ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೈಕೋರ್ಟ್‌

ರಾಜ್ಯ ಒಕ್ಕಲಿಗರ ಸಂಘದೊಳಗಿನ ಕಿತ್ತಾಟಕ್ಕೆ ಬೇಸರ
Published 8 ಜುಲೈ 2023, 2:17 IST
Last Updated 8 ಜುಲೈ 2023, 2:17 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ವ್ಯವಸ್ಥೆ ಕುಲಗೆಟ್ಟು ಹೋಗಿದ್ದು, ಎಲ್ಲೆಡೆ ಕುದುರೆ ವ್ಯಾಪಾರ ಮೆರೆದಾಡುತ್ತಿದೆ. ಇದನ್ನೆಲ್ಲಾ ಹೇಳಲು ನನಗೆ ನಾಚಿಕೆಯಾಗುತ್ತಿದೆ‘ ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಒಕ್ಕಲಿಗರ ಸಂಘದೊಳಗಿನ ಕಿತ್ತಾಟಕ್ಕೆ ತೀವ್ರ ವ್ಯಥೆ ವ್ಯಕ್ತಪಡಿಸಿದೆ.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಪ್ರಶ್ನಿಸಿ ಸಂಘದ ಸದಸ್ಯರಾದ ಹಾಸನ ಜಿಲ್ಲೆಯ ಸಂಕ್ಲಾಪುರದ ಎಸ್‌.ಎಸ್‌.ರಘುಗೌಡ, ಸೇರಿದಂತೆ ನಾಲ್ವರು ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು‌.

ಈ ವೇಳೆ ನ್ಯಾಯಪೀಠವು, ಸಿ.ಎನ್‌.ಬಾಲಕೃಷ್ಣ ಮತ್ತು ಕೋನಪ್ಪ ರೆಡ್ಡಿ ನೇತೃತ್ವದ ಕಾರ್ಯಕಾರಿ ಸಮಿತಿ ವಿರುದ್ಧ ಕೆಂಚಪ್ಪಗೌಡರ ಗುಂಪು 2023ರ ಮೇ 9ರಂದು ಅವಿಶ್ವಾಸ ನಿರ್ಣಯ ಮಂಡಿಸಿ, ನಂತರ ಚುನಾವಣೆ ನಡೆಸಿ ಅಧಿಕಾರ ಪಡೆದದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಸಲು ದಾವೆಯಲ್ಲಿನ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು.

ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಕೆಂಚಪ್ಪಗೌಡರ ಪರ ಹಾಜರಾಗಿದ್ದ ಹಿರಿಯ ವಕೀಲ ಡಿ.ಆರ್‌.ರವಿಶಂಕರ್‌, ‘ಉಭಯ ಬಣಗಳು 17ರವರೆಗೆ ಯಾವುದೇ ಸಭೆ ಹಾಗೂ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಿಸಬೇಕು. ಇಲ್ಲದಿದಲ್ಲಿ ಇದು ರೆಸಾರ್ಟ್‌ ರಾಜಕೀಯಕ್ಕೆ ದಾರಿ ಮಾಡಿಕೊಡುತ್ತದೆ‘ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ, ‘ಬಾಲಕೃಷ್ಣ ನೇತೃತ್ವದ ಗುಂಪು ಇದೇ 17ರವರೆಗೆ ಯಾವುದೇ ಸಭೆ ನಡೆಸಬಾರದು ಹಾಗೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಾರದು‘ ಎಂದು ತಾಕೀತು ಮಾಡಿದರು. ಅಂತೆಯೇ, ಹೈಕೋರ್ಟ್‌ ಮೆಟ್ಟಿಲೇರಿರುವ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರಿಗೆ ಪೂರ್ವ ನೋಟಿಸ್‌ ನೀಡಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದರು. 

ಅರ್ಜಿ ವಿಚಾರಣೆ ಮುಂದೂಡುವ ಮೊದಲು ಸಂದೇಶ್‌ ಅವರು ಸಂಘದ ಚಟುವಟಿಕೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರಲ್ಲದೆ, ‘ಸಂಘದಲ್ಲಿ ಮೆಡಿಕಲ್ ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಕೋಟಿಗಟ್ಟಲೆ ರೂಪಾಯಿಗಳಿಗೆ ಮಾರಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಈ ಕುಸ್ತಿ ನಡೆಯುತ್ತಿದೆ. 1904ರಲ್ಲಿ ಸ್ಥಾಪನೆಗೊಂಡ ಈ ಸಂಘದ ಮೂಲ ಉದ್ದೇಶಗಳೇ ಇಂದು ಮರೆಯಾಗಿವೆ. ಸಂಘದ ಸದಸ್ಯರ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ‘ ಎಂದರು. 

‘ನನ್ನ ಮಗಳಿಗೆ ಕಿಮ್ಸ್‌ನಲ್ಲಿ (ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ವೈದ್ಯಕೀಯ ಪದವಿಗೆ ಸೇರಿಸುವಂತೆ ನನ್ನನ್ನು ಬಲ್ಲವರೊಬ್ಬರು ಸಲಹೆ ನೀಡಿದ್ದರು. ಆದರೆ, ಸಂಘದೊಳಗಿನ ಕಿತ್ತಾಟ‌ ನೋಡಿ ಇವರ ಸಹವಾಸವೇ ಬೇಡ ಎಂದು ಕಿಮ್ಸ್‌ನಿಂದ ದೂರ ಉಳಿದೆ. ಇಂದು ಎಲ್ಲೆಡೆ ಕುದುರೆ ವ್ಯಾಪಾರ ವ್ಯಾಪಕವಾಗಿ ತಾಂಡವವಾಡುತ್ತಿದೆ. ಬಂಡವಾಳ ಹಾಕಿ ಅದನ್ನು ವಾಪಸು ತೆಗೆಯುವ ಪ್ರವೃತ್ತಿ ನೋಡಿದರೆ ಹೇಸಿಗೆ ಹುಟ್ಟಿಸುತ್ತದೆ‘ ಎಂದು ತಮ್ಮ ಕಹಿ ಅನುಭವವನ್ನು ವಿವರಿಸಿದರು. ಮೇಲ್ಮನವಿದಾರರ ಪರ ವಕೀಲ ಮಧುಕರ ದೇಶಪಾಂಡೆ ಮತ್ತು ಬಸವರಾಜು ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT