ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸುವರ್ಣ ವಿಧಾನಸೌಧವೇನು ಜಿಲ್ಲಾಡಳಿತ ಭವನವೇ?!

ಜಿಲ್ಲಾ ಮಟ್ಟದ ಕಚೇರಿಗಳ ಸ್ಥಳಾಂತರಕ್ಕೆ ವಿರೋಧ
Last Updated 2 ಜುಲೈ 2020, 19:39 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಿ ರೂಪಗೊಳ್ಳಬೇಕಿದ್ದ ಇಲ್ಲಿನ ಸುವರ್ಣ ವಿಧಾನಸೌಧವನ್ನು ಜಿಲ್ಲಾ ಮಟ್ಟದ ಕಚೇರಿಗಳ ಸ್ಥಳಾಂತರದ ಮೂಲಕ ಜಿಲ್ಲಾಡಳಿತ ಭವನ ಅಥವಾ ಮಿನಿ ವಿಧಾನಸೌಧದಂತೆ ಪರಿಗಣಿಸಿರುವ ಸರ್ಕಾರದ ನಿರ್ಧಾರಕ್ಕೆ ಪ್ರಜ್ಞಾವಂತರು ಮತ್ತು ಹೋರಾಟಗಾರರಿಂದ ಆಕ್ರೋಶ ವ್ಯಕ್ತವಾಗಿದೆ.

ವಿವಿಧ 23 ಸಣ್ಣ ಪುಟ್ಟ ಕಚೇರಿಗಳನ್ನು ಸ್ಥಳಾಂತರಿಸುವಂತೆ ಈಚೆಗೆ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ, ಸೌಧವನ್ನು ನಿರ್ಮಿಸಿದ ಆಶೋತ್ತರಗಳಿಗೆ ‘ಕಲ್ಲು’ ಹಾಕುವ ಕೆಲಸ ನಡೆದಿದೆ ಎಂದು ಮುಖಂಡರು ಆರೋಪಿಸುತ್ತಿದ್ದಾರೆ. ನಗರದಲ್ಲಿದ್ದ ಕಚೇರಿಗಳನ್ನು ಅಲ್ಲಿಗೆ ಸಾಗಿಸಿ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಕೊಡುವ ಪ್ರಯತ್ನವೂ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.

‘ವರ್ಷದ ಬಹುತೇಕ ದಿನಗಳು ಖಾಲಿ ಇರುವ ಈ ಭವನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗುವಂತಹ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಬೇಕು’ ಎನ್ನುವುದು ಭಾಗದ ಮಠಾಧೀಶರು, ಹೋರಾಟಗಾರರು ಹಾಗೂ ಜನರ ಹಕ್ಕೊತ್ತಾಯವಾಗಿದೆ. ಅವರ ಬೇಡಿಕೆ ಸ್ಪಂದಿಸುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಲವು ಬಾರಿ ನೀಡಿದ್ದಾರೆ. ಆದರೆ, ಈ ನಡುವೆ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳ ಸ್ಥಳಾಂತರಕ್ಕೆ ಹಿಂದಿನ ಜಿಲ್ಲಾಧಿಕಾರಿ ಆದೇಶಿಸಿರುವುದು ‘ಸೌಧ’ದ ಮೌಲ್ಯವನ್ನು ಕುಗ್ಗಿಸುವ ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಬಗ್ಗೆ ಇಲ್ಲಿನ ಸಚಿವರು ಅಥವಾ ಜನಪ್ರತಿನಿಧಿಗಳು ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ.

ಬರಲೇ ಇಲ್ಲ!
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದ ಪ್ರಮುಖ ಐದು ಕಚೇರಿಗಳನ್ನು ಸುವರ್ಣ ವಿಧಾನಸೌಧದಲ್ಲೂ ಆರಂಭಿಸಲಾಗುವುದು ಎಂದು ಸಚಿವ ಈಶ್ವರಪ್ಪ ಪ್ರಕಟಿಸಿದ್ದರು. ಆದರೆ, ತಿಂಗಳುಗಳೇ ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ!

ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ನಿರ್ದೇಶನಾಲಯದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು ಎಂದು ಹಿಂದಿನ ಸರ್ಕಾರದಲ್ಲೇ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಆದರೆ, ಈ ಕೆಲಸವೂ ಆಗಿಲ್ಲ. ರಾಜ್ಯ ಮಾಹಿತಿ ಆಯುಕ್ತರ ಕಚೇರಿಯಷ್ಟೇ ಆರಂಭಗೊಂಡಿದೆ.

ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ನಿರ್ದೇಶನಾಲಯವನ್ನು ಬೆಂಗಳೂರಿನಲ್ಲೇ ಮುಂದುವರಿಸಬೇಕು ಎಂದು ಈ ಭಾಗದ ಸಚಿವರೇ ಆಗಿರುವ ಶಿವರಾಮ್‌ ಹೆಬ್ಬಾರ್‌ ಸೂಚಿಸಿರುವುದು ವಿರೋಧಕ್ಕೆ ಕಾರಣವಾಗಿದೆ.

ಪ್ರಭಾವಿಗಳಿದ್ದರೂ
ವಿಧಾನಸಭೆ ಉಪಾಸಭಾಧ್ಯಕ್ಷ (ಆನಂದ ಮಾಮನಿ), ವಿಧಾನಪರಿಷತ್‌ ಮುಖ್ಯಸಚೇತಕ (ಮಹಾಂತೇಶ ಕವಟಗಿಮಠ), ಒಬ್ಬ ಉಪ ಮುಖ್ಯಮಂತ್ರಿ ಹಾಗೂ ಪ್ರಭಾವಿ ಸಚಿವರಿದ್ದರೂ ಸುವರ್ಣ ವಿಧಾನಸೌಧಕ್ಕೆ ಸಚಿವಾಲಯ ಮಟ್ಟದ ಕಚೇರಿಗಳನ್ನು ತರುವುದು ಸಾಧ್ಯವಾಗಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

‘ಸುವರ್ಣ ವಿಧಾನಸೌಧ ಕಟ್ಟಿರುವುದು ಸಣ್ಣಪುಟ್ಟ ಕಚೇರಿಗಳಿಗಾಗಿ ಅಲ್ಲ ಅಥವಾ ಬಾಡಿಗೆ ಉಳಿಸುವುದಕ್ಕಲ್ಲ. ಅದೇನು ಜಿಲ್ಲಾಡಳಿತ ಭವನ ಅಥವಾ ಮಿನಿ ವಿಧಾನಸೌಧವೇನಲ್ಲ. ಅದಕ್ಕೆ ದೊಡ್ಡ ಘನತೆ ಇದೆ. ಹೀಗಾಗಿ, ಜಿಲ್ಲಾ ಕಚೇರಿಗಳನ್ನು ಸ್ಥಳಾಂತರಿಸುವ ನಿರ್ಧಾರ ತಪ್ಪು ಹಾಗೂ ಮೂರ್ಖತನದಿಂದ ಕೂಡಿದೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

‘ಸಾಮಾನ್ಯ ಜನರು ಸುವರ್ಣ ವಿಧಾನಸೌಧಕ್ಕೆ ಹೋಗುವುದಕ್ಕೆ ಸಾಧ್ಯವಾಗದ ಸ್ಥಿತಿ ಇದೆ. ಈ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರಿಗಳ ಮಧ್ಯೆ ದೊಡ್ಡ ಗೋಡೆ ನಿರ್ಮಿಸಲು ಸರ್ಕಾರ ಹೊರಟಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಕತ್ತಲೆಯಲ್ಲಿಟ್ಟು ಅಧಿಕಾರಿಗಳು ಈ ನಿರ್ಧಾರ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ದೂರಿದರು.

ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT