ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಮೊಘಲ್ ಸರ್ಕಾರವಲ್ಲ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಚಾಟಿ

Published 15 ಏಪ್ರಿಲ್ 2024, 16:12 IST
Last Updated 15 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮದು ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಡಳಿತ ವ್ಯವಸ್ಥೆ ಎಂಬುದನ್ನು ಮರೆಯಬೇಡಿ. ಇದು ಮೊಘಲರ ಸರ್ಕಾರವಲ್ಲ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಚಾಟಿ ಬೀಸಿದೆ.

ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಮುಚ್ಚುವಂತೆ ನೀಡಲಾಗಿದ್ದ ನೋಟಿಸ್‌ ರದ್ದುಪಡಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಘಟಕ ಮುಚ್ಚಲು ಕಾರಣವೇನು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನಿಸಿತು. ಇದಕ್ಕೆ ಕೆಎಸ್‌ಪಿಸಿಬಿ ಅಧಿಕಾರಿಗಳು, ‘ಈ ಘಟಕವನ್ನು ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿಲ್ಲ’ ಎಂದು ತಿಳಿಸಿದರು.

ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಏಕಾಏಕಿ ಮುಚ್ಚಲು ಆದೇಶ ನೀಡಿದ ಬಗ್ಗೆ ಕಾರಣ ಕೊಡಬೇಕು. ನಿಮ್ಮ ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು’ ಎಂದು ಅತೃಪ್ತಿ ವ್ಯಕ್ತಪಡಿಸಿತು. ವಿಚಾರಣೆಯನ್ನು ಜೂನ್‌ 4ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಹೊರವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕವನ್ನು ಅರ್ಜಿದಾರರು 2021ರಲ್ಲಿ ಖರೀದಿಸಿದ್ದಾರೆ. ಇದಕ್ಕೆ ಅಗತ್ಯ ಅನುಮತಿ ಪಡೆದಿಲ್ಲ ಹಾಗೂ ಕೆಲವು ಪರಿಸರ  ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂಬ ಆರೋಪದಡಿ ಕಾರ್ಖಾನೆಯನ್ನು ಮುಚ್ಚುವಂತೆ ಕಲಬುರಗಿ ವಲಯದ ಕೆಎಸ್‌ಪಿಸಿಬಿ ಅಧಿಕಾರಿಗಳು 2024ರ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದರು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT