ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲ ವಿಡಿಯೊ ಪ್ರಕರಣ: ಶೀಘ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ- ಪರಮೇಶ್ವರ

Published 29 ಏಪ್ರಿಲ್ 2024, 6:27 IST
Last Updated 29 ಏಪ್ರಿಲ್ 2024, 6:27 IST
ಅಕ್ಷರ ಗಾತ್ರ

ಬೆಂಗಳೂರು: 'ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ' ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು‌.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ವೈಜ್ಞಾನಿಕ ವರದಿಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ‌. ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಿದ್ದಾರೆ' ಎಂದರು.

'ಎಸ್ಐಟಿ ತಂಡವು ಮುಕ್ತವಾಗಿ ಕೆಲಸ ಮಾಡಲಿದೆ. ಪ್ರಕರಣದ ವರದಿ ಸಲ್ಲಿಸಲು ಯಾವುದೇ ರೀತಿಯ ಸಮಯ ನಿಗದಿಪಡಿಸಿಲ್ಲ. ತನಿಖೆ ವಿಳಂಬ ಆಗಬಾರದು ಎಂಬ ದೃಷ್ಟಿಯಿಂದ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಮೌಖಿಕವಾಗಿ ತಿಳಿಸಲಾಗಿದೆ. ವರದಿಯನ್ನು ನಾಳೆಯೇ ಕೊಡಿ, ನಾಡಿದ್ದು ಕೊಡಿ ಎಂದು ದಿನ ನಿಗದಿಪಡಿಸಿಲ್ಲ' ಎಂದು ಸ್ಪಷ್ಟಪಡಿಸಿದರು.

'ಮಹಿಳಾ ಆಯೋಗವು ಬರೆದ ಪತ್ರದ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದೂರುಗಳನ್ನು ಎಸ್‌ಐಟಿ ಪಡೆಯಲಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್‌ಐಟಿ ಕೆಲಸ ಮಾಡಲಿದೆ. ಸಂತ್ರಸ್ತರಿಗೆ ಜೀವ ಭಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು' ಎಂದು ತಿಳಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT