ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಒಪಿ ಗಣಪತಿ ತಯಾರಿಸದಂತೆ ಈಗಲೇ ನೋಟಿಸ್‌: ಖಂಡ್ರೆ

‘ಮಾಲಿನ್ಯಕರ ಪಟಾಕಿಗೂ ನಿರ್ಬಂಧ: ಸೂಚನೆ ಕೊಡಿ’
Published 13 ಜೂನ್ 2024, 0:01 IST
Last Updated 13 ಜೂನ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣಪತಿ ಮೂರ್ತಿ ತಯಾರಿಸದಂತೆ ಈಗಿನಿಂದಲೇ ನೋಟಿಸ್ ನೀಡಬೇಕು’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದರು.

ಮಂಡಳಿಯ ಪ್ರಗತಿ ಪರಿಶೀಲನೆಯನ್ನು ಬುಧವಾರ ನಡೆಸಿದ ಸಚಿವರು, ‘ಪಿಒಪಿ ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಮೊದಲೇ ತಿಳಿಸಿದ್ದರೆ, ಪಿಒಪಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರಲಿಲ್ಲ ಎಂದು ಈ ಮಾದರಿಯ ಗಣಪತಿ ತಯಾರಕರು ಪ್ರತಿ ವರ್ಷ ಹೇಳುತ್ತಾರೆ. ಹಾಗಾಗಿ, ತಯಾರಿಕೆ ಆರಂಭಿಸುವ ಮೊದಲೇ ನೋಟಿಸ್‌ ನೀಡುವ ಕೆಲಸ ಮಾಡಿ’ ಎಂದು ನಿರ್ದೇಶನ ನೀಡಿದರು.

ಪಟಾಕಿ ಮಾರಾಟಗಾರರಿಗೂ ನೋಟಿಸ್: ‘ಹಸಿರು ಪಟಾಕಿ ಹೊರತಾಗಿ ಹೆಚ್ಚು ಮಾಲಿನ್ಯಕಾರಕ ಸಾಮಾನ್ಯ ಪಟಾಕಿ ಮಾರಾಟ, ದಾಸ್ತಾನು ಮಾಡದಂತೆ ಪಟಾಕಿ ಮಾರಾಟಗಾರರಿಗೆ ನೋಟಿಸ್ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಪಟಾಕಿ ಮಾರಾಟಗಾರರ ವಿಳಾಸ ಪಡೆದು, ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ಸೂಚಿಸಬೇಕು’ ಎಂದು ಖಂಡ್ರೆ ಆದೇಶಿಸಿದರು.

‘ರಾಜ್ಯದಾದ್ಯಂತ ಇರುವ ಕೆರೆಕಟ್ಟೆಗಳ ನೀರನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಕೈಗಾರಿಕಾ ವಲಯಗಳ ಸುತ್ತಮುತ್ತ ರಾಜಕಾಲುವೆ, ನದಿಮೂಲ, ಹಳ್ಳಗಳಿಗೆ ನೇರವಾಗಿ ತ್ಯಾಜ್ಯ ಹರಿಸುತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದೂ ತಿಳಿಸಿದರು.

ಸ್ಥಳೀಯ ಸಂಸ್ಥೆ ವಿರುದ್ಧ ಮೊಕದ್ದಮೆ: ‘ಸ್ಪಷ್ಟ ಸೂಚನೆ, ನೋಟಿಸ್‌ಗಳ ಹೊರತಾಗಿಯೂ ಜಲತ್ಯಾಜ್ಯ ಸಂಸ್ಕರಿಸಲು ಎಸ್‌ಟಿಪಿ ಅಳವಡಿಸದ, ಅಳವಡಿಸಿದ ಎಸ್‌ಟಿಪಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ನಿಯಮಿತವಾಗಿ ಪರಿಶೀಲಿಸಿ, ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಜಲ ಮೂಲಗಳಿಗೆ ಸಂಪರ್ಕ ಇರುವ ಮಳೆ ನೀರು ಕಾಲುವೆ, ಚರಂಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಳೆಗಾಲಕ್ಕೆ ಮೊದಲು ಮತ್ತು ನಿಯಮಿತವಾಗಿ ತೆರವು ಮಾಡಿ ನೀರಿನ ಗುಣಮಟ್ಟ ಕಾಪಾಡುವಂತೆ ನೋಟಿಸ್‌ ನೀಡಬೇಕು’ ಎಂದು ಸಚಿವರು ಸೂಚನೆ ನೀಡಿದರು.

ಮಂಡಳಿಯ ಅಧಿಕಾರೇತರ ಸದಸ್ಯರಾದ ಶರಣಕುಮಾರ್ ಮೋದಿ, ಡಾ. ಪ್ರದೀಪ್ ಸಿ, ಮರಿಸ್ವಾಮಿ ಗೌಡ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಸಭೆಯಲ್ಲಿ ಇದ್ದರು.

‘ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೊಸ ನೀತಿ’

‘ಅಪಾಯಕಾರಿಯಾದ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಾಗಿಸಿ ವಿಲೇವಾರಿ ಮಾಡುವ ಅಗತ್ಯವಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ನೂತನ ನೀತಿ ರೂಪಿಸಬೇಕಿದೆ. ನೀತಿಯ ಕರಡು ಸಿದ್ಧಪಡಿಸಬೇಕು’ ಎಂದು ಮಂಡಳಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ‘ನರ್ಸಿಂಗ್ ಹೋಂ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಅಲ್ಲದೆ ಮನೆಗಳಲ್ಲಿಯೇ ಬಳಸುವ ಸಿರಿಂಜ್ ಬ್ಯಾಂಡೇಜ್ ಮತ್ತಿತರ ವೈದ್ಯಕೀಯ ತ್ಯಾಜ್ಯವನ್ನು ಒಣ ತ್ಯಾಜ್ಯದ ಜೊತೆ ವಿಲೇವಾರಿ ಮಾಡುತ್ತಿರುವುದೂ ಗಮನಕ್ಕೆ ಬಂದಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೊಸ ನೀತಿ ತರುವ ಅಗತ್ಯವಿದೆ’ ಎಂದೂ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT