ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದಲ್ಲೇ ಇಲ್ಲ ಮಹಿಳಾ ಪ್ರಾತಿನಿಧ್ಯ: ಲಕ್ಷ್ಮೀ ಹೆಬ್ಬಾಳಕರ ಬೇಸರ

Published 12 ಮಾರ್ಚ್ 2024, 23:47 IST
Last Updated 12 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ‘ಸಚಿವ ಸಂಪುಟದಲ್ಲೇ ಸೂಕ್ತ ಮಹಿಳಾ ಪ್ರಾತಿನಿಧ್ಯ ಇಲ್ಲ. ಈ ಸರ್ಕಾರದಲ್ಲಿ ನಾನೊಬ್ಬಳೇ ಮಹಿಳಾ ಮಂತ್ರಿ. ಅದೂ ಅರ್ಹತೆಗಾಗಿ ಅಲ್ಲ, ಮಹಿಳಾ ಕೋಟಾದ ಫಲ. ಸರ್ಕಾರಿ ಉದ್ಯೋಗ ಸೇರಿದಂತೆ ಎಲ್ಲೆಡೆಯೂ ಅವಕಾಶಗಳು ಕಡಿಮೆ ಇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೇಸರ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದರೂ, ಪುರುಷರಿಗೆ ಸಮಾನವಾದ ಅವಕಾಶಗಳು ಇಂದಿಗೂ ಸಿಗುತ್ತಿಲ್ಲ. ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಾಧನೆ ಸಾರ್ಥಕವಾಗುತ್ತದೆ. ಕೌಟುಂಬಿಕ ಚೌಕಟ್ಟಿನೊಳಗೇ ಇದ್ದುಕೊಂಡು, ಸೀಮಿತ ಅವಕಾಶ ಬಳಸಿಕೊಂಡು ಭಾರತದ ಮಹಿಳೆಯರು ಮಾಡುತ್ತಿರುವ ಸಾಧನೆಗೆ ವಿಶ್ವವೇ ಬೆರಗಾಗಿದೆ. ಕೂಲಿ ಕಾರ್ಮಿಕರಾಗಿ, ಗಗನಯಾನಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸಿದ್ದಾರೆ’ ಎಂದರು.

ಗಾಂಧಿ ಮಹಾತ್ಮರಾಗಲು, ನೆಹರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಲು ಅವರ ಪತ್ನಿಯರ ತ್ಯಾಗ, ಪರಿಶ್ರಮವೂ ಇದೆ. ಬಹುತೇಕ ಪುರುಷ ಸಾಧಕರ ಹಿಂದೆಯೂ ಅವರ ಕುಟುಂಬದ ಮಹಿಳೆಯರ ಪಾತ್ರ ಇರುತ್ತದೆ ಎಂದು ಹೇಳಿದರು.

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ 20 ಸಾಧಕಿಯರು ಹಾಗೂ ಆರು ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಏಳು ಸ್ತ್ರೀಶಕ್ತಿ ಗುಂಪುಗಳು, ಮೂರು ಸ್ತ್ರೀಶಕ್ತಿ ಒಕ್ಕೂಟಗಳಿಗೆ ಯಶೋದಮ್ಮ ದಾಸಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಪ್ರಕಾಶ್‌, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕಿ ಎಚ್‌. ಪುಷ್ಪಲತಾ, ಬಾಲಭವನದ ಕಾರ್ಯದರ್ಶಿ ನಿಶ್ಚಲ್‌, ಕಾಂಗ್ರೆಸ್ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT