ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯವರೆಗೂ ನಡೆದ ಜನಸ್ಪಂದನ: ಮುಖ್ಯಮಂತ್ರಿ ಮುಂದೆ ಅಹವಾಲುಗಳ ಮಹಾಪೂರ

ಜಿಲ್ಲಾಧಿಕಾರಿಗಳಿಗೆ ಚಾಟಿ ಬೀಸಿದ ಸಿದ್ದರಾಮಯ್ಯ
Published 27 ನವೆಂಬರ್ 2023, 19:48 IST
Last Updated 27 ನವೆಂಬರ್ 2023, 19:48 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತ ಚುಕ್ಕಾಣಿ ಹಿಡಿದು ಆರು ತಿಂಗಳು ತುಂಬಿದ ಸಂಭ್ರಮದ ಬೆನ್ನಲ್ಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹಮ್ಮಿಕೊಂಡಿದ್ದ ‘ಜನ ಸ್ಪಂದನ’ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ತರಹೇವಾರಿ ದೂರು–ದುಮ್ಮಾನ ಹೊತ್ತು ಮೂರು ಸಾವಿರಕ್ಕೂ ಹೆಚ್ಚು ಜನರು ಬಂದರು. ಕೆಲವು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಮುಖ್ಯಮಂತ್ರಿ, ಇತ್ಯರ್ಥವಾಗದ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು ವಾರದೊಳಗೆ ಸ್ಪಂದಿಸಬೇಕೆಂದು ತಾಕೀತು ಮಾಡಿದರು.

ಎಲ್ಲ ಇಲಾಖೆಗಳ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳನ್ನು ಇದೇ ಮೊದಲ ಬಾರಿಗೆ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಒಂದೇ ಸೂರಿನಡಿ ಕುಳ್ಳಿರಿಸಿದ ಮುಖ್ಯಮಂತ್ರಿ, ಜನರ ಬೇಡಿಕೆಗಳಿಗೆ ಕಿವಿಯಾದರು. ಸಾವಧಾನವಾಗಿ ಎಲ್ಲ ಸಮಸ್ಯೆಗಳನ್ನು ಆಲಿಸಿದರು.

ಪ್ರತಿ ಸಮಸ್ಯೆಗೂ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ವಿಡಿಯೊ ಸಂವಾದದ ಮೂಲಕ ಸಂಪರ್ಕಿಸಿ ಪರಿಹಾರ ಒದಗಿಸಲು ಸೂಚಿಸಿದರು.

ಮುಖ್ಯಮಂತ್ರಿ ಬಳಿ ತಮ್ಮ ‌ನೋವು ಭಿನ್ನವಿಸಿಕೊಂಡ ಹಲವರ ಮುಖದಲ್ಲಿ, ವರ್ಷಗಳಿಂದಲೂ ಪರಿಹಾರ ಕಾಣದ ತಮ್ಮ ಸಮಸ್ಯೆಗಳು ಇತ್ಯರ್ಥಗೊಳ್ಳಬಹುದೆಂಬ ಆಶಾಭಾವನೆ ಕಾಣಿಸಿತು. ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳನ್ನು ಗದರುತ್ತಿದ್ದ ಮುಖ್ಯಮಂತ್ರಿಯ ನಡೆ ಕೆಲವರಿಗೆ ಪರಿಹಾರ ಸಿಕ್ಕಿದಷ್ಟು ಖುಷಿ ತಂದಿತ್ತು. ಮುಖದಲ್ಲಿ ಕಿರುನಗೆ ಮೂಡಿಸಿತ್ತು.

ಬಂದಿದ್ದ ಬಹುತೇಕ ಮನವಿಗಳು, ಕುಂದುಕೊರತೆಗಳು ಸ್ಥಳೀಯಮಟ್ಟದಲ್ಲಿಯೇ ಪರಿಹಾರ ಒದಗಿಸುವಂಥದ್ದು ಆಗಿದ್ದವು. ಅಂಥ ದೂರುಗಳನ್ನು ಕಂಡು ಸಿಡಿಮಿಡಿಗೊಂಡ ಮುಖ್ಯಮಂತ್ರಿ, ‘ಸ್ಥಳೀಯ ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಬಾರದು. ಬಂದರೆ ಅದು ನಿಮ್ಮ ವೈಫಲ್ಯ. ಅದನ್ನು ಸಹಿಸುವುದಿಲ್ಲ’ ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಅಹವಾ‌ಲು ಸಲ್ಲಿಸಲು ಬೆಳ್ಳಂಬೆಳಿಗ್ಗೆಯೇ ‘ಕೃಷ್ಣಾ’ದ ಮುಂಭಾಗದಲ್ಲಿ ಜನರ ದಂಡು ಸೇರಿತ್ತು. ಮನವಿಗಳನ್ನು ಸ್ವೀಕರಿಸಲು 20 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್‌ಗಳನ್ನು ಮೀಸಲಿರಿಸಲಾಗಿತ್ತು. ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ವಿವಿಧ ಇಲಾಖೆಗಳ 300ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ, ತಂತ್ರಾಂಶದಲ್ಲಿ ದಾಖಲಿಸಿ, ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯ ಬಳಿಗೆ ಕಳುಹಿಸಲಾಯಿತು.

ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆದು, ‘ತಾಂತ್ರಿಕ‌ ತೊಂದರೆ ಇದ್ದರೆ ತಕ್ಷಣ ಬಗೆಹರಿಸಬೇಕು. ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

3 ತಿಂಗಳಿಗೊಮ್ಮೆ ‘ಜನಸ್ಪಂದನ’ ಮಾಡುತ್ತೇನೆ. ಮುಂದಿನ ಬಾರಿ ಹೆಚ್ಚು ಜನ ಬಂದರೆ, ನಿರ್ಲಕ್ಷ್ಯ ತೋರಿದ ತಳಹಂತದ ಅಧಿಕಾರಿಗಳ ವಿರುದ್ಧ ಕ್ರಮ ಖಚಿತ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಹವಾಲು ಆಲಿಸುವ ನಡುವೆಯೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸುವ ಕುರಿತಂತೆ ಚರ್ಚೆ ನಡೆಸಿದರು. ಬೆಳಗಾವಿಯ ಕನ್ನಡಾಭಿಮಾನಿಯೊಬ್ಬರು, ‘ಎಂಇಎಸ್ ಪುಂಡಾಟಿಕೆಯಿಂದ ಕನ್ನಡ‌ ಧ್ವಜಕ್ಕೆ ಅಪಮಾನವಾಗುತ್ತಿದೆ’ ಎಂದು ದೂರು ನೀಡಿದಾಗ, ಸ್ಥಳದಲ್ಲೇ ಇದ್ದ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್‌. ಹಿತೇಂದ್ರ ಅವರಿಗೆ ಈ ಬಗ್ಗೆ ಗಮನಿಸುವಂತೆ ಸೂಚಿಸಿದರು. ಅಲ್ಲದೆ, ಸೂಕ್ತ ಕ್ರಮಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಊಟಕ್ಕೆ ಹೋದವರ ಮೇಲೆ ಗರಂ: ಜನ ಸ್ಪಂದನ ನಡುವೆ ಊಟಕ್ಕೆ ತೆರಳಿದ ಅಧಿಕಾರಿಗಳ ಮೇಲೆ ಗರಂ ಆದ ಮುಖ್ಯಮಂತ್ರಿ, ‘ನಾನೇ ಇಲ್ಲಿ ಹಸಿದುಕೊಂಡು ಕುಳಿತಿದ್ದೇನೆ. ಅವರು ಅಷ್ಟು ಬೇಗ ಊಟಕ್ಕೆ ಹೋಗಬೇಕೇ? ಯಾರು  ಊಟಕ್ಕೆ ಹೋಗಿದ್ದಾರೋ ಅವರನ್ನು ತಕ್ಷಣ ಬರಲು ಹೇಳು’ ಎಂದು ತಮ್ಮ ಆಪ್ತ ಸಿಬ್ಬಂದಿಗೆ ಸೂಚಿಸಿದರು. ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿ, ಅಹವಾಲು ಸಲ್ಲಿಸಲು ಬಂದಿರುವವರ ಸಂಖ್ಯೆ ಇನ್ನೂ ಬಹಳಷ್ಟಿದೆ ಎಂದು ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ಊಟ ತರಿಸಿಕೊಂಡರು.

ನಿವೇಶನಕ್ಕಾಗಿ ಅಲೆದಾಟ: ಹಿರಿಯ ನಾಗರಿಕ ಸುಬ್ರಮಣ್ಯಂ ಎಂಬವರು ವಿಶ್ವ ಭಾರತಿ ಸೊಸೈಟಿಯಲ್ಲಿ ನಿವೇಶನ ಹಂಚಿಕೆಯಾದರೂ ನಿವೇಶನ ಸಿಗದೇ ಅಲೆದಾಡುತ್ತಿರುವುದಾಗಿ ನೋವು ಹೇಳಿಕೊಂಡರು. ‘30 ವರ್ಷದಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದೇನೆ. ಕೋರ್ಟ್‌ ತೀರ್ಪು ನನ್ನ ಪರವಾಗಿ ಬಂದಿದ್ದರೂ ಇನ್ನೂ ನಿವೇಶನ ಸಿಕ್ಕಿಲ್ಲ. ಆ ನಿವೇಶನದಲ್ಲಿ ಬೇರೆಯವರು ಮನೆ‌ ಕಟ್ಟಿದ್ದಾರೆ’ ಎಂದು ದೂರು ನೀಡಿದರು‌. ಸಮಸ್ಯೆ ಬಗೆಹರಿಸುವಂತೆ ಬಿಡಿಎ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಹರಿಹರ ಶಾಸಕರ ವಿರುದ್ಧ ದೂರು: ‘ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಲು ಕೆಲವು ಸಂಘಟನೆಗಳು ಬಿಇಒ ಮೇಲೆ ಒತ್ತಡ ಹಾಕುತ್ತಿವೆ. ಹರಿಹರ ಶಾಸಕ ಹರೀಶ್ ತೊಂದರೆ ಕೊಡುತ್ತಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ದೂರು ನೀಡಿದರು. ಕನ್ನಡ ಮತ್ತು ಉರ್ದು ಶಾಲೆ ಅದಾಗಿದ್ದು, ಕನ್ನಡ ಶಾಲೆಯಲ್ಲಿ 18 ವಿದ್ಯಾರ್ಥಿಗಳು ಇದ್ದರೆ, ಉರ್ದು ಶಾಲೆಯಲ್ಲಿ 16 ವಿದ್ಯಾರ್ಥಿಗಳು ಇದ್ದಾರೆ. ಶಾಸಕ ಹಾಗೂ ಬಿಇಒ ಅವರು ಉರ್ದು ಶಾಲೆಯನ್ನು ಸ್ಥಳಾಂತರಿಸಲು ಒತ್ತಡ ಹೇರುತ್ತಿದ್ದಾರೆ ಎಂದು ದೂರು ನೀಡಿದರು‌. ಈ ಮನವಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ರಾಕೇಶ್‌ ಸಿದ್ದರಾಮಯ್ಯ ಟ್ರಸ್ಟ್‌ಗೆ ಜಮೀನು: ‘ದಿವಂಗತ ರಾಕೇಶ್‌ ಸಿದ್ದರಾಮಯ್ಯ ಹೆಸರಿನ ಟ್ರಸ್ಟ್‌ಗೆ ಗದಗ ನಗರದಲ್ಲಿ ಈ ಹಿಂದೆ ಮಂಜೂರಾಗಿದ್ದ 22 ಗುಂಟೆ ಜಮೀನನ್ನು ಕಿತ್ತೂರು ಚೆನ್ನಮ್ಮ ಸಮುದಾಯ ಭವನಕ್ಕೆ ಹಸ್ತಾಂತರಿಸುವಂತೆ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡಬೇಕು’ ಎಂದು ಟ್ರಸ್ಟ್‌ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಮನವಿ ಮಾಡಿದರು. ಗದಗ ಜಿಲ್ಲಾಧಿಕಾರಿಗೆ ಕರೆ ಮಾಡಿದ ಮುಖ್ಯಮಂತ್ರಿ, ಮಂಜೂರಾಗಿದ್ದ 22 ಗುಂಟೆ ನಿವೇಶನ ನೀಡುವಂತೆ ಸೂಚನೆ ನೀಡಿದರು.

‘ನಿಮ್ಮ ಎಲ್ಲ ಯೋಜನೆಗಳು ನಮಗೆ ಇಷ್ಟವಾಗಿವೆ. ‘ಶಕ್ತಿ’ ಯೋಜನೆಗೆ ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ವೃದ್ಧೆಯೊಬ್ಬರು ಮನವಿ ಮಾಡಿದರು.

ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಮನವಿ ಮಾಡಿದರು. ಪುಟ್ಟಸ್ವಾಮಿಗೆ ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚಿಸಿದರು. ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲ್ಲೂಕಿನ ಮುಷ್ತಾಕ್‌ ಅವರು ತಮಗೆ ಮಂಜೂರಾಗಿರುವ ನಿವೇಶನವನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಬಿಡಿಸಿಕೊಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಕೊನೆ ಹಂತದಲ್ಲಿ, ಅಹವಾಲು ನೀಡಲು ಸರದಿ ಸಾಲಿನಲ್ಲಿ ನಿಂತಿದ್ದ ಜನರ ಬಳಿಗೇ ತೆರಳಿ ಮುಖ್ಯಮಂತ್ರಿ ಅರ್ಜಿಗಳನ್ನು ಪಡೆದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನೀಡಿದರು. ಅದಕ್ಕೂ ಮೊದಲು ಅಂಗವಿಕಲರಿಂದ ಅಹವಾಲುಗಳನ್ನು ಸ್ವೀಕರಿಸಿ, ತ್ವರಿತವಾಗಿ ಪರಿಹರಿಸುವಂತೆ ಸೂಚಿಸಿದರು‌.

‘ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ’

ಬೆಂಗಳೂರು: ‘ಇಂದಿನ ಜನಸ್ಪಂದನ ಕಾರ್ಯಕ್ರಮ ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು. ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಇದನ್ನು ಸಹಿಸಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹಾರ ನೀಡಲು ‘ಜನತಾ ಸ್ಪಂದನ’ ದಿಂದ ಅವಕಾಶವಾಗುತ್ತದೆ. ಕೆಲವು ಅರ್ಜಿಗಳನ್ನು ಇತ್ಯರ್ಥಪಡಿಸಲು ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ’ ಎಂದರು.

‘ಇಂದು ಬಂದ ಅರ್ಜಿಗಳಲ್ಲಿ ಬಹುತೇಕವಾಗಿ ಕಂದಾಯ, ಪೊಲೀಸ್‌ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ, ವಸತಿ ಕೊಡಿ, ಉದ್ಯೋಗ ಕೊಡಿಸಿ ಎಂಬ ಮನವಿಗಳು ಬಂದಿವೆ. ವಿಶೇಷವಾಗಿ ಅಂಗವಿಕಲರು ಉದ್ಯೋಗ ಕೊಡಿಸಿ, ತ್ರಿಚಕ್ರ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಾರೆ. 4 ಸಾವಿರ ತ್ರಿಚಕ್ರ ವಾಹನ ಒದಗಿಸಲಾಗಿದೆ’ ಎಂದರು

ವಿಶೇಷವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿಯೇ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗುತ್ತದೆ. ಖಾತೆ, ಪಹಣಿ, ಪೋಡಿ ಮಾಡಲು ನನ್ನ ಬಳಿ ಬರಬೇಕಾ? ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಕೆಲಸ ಮಾಡಿದರೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದೇನೆ’ ಎಂದರು.

‘ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. 15 ದಿನಗಳ ಒಳಗೆ ಅವುಗಳನ್ನು ವಿಲೇವಾರಿ ಮಾಡಬೇಕು. ಇತ್ಯರ್ಥಪಡಿಸಲು ನಿಯಮಾವಳಿಗಳಡಿ ಅವಕಾಶವಿಲ್ಲದೇ ಇದ್ದರೆ, ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಬೇಕು’ ಎಂದರು.

‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್‌ ಠಾಣೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆ ಬಗೆಹರಿಸಬೇಕು.‌ ವಿಳಂಬ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಜನರಿಗೆ ಕೂಡಲೇ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.

ರಾಹುಲ್‌ ಭೇಟಿ ಮಾಡಿಸಿ...!

‘ರಾಹುಲ್​ ಗಾಂಧಿ ಭೇಟಿ ಮಾಡಿಸಬೇಕು’, ‘ಮುಂದೆಯೂ ನೀವೇ ಸಿಎಂ ಆಗಬೇಕು’, ‘ನಿಗಮ– ಮಂಡಳಿಗೆ ನೇಮಿಸಬೇಕು’... ಹೀಗೆ ಸಿದ್ದರಾಮಯ್ಯ ಅವರಿಗೆ ಕೆಲವರು ಬೇಡಿಕೆ ಇಟ್ಟರು. ಅದಕ್ಕೆ ಅವರು, ‘ಆಯ್ತಪ್ಪಾ ನೋಡೋಣ’ ಎಂದು ಹೇಳಿ ಕಳುಹಿಸಿದರು.

ಬೆಳಗಾವಿಯ ಅಥಣಿಯ ಅಶೋಕ್ ತಲವಾರ ಎಂಬವರು, ‘ಊರಲ್ಲಿ ಇಂದಿರಾ ಗಾಂಧಿಯ ಪ್ರತಿಮೆ ಮಾಡಿಸಿದ್ದೇನೆ. ಅದನ್ನು ತೋರಿಸಲು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸಿ’ ಎಂದು ಮನವಿ ಮಾಡಿದರು. ಮೈಸೂರು ಜಿಲ್ಲೆಯ ಟಿ. ನರಸೀಪುರದ ಲಿಂಗಯ್ಯ ಎಂಬವರು, ‘2028ಕ್ಕೆ ನೀನೇ ಸಿಎಂ ಆಗಬೇಕು. ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ರಾಜ್ಯವನ್ನು ಆಳ್ವಿಕೆ ಮಾಡಲು ಆಗುವುದಿಲ್ಲ. ನಾನು 35 ವರ್ಷದಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಎಡಗೈ ಸಮುದಾಯದವ. ಅಳಿಯ ಶಿವಣ್ಣನನ್ನು ಆಶ್ರಯ ಸಮಿತಿಗೆ ಸದಸ್ಯರನ್ನಾಗಿ ನೇಮಿಸಬೇಕು’ ಎಂದು ಮನವಿ ಮಾಡಿದರು.

ಸಿಎಂ ನಿಧಿಯಿಂದ ಹಣ: ಆರೋಗ್ಯ ಸಮಸ್ಯೆ ಸಹಿತ ಬಂದ ಕೆಲವರು ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ನೆರವಿಗಾಗಿ ಮನವಿ ಸಲ್ಲಿಸಿದರು. ಗದಗದ ಅಂಜಲಿ ಕುಂಬಾರ ಎಂಬವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಅವರ ಆರು ತಿಂಗಳ ಮಗು ಮೇಘಾಶ್ರೀಯ ತೆರೆದ ಹೃದಯ ಚಿಕಿತ್ಸೆಗೆ ₹ 2 ಲಕ್ಷ ಮಂಜೂರು ಮಾಡಿದರು.

ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಸಹೋದರ ವೆಂಕಟರಾಜ್‌ ಎಂಬುವವರ ನೆರವಿಗೆ ಬರುವಂತೆ ಬಸವರಾಜು ಎಂಬವರು ಮಾಡಿದ ಮನವಿಗೆ ಮುಖ್ಯಮಂತ್ರಿ ₹ 1 ಲಕ್ಷ ನೆರವು ಮಂಜೂರು ಮಾಡಿದರು.

________________________________________

3,812: ‌‘ಜನಸ್ಪಂದನ’ದಲ್ಲಿ ಸ್ವೀಕರಿಸಿದ ಅರ್ಜಿಗಳು

2,862: ‘ಐಪಿಜಿಆರ್‌ಎಸ್‌’ ತಂತ್ರಾಂಶದಲ್ಲಿ ನೋಂದಣಿಯಾದ ಅರ್ಜಿಗಳು

950: ನೇರವಾಗಿ ಸ್ವೀಕರಿಸಿದ ಅರ್ಜಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT