ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಬಣಗಳಿಲ್ಲ: ಸಿದ್ದರಾಮಯ್ಯ

Last Updated 21 ಜೂನ್ 2021, 21:18 IST
ಅಕ್ಷರ ಗಾತ್ರ

ಕೊಪ್ಪಳ: ‘ಕಾಂಗ್ರೆಸ್‌ನಲ್ಲಿ‌ ಬಣಗಳಿಲ್ಲ. ಭಿನ್ನಾಭಿಪ್ರಾಯ,ಒಡಕಿನ ಮಾತೇ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನಗೆ ತಿಳಿಸಿಯೇ ದೆಹಲಿಗೆ ತೆರಳಿದ್ದು, ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿಯಾಗುವರು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಚುನಾವಣೆ ಇನ್ನೂ ದೂರವಿದೆ. ಚುನಾವಣೆ ನಡೆದು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತು ಎಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ. ಕೆಲವರು ನನ್ನನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಸಿದ್ದು ಮುಂದಿನ ಸಿಎಂ:ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲು ಶಾಸಕರಾಘವೇಂದ್ರ ಹಿಟ್ನಾಳ ಸಮಾರಂಭ ಏರ್ಪಡಿಸಿದ್ದರು.

ಸಿದ್ದರಾಮಯ್ಯ ಅವರೂ ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಮಾತನಾಡಿದ ರಾಘವೇಂದ್ರ, ‘ಅನ್ನಭಾಗ್ಯದ ಮೂಲಕ ಬಡವರ ಹಸಿವು ನೀಗಿಸಿದ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು. ನೀವು ಬೆಂಬಲಿಸಬೇಕು’ ಎಂದು ಜನರಿಗೆ ಮನವಿ ಮಾಡಿದರು.

ವೇದಿಕೆಯಲ್ಲಿದ್ದ ಹೆಬ್ಬಾಳ ಶಾಸಕ ಭೈರತಿ ಸುರೇಶ ಅವರು ರಾಘವೇಂದ್ರ ಹಿಟ್ನಾಳ ಬಳಿ ಬಂದು, ಕಿವಿಯಲ್ಲಿ ಏನೋ ಹೇಳಿದರು. ನಂತರ ರಾಘವೇಂದ್ರ ಅವರ ಮಾತಿನ ಧಾಟಿ ಬದಲಾಯಿತು.

ಶಾಸಕ ಜಮೀರ್ ಅಹಮದ್ ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಮಾತನಾಡಲಿಲ್ಲ.

‘ಬಿಎಸ್‌ವೈ ಬದಲಾವಣೆ ಖಚಿತ’: ‘ಬಿಜೆಪಿಯಲ್ಲಿ ಗೊಂದಲ‌ಗಳಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾವಣೆ ನಿಶ್ಚಿತ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ. ನೀರಾವರಿ ಇಲಾಖೆ ಟೆಂಡರ್‌ನಲ್ಲಿ ₹2 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಬಿಜೆಪಿಯ ಎಚ್.ವಿಶ್ವನಾಥ ಅವರೇ ಆರೋಪಿಸಿದ್ದಾರೆ. ಇವು ನಾವು ಮಾಡಿದ ಆರೋಪಗಳಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT