ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ ಮರೆತರೆ ಯಶಸ್ಸು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್‌

‘ಪರಿಶ್ರಮ’ ನೀಟ್ ಅಕಾಡೆಮಿಯಲ್ಲಿ ‘ನೀಟ್‌’ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಸನ್ಮಾನ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಪರಿಶ್ರಮ’ ನೀಟ್ ಅಕಾಡೆಮಿಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನೀವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಎಂದು ಇಂದಿರಾ ಗಾಂಧಿ ಹೇಳಿದ್ದರು. ಪರಿಶ್ರಮ ಸಂಸ್ಥೆ ನಿಮಗೆ ದಾರಿ ದೀಪವಾಗಿ ಹೊಸ ಬೆಳಕು ನೀಡಲಿದೆ’ ಎಂದರು.

‘ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಸದ್ಯ ದೇಶದಲ್ಲಿ ನೀಟ್, ಹಾಗೂ ಬೇರೆ ಬೇರೆ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಚರ್ಚೆಯಾಗುತ್ತಿದೆ’ ಎಂದೂ ಹೇಳಿದರು.

ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥರೂ ಆಗಿರುವ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ‘ಪ್ರದೀಪ್ ಈಶ್ವರ್ ಅವರು ತಮ್ಮ ಮಾತು, ಆಚಾರ ವಿಚಾರ ಪ್ರಚಾರ ಮಾಡಿ ವಿಧಾನಸೌಧಕ್ಕೆ ಬಂದಿದ್ದಾರೆ. ಮಾಜಿ ಶಾಸಕ ಶಿವಶಂಕರ್ ರೆಡ್ಡಿಯವರು ಪ್ರದೀಪ್ ಈಶ್ವರ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಾಗ, ‘ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದ್ದೀರಿ’ ಎಂದಿದ್ದೆ. ಆಗ ಅವರು, ‘ಇಲ್ಲ, ಈತ ಉಪಯೋಗಕ್ಕೆ ಬರುತ್ತಾರೆ. ಒಂದು ಅವಕಾಶ ನೀಡಿ’ ಎಂದರು. ಅವರು ಈಗ ರಾಜ್ಯದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿ ಶಾಸಕನಾಗಿದ್ದಾರೆ. ವಿಧಾನಸಭೆಯಲ್ಲೂ ತಮ್ಮ ಆಚಾರ, ವಿಚಾರ ಪ್ರತಿಪಾದನೆ ಮಾಡುತ್ತಿದ್ದಾರೆ’ ಎಂದರು.

‘ಪರಿಶ್ರಮ ಸಂಸ್ಥೆಯವರು ಇಲ್ಲಿನ ಮಕ್ಕಳನ್ನು ಯಾವ ರೀತಿ ತಯಾರು ಮಾಡಿದ್ದಾರೆ ಎಂದರೆ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 250 ಸೀಟುಗಳಿದ್ದರೆ ಅದರಲ್ಲಿ 150ರಿಂದ 180 ಮಕ್ಕಳು ಇಲ್ಲಿ ಶಿಕ್ಷಣ ಪಡೆದವರೇ ಇದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ, ಬದಲಾವಣೆ ಯಾರೂ ಮಾಡಲು ಸಾಧ್ಯವಿಲ್ಲ’ ಎಂದರು.

‘ಪ್ರದೀಪ್ ಈಶ್ವರ್ ಅವರು ತಮ್ಮ ಸಂಸ್ಥೆಗಾಗಿ ಸ್ವಂತ ಕಟ್ಟಡ ಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT