ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ | ಖಾಸಗಿ ಎಫ್‌ಎಸ್‌ಎಲ್ ವರದಿ: ಹರಿಹಾಯ್ದ ಬಿಜೆಪಿ

Published 4 ಮಾರ್ಚ್ 2024, 16:27 IST
Last Updated 4 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾದ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯೊಂದು ಬಿಡುಗಡೆ ಮಾಡಿದ ಎಫ್‌ಎಸ್ಎಲ್‌ ವರದಿಯನ್ನು ಆಧರಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.

ಈ ಸಂಬಂಧ ಬಿಜೆಪಿ ನಾಯಕರ ನಿಯೋಗವೊಂದು ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಗೆ ತೆರಳಿ ಮನವಿಪತ್ರವೊಂದನ್ನು ನೀಡಿತು. ‘ಖಾಸಗಿ ಸಂಸ್ಥೆಯ ಎಫ್‌ಎಸ್‌ಎಲ್‌ ವರದಿ ಬಂದಿದ್ದರೂ, ಪೊಲೀಸ್‌ ಇಲಾಖೆಯಿಂದ ನಡೆಸಿರುವ ಎಫ್‌ಎಸ್‌ಎಲ್‌ ತಕ್ಷಣವೇ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ತಕ್ಷಣವೇ ಬಹಿರಂಗಪಡಿಸಬೇಕು’ ಎಂದು ನಿಯೋಗ ಒತ್ತಾಯಿಸಿತು.

‘ವರದಿ ಬಂದ ತಕ್ಷಣ ಬಹಿರಂಗ ಮಾಡುವುದಾಗಿ ಗೃಹ ಸಚಿವರು ಹೇಳಿದ್ದರು. ವರದಿ ಬಂದಿದೆ ಎಂಬ ಮಾಹಿತಿ ನಮಗಿದೆ. ಒಂದು ವಾರ ಕಳೆದರೂ ವರದಿ ಬಹಿರಂಗ ಮಾಡುವ ಗೋಜಿಗೆ ಹೋಗದೇ ಆರೋಪಿಗಳನ್ನು ರಕ್ಷಿಸಲು ದಾರಿ ಹುಡುಕುತ್ತಿದೆ’ ಎಂದು ಬಿಜೆಪಿ ನಾಯಕರು ಆರೋಪಿಸಿದರು.

‘ಖಾಸಗಿ ಸಂಸ್ಥೆ ತಯಾರಿಸಿದ ಎಫ್‌ಎಸ್‌ಎಲ್‌ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ. ಸತ್ಯ ತಿಳಿಸಲು ನಿಮ್ಮ ಮೇಲೆ ಯಾವುದಾದರೂ ಒತ್ತಡವಿದೆಯೇ? ಈ ರೀತಿಯ ವಿಳಂಬದಿಂದಾಗಿ ಮುಂದಿನ ದಿನಗಳಲ್ಲಿ ದೇಶ ವಿರೋಧಿ ಮತ್ತು ಸಮಾಜಘಾತುಕ ಕೆಲಸ ಮಾಡುವ ಜನರಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದರು. ನಿಯೋಗದಲ್ಲಿ ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ಸಿ.ಕೆ. ರಾಮಮೂರ್ತಿ, ಉದಯ ಬಿ. ಗರುಡಾಚಾರ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಇದ್ದರು.

ಮುಚ್ಚಿಡಲು ಹುನ್ನಾರ: ಅಶೋಕ

‘ಖಾಸಗಿ ಎಫ್‌ಎಸ್‌ಎಲ್‌ ವರದಿ ಬಂದರೂ, ಸರ್ಕಾರದ ವತಿಯಿಂದ ನಡೆಸಿರುವ ಎಫ್‌ಎಸ್‌ಎಲ್‌ ವರದಿ ಇನ್ನೂ ಏಕೆ ಬಹಿರಂಗ ಮಾಡಿಲ್ಲ. ಸಿದ್ದರಾಮಯ್ಯ ಮತ್ತು ಜಿ.ಪರಮೇಶ್ವರ ಅವರ ನಿಗೂಢ ನಡೆ ನೋಡುತ್ತಿದ್ದರೆ ಕಾಂಗ್ರೆಸ್‌ ಸರ್ಕಾರ ಏನನ್ನೊ ಮುಚ್ಚಿಡಲು ಮತ್ತು ಯಾರನ್ನೋ ರಕ್ಷಿಸಲು ಒತ್ತಡದಲ್ಲಿರುವಂತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ‘ಎಕ್ಸ್‌’ನಲ್ಲಿ ದೂರಿದ್ದಾರೆ.

‘ಸಿದ್ದರಾಮಯ್ಯ ಅವರೇ, ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ತಾವು ಸತ್ಯವನ್ನು ತುಳಿದರೆ ಅದು ನಿಮಗೆ ಶೋಭೆ ತರುವುದಿಲ್ಲ. ದೇಶಕ್ಕಿಂತ ತಮಗೆ ಪಕ್ಷವೇ ಹೆಚ್ಚಾಗಿ ಹೋಯಿತೇ? ರಾಷ್ಟ್ರದ ಹಿತಾಸಕ್ತಿಗಿಂತ ವೋಟ್‌ ಬ್ಯಾಂಕ್‌ ರಾಜಕಾರಣವೇ ದೊಡ್ಡದಾಯಿತೇ’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ಕಿಡಿ

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಎಫ್ಎಸ್ಎಲ್ ವರದಿ ಬಿಡುಗಡೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಖಾಸಗಿಯವರು ಯಾರು? ಎಫ್ಎಸ್ಎಲ್ ವರದಿ ತಯಾರಿಸಲು ಅವರಿಗೆ ನಿರಾಕ್ಷೇಪಣಾ ಪತ್ರ ಯಾರು ಕೊಟ್ಟಿದ್ದಾರೆ? ಈ ರೀತಿ ವರದಿ ಕೊಡಲು ಅವರಿಗೆ ಅನುಮತಿ ಇದೆಯೇ? ಎಲ್ಲವನ್ನೂ ಪರಿಶೀಲಿಸುತ್ತೇನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಖಾಸಗಿ ಸಂಸ್ಥೆ ತಯಾರಿಸಿದ ಎಫ್​ಎಸ್ಎಲ್​ ವರದಿಯನ್ನು ಬಿಜೆಪಿಯವರು ಬಹಿರಂಗಪಡಿಸಿರುವುದು ದೇಶದ್ರೋಹದ ಕೆಲಸ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್​ ಖರ್ಗೆ ಕಿಡಿಕಾರಿದರು.

‘ಕ್ಲೂ 4 ಎವಿಡೆನ್ಸ್ ಪ್ರಯೋಗಾಲಯದ ವಿಶ್ವಾಸಾರ್ಹತೆ ಏನು? ಖಾಸಗಿಯಾಗಿ ಅವರು ಏನಾದರೂ ಮಾಡಿಕೊಳ್ಳಲಿ. ಆ ಸಂಸ್ಥೆಗೆ ಸರ್ಕಾರದ ಪ್ರಮಾಣಪತ್ರ ‌ಇದ್ದರೆ, ಅವರು ಸ್ಥಳೀಯ ಪೊಲೀಸರಿಗೆ ವರದಿ ನೀಡಬೇಕು. ಬಿಜೆಪಿಯವರು ಪ್ರಯೋಗಾಲಯಕ್ಕೆ ನೀಡಿರುವ ವಿಡಿಯೊ ತುಣುಕು ಯಾವುದು?. ಖಾಸಗಿ ಸಂಸ್ಥೆಗಳಿಂದ ನಾನೂ ವರದಿ ತೆಗೆದುಕೊಂಡಿದ್ದೇನೆ. ಅದನ್ನು ಬಹಿರಂಗಪಡಿಸಬಹುದಿತ್ತು ಅಲ್ಲವೇ? ಆದರೆ, ನಾನು ಹಾಗೆ ಮಾಡಿಲ್ಲ. ಬಿಜೆಪಿಯವರು ಮಾಡಿರುವುದು ನಿಜವಾದ ದೇಶದ್ರೋಹ. ಸಂವಾದ ಫೌಂಡೇಷನ್ ವರದಿ ತೆಗೆದುಕೊಳ್ಳಲು ಬಿಜೆಪಿಯವರಿಗೇನು ಆಸಕ್ತಿ?’ ಎಂದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಪಾಕಿಸ್ತಾನ ಪರ ಘೋಷಣೆ ಕೂಗಿದ ಸಂಬಂಧ ವರದಿ ನೀಡಿರುವ ಖಾಸಗಿ ಸಂಸ್ಥೆ ಯಾರ ಪರ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಈ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆ ಮಾಡಲು ಬಿಡೋಣ’ ಎಂದರು.

‘ಏನು ಬೇಕಾದರೂ ಟ್ವೀಟ್‌ ಮಾಡಲಿ’

‘ಪಾಕಿಸ್ತಾನ ಜಿಂದಾಬಾದ್‌ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಏನು ಬೇಕಾದರೂ ಟ್ವೀಟ್‌ ಮಾಡಿಕೊಳ್ಳಲಿ. ಎಫ್‌ಎಸ್‌ಎಲ್ ವರದಿ ಅವರಿಗೂ ಬಂದಿರುವುದಿಲ್ಲ. ನನಗೂ ಬಂದಿಲ್ಲ. ಗೃಹ ಸಚಿವರಿಗಷ್ಟೇ ಬಂದಿರುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಎಫ್‌ಎಸ್‌ಎಲ್‌ ವರದಿ ನಿಮಗೆ ಸಿಕ್ಕಿದೆಯೇ? ಅಥವಾ ಬಿಜೆಪಿಯವರಿಗೆ ಸಿಕ್ಕಿದೆಯೇ’ ಎಂದೂ ಅವರು ಸುದ್ದಿಗಾರರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT