಿದ್ದವು. ಎಷ್ಟೇ ಸಿದ್ಧತೆಗಳನ್ನು ಕೈಗೊಂಡಿದ್ದರೂ ಈ ಕಾಯಿಲೆಯನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗಿತ್ತು. ಇಂತಹ ಸಂಕಷ್ಟದ ಸಂದರ್ಭವನ್ನು ಅವಕಾಶವನ್ನಾಗಿ ಬಳಸಿ ಕೊಂಡು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳನ್ನು ಕೈಗೊಳ್ಳಲಾಯಿತು’ ಎಂದು ವಿವರಿಸಿದರು.

‘ಕೋವಿಡ್‌ಗೂ ಮುನ್ನ ಕೇವಲ 5,000 ವೈದ್ಯಕೀಯ ಆಮ್ಲಜನಕ ಸಂಪರ್ಕ ಹೊಂದಿದ್ದ ಹಾಸಿಗೆಗಳಿದ್ದವು. ಈಗ 30 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಆಮ್ಲಜನಕ ಸಂಪರ್ಕ ಹೊಂದಿದ್ದ ಹಾಸಿಗೆಗಳಿವೆ. ಜಿಲ್ಲಾ, ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಇಂತಹ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ನಗರ ಪ್ರದೇಶಗಳ ಬಡವರಿಗೆ ಪ್ರಾಥಮಿಕ ಹಂತದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು 438 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಯಿತು’ ಎಂದು ತಿಳಿಸಿದರು.

ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ‘ಇದುವರೆಗಿನ ಕೊರತೆಗಳನ್ನು ನೀಗಿಸಿಕೊಂಡು ದೇಶವನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯೋನ್ಮುಖರಾಗಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೂ ಅನುಷ್ಠಾನಗೊಳಿಸಿದೆ’ ಎಂದರು.

‘ಅಡುಗೆ ಮನೆಯಿಂದ ಆಕಾಶದವರೆಗಿನ ಎಲ್ಲ ಕಾರ್ಯಗಳಲ್ಲೂ ಮಹಿಳೆಯರು ಭಾಗಿಯಾಗಿದ್ದಾರೆ. ಸಮರಕ್ಕೂ ಮಹಿಳೆಯರು ಸಿದ್ಧರಾಗಿದ್ದಾರೆ. ಮಹಿಳೆಯರ ಜೀವನ ಸುಧಾರಣೆಗೆ ಬಸವರಾಜ ಬೊಮ್ಮಾಯಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ‘ತೃತೀಯ ಲಿಂಗಿಗಳಿಗೂ ಮೊದಲ ಬಾರಿ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ’ ಎಂದರು.

‘ಪ್ರಜಾವಾಣಿ’ಯ ವರದಿಗಾರರ ವಿಭಾಗದ ಮುಖ್ಯಸ್ಥ ವೈ.ಗ. ಜಗದೀಶ್‌ ಗೋಷ್ಠಿಯನ್ನು ನಿರ್ವಹಿಸಿದರು.

‘ಆರೋಗ್ಯ ಕ್ಷೇತ್ರದಲ್ಲಿ ಭಾರತ ಸೂಪರ್‌ ಪವರ್‌’

‘ಭಾರತ ಆರೋಗ್ಯ ಕ್ಷೇತ್ರದಲ್ಲಿ ಈಗ ಶ್ರೀಮಂತವಾಗಿದೆ. ವೈದ್ಯಕೀಯ ಕ್ಷೇತ್ರದ ಪ‍್ರಗತಿಯಲ್ಲಿ ಕರ್ನಾಟಕವೂ ಮುಂಚೂಣಿಯಲ್ಲಿದೆ. ಹೀಗಾಗಿ, ಭಾರತ ಆರೋಗ್ಯ ಕ್ಷೇತ್ರದಲ್ಲೂ ಸೂಪರ್‌ ಪವರ್ ಆಗಲಿದೆ’ ಎಂದು ಮಣಿಪಾಲ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್‌ ಪ್ರತಿಪಾದಿಸಿದರು.

‘ಮೊದಲು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈ, ಮುಂಬೈ, ಅಮೆರಿಕಕ್ಕೆ ಹೋಗುವ ಪರಿಸ್ಥಿತಿ ಇತ್ತು. ಇಲ್ಲಿನ ಪ್ರತಿಭಾವಂತ ವೈದ್ಯರು ಅಮೆರಿಕದಂತಹ ದೇಶಗಳಿಗೆ ತೆರಳುತ್ತಿದ್ದರು. ಆದರೆ, ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಮೆರಿಕ, ಇಂಗ್ಲೆಂಡ್‌, ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಜನರು ಚಿಕಿತ್ಸೆಗೆ ಭಾರತಕ್ಕೆ ಬರುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಗೆ ಇದು ಸಾಕ್ಷಿ’ ಎಂದರು.

‘ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಂದಾಗಿ ಕೋವಿಡ್‌ ಸಂದರ್ಭದಲ್ಲಿ ಸಾವಿರಾರು ಜೀವಗಳನ್ನು ರಕ್ಷಿಸಲಾಗಿದೆ’ ಎಂದು ತಿಳಿಸಿದರು.

‘ಕರ್ನಾಟಕ ಅಭಿವೃದ್ಧಿಗೆ ಮಾದರಿ’

‘ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕ ಮಾದರಿಯಾಗಿದೆ. ಆದರೆ, ಇದನ್ನು ಬ್ರ್ಯಾಂಡ್‌ ರೂಪದಲ್ಲಿ ಪ್ರಚುರಪಡಿಸಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಸ್‌.ಆರ್‌. ಕೇಶವ ಅಭಿಪ್ರಾಯಪಟ್ಟರು.

‘ಎಲ್ಲರನ್ನೂ ಒಳಗೊಳ್ಳುವಿಕೆಯ ನೀತಿಯಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ. ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ವಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಪ್ರತಿಯೊಂದು ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಅಸಂಘಟಿತ ವಲಯದಲ್ಲಿನ ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT