ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪಕರ ಕೊರತೆಯಿಂದ ಜಂಟಿ ಸರ್ವೆ ವಿಳಂಬ: ಈಶ್ವರ ಖಂಡ್ರೆ

ಅರಣ್ಯ ಇಲಾಖೆಗೆ ಹೊಸ ಲಾಂಛನ ಬಿಡುಗಡೆ
Published 26 ಜೂನ್ 2023, 15:59 IST
Last Updated 26 ಜೂನ್ 2023, 15:59 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಭೂಮಿಯ ಒತ್ತುವರಿ ಸಮಸ್ಯೆಯನ್ನು ಬಗೆಹರಿಸಲು ಕಂದಾಯ ಇಲಾಖೆಯ ಜತೆ ಸೇರಿ ಜಂಟಿ ಸರ್ವೆ ನಡೆಸುವ ಅಗತ್ಯವಿದ್ದು, ಭೂಮಾಪಕರ ಕೊರತೆಯಿಂದ ಈ ಪ್ರಕ್ರಿಯೆ ತಡವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಅಧಿವೇಶನದ ವೇಳೆ ಕಂದಾಯ ಸಚಿವರ ಜತೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು ಆರು ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಾಡು, ಸಸ್ಯ, ಪ್ರಾಣಿ  ಮತ್ತು ಪಕ್ಷಿ ಸಂಕುಲದ ರಕ್ಷಣೆ ಅರಣ್ಯ ಇಲಾಖೆಯ ಮುಖ್ಯ ಕರ್ತವ್ಯ.‌ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಕಡಿದರೆ, ಅರಣ್ಯ ಭೂಮಿ ಒತ್ತುವರಿ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಸಿದರು.

ಕೆಲವು ಕಡೆಗಳಲ್ಲಿ ಮರ ಕಡಿದು ಬುಡಕ್ಕೆ ಬೆಂಕಿ ಹಚ್ಚಿ, ಜೆಸಿಬಿಯಿಂದ ಭೂಮಿ ಮಟ್ಟ ಮಾಡಿ ಅರಣ್ಯ ಭೂಮಿ ಕಬಳಿಸಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಾನವ ಮತ್ತು ಕಾಡು ಮೃಗಗಳ ನಡುವಿನ ಸಂಘರ್ಷ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ 2022–23 ನೇ ಸಾಲಿನಲ್ಲಿ ವನ್ಯಮೃಗಗಳ ದಾಳಿಯಿಂದ 51 ಮಂದಿಯ ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ ಎಂಬ ಮಾಹಿತಿ ಇದೆ ಎಂದರು. 

‘ರಾಜ್ಯದಲ್ಲಿ 1.2 ಲಕ್ಷ ಹೆಕ್ಟೇರ್‌ಗಳಷ್ಟು ಹಸಿರು ಪ್ರದೇಶದ ವ್ಯಾಪ್ತಿ ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷಾ ವರದಿ ಹೇಳಿದೆ. ಹಸಿರು ವ್ಯಾಪ್ತಿ ಹೆಚ್ಚಳವನ್ನು ಶೇ 21 ರಿಂದ ಶೇ 33 ಕ್ಕೆ ಹೆಚ್ಚಿಸುವುದು ನಮ್ಮ ಗುರಿ’ ಎಂದು ಖಂಡ್ರೆ ತಿಳಿಸಿದರು.

ಜುಲೈ 1 ರಿಂದ 7 ರವರೆಗೆ ರಾಜ್ಯದಾದ್ಯಂತ ವನಮಹೋತ್ಸವ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ 1 ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ನೆಟ್ಟ ಗಿಡಗಳ ಪೈಕಿ ಶೇ 50 ರಿಂದ 60 ರಷ್ಟು ಬದುಕಿ ಉಳಿದಿವೆ. ಈ ಬಾರಿ ನೆಡಲಾಗುವ ಸಸಿಗಳ ಜಿಯೋ ಟ್ಯಾಗ್‌ ಮಾಡಲಾಗುತ್ತಿದ್ದು, ಶೇ 80 ರಷ್ಟು ಸಸಿ ಉಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಹೊಸ ಲಾಂಛನ ಬಿಡುಗಡೆ: ಅರಣ್ಯ ಇಲಾಖೆಗೆ ಹೊಸ ಲಾಂಛನ ರೂಪಿಸುವ ಉದ್ದೇಶದಿಂದ ನಡೆದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದ ಮೈಸೂರಿನ ಶಮಂತ್ ಗೊರೂರು ಅವರಿಗೆ ₹ 20 ಸಾವಿರ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಸಚಿವರು ವಿತರಿಸಿದರು. ಇದೇ ಸಂದರ್ಭದಲ್ಲಿ ಲಾಂಛನವನ್ನು ಬಿಡುಗಡೆ ಮಾಡಿದರು.

335 ಹುದ್ದೆಗಳ ಭರ್ತಿಗೆ ಅನುಮತಿ

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 335 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ಅಗತ್ಯವಿಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT