ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತೆ ರೈತಸ್ನೇಹಿ ಎಪಿಎಂಸಿ: ಪರಿಷತ್ತಿನ ಜಂಟಿ ಪರಿಶೀಲನಾ ಸಮಿತಿಯಿಂದ 27 ಶಿಫಾರಸು

* ಕಾಯ್ದೆ ತಿದ್ದುಪಡಿಗೆ ತೆರೆದ ದಾರಿ
Published : 14 ಫೆಬ್ರುವರಿ 2024, 16:26 IST
Last Updated : 14 ಫೆಬ್ರುವರಿ 2024, 16:26 IST
ಫಾಲೋ ಮಾಡಿ
Comments

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಂದಿದ್ದ ತಿದ್ದುಪಡಿಯಿಂದಾಗಿ ಕಳೆಗುಂದಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಗಳಿಗೆ ಮರುಜೀವ ನೀಡುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ರಚಿಸಿದ್ದ ಪರಿಶೀಲನಾ ಸಮಿತಿಯ ವರದಿಯನ್ನು ಬುಧವಾರ ಸದನದಲ್ಲಿ ಮಂಡಿಸಲಾಗಿದೆ.

ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಾಂಗಣಗಳ ಸುಧಾರಣೆ, ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ, ಕೈಗಾರಿಕೆಗಳಿಗೆ ಪೂರಕವಾದ ಕೆಲವು ನೀತಿಗಳ ಅನುಸರಣೆ ಸೇರಿದಂತೆ 27 ಶಿಫಾರಸುಗಳನ್ನು ಸಮಿತಿ ಮಾಡಿದೆ. ಕಾಯ್ದೆ ತಿದ್ದುಪಡಿಗೆ ವಿರೋಧಿಸಿದ್ದ ಬಿಜೆಪಿ, ಜೆಡಿಎಸ್ ಸದಸ್ಯರೂ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮಸೂದೆಗೆ ಒಪ್ಪಿಗೆ ನೀಡಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಹೀಗಾಗಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ದಾರಿ ಈಗ ತೆರೆದುಕೊಂಡಂತಾಗಿದೆ. 

ರೈತರಿಗೆ ಸಂಬಂಧಿಸಿದ ಮೂರು ಪ್ರಮುಖ ಕಾಯ್ದೆಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತಿದ್ದುಪಡಿ ತಂದಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಇಲ್ಲಿಯೂ ತಿದ್ದುಪಡಿ ಮಾಡಿತ್ತು. ಈಗ ಆರಂಭವಾಗಿರುವ ಹೋರಾಟದ ಮಾದರಿಯಲ್ಲಿ ದೆಹಲಿಯನ್ನೇ ನಡುಗಿಸುವ ರೀತಿಯಲ್ಲಿ ರೈತರು ಹೋರಾಟ ನಡೆಸಿದ್ದರಿಂದ ಮೂರೂ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿತ್ತು. ಆದರೆ, ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ವಾಪಸ್ ಪಡೆದಿರಲಿಲ್ಲ. 

‘ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ’ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಂದಿದ್ದ ತಿದ್ದುಪಡಿಯಿಂದಾಗಿ ಖಾಸಗಿಯವರಿಗೆ ಅವಕಾಶ ಹಾಗೂ ಮಾರುಕಟ್ಟೆ ಹೊರಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ದೊರಕಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. 

ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶನದಲ್ಲೇ (2023 ಜೂನ್‌) ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿತ್ತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಯಲ್ಲಿನ ಹಲವು ಅಂಶಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಬಿಜೆಪಿ–ಜೆಡಿಎಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲಿ ಬಹುಮತ ಇಲ್ಲದೇ ಇದ್ದುದರಿಂದ ಮಸೂದೆಗೆ ಅಂಗೀಕಾರ ದೊರೆತಿರಲಿಲ್ಲ. 

‘ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಯ ಹೊರಗೂ ಮಾರಾಟ ಮಾಡಬಹುದು ಎನ್ನುವುದು ಹಿಂದಿನ ಕಾಯ್ದೆಯಲ್ಲಿದ್ದ ಪ್ರಮುಖ ಅಂಶ. ರೈತಸ್ನೇಹಿಯಾದ ಇಂತಹ ಅಂಶಗಳನ್ನು ಕೈಬಿಡಬಾರದು’ ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದ್ದರು. ಮನವಿ ಪುರಸ್ಕರಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಮೂರು ಪಕ್ಷಗಳ 8 ಸದಸ್ಯರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ರಚಿಸಿದ್ದರು.

ಉತ್ಪನ್ನ ಆಧರಿಸಿ ಮಾರುಕಟ್ಟೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆಯ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ ಅನುವಾಗುವಂತೆ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

ಕೈಗಾರಿಕೆಗಳು, ಸಂಸ್ಕರಣಾ ಘಟಕಗಳಿಗೆ ಉತ್ತೇಜನ ನೀಡಲು, ಅದಕ್ಕೆ ಪೂರಕವಾಗಿರುವಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಕೋಲಾರದಲ್ಲಿ ಟೊಮೊಟೊ, ವಿಜಯಪುರದಲ್ಲಿ ಒಣದ್ರಾಕ್ಷಿ–ನಿಂಬೆ ಹಣ್ಣು, ಹಾವೇರಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ದಾವಣಗೆರೆ ಅಡಿಕೆ, ಕಲಬುರಗಿ ತೊಗರಿ ಬೇಳೆ, ತಿಪಟೂರಿನಲ್ಲಿ ತೆಂಗು, ಶಿವಮೊಗ್ಗದಲ್ಲಿ ಅನಾನಸ್ ಇಂತಹ ಉತ್ಪನ್ನ ಆಧಾರಿತ ಕೈಗಾರಿಕೆಗಳಿಗೆ ಪೂರಕವಾಗುವಂತೆ ಎಪಿಎಂಸಿಗಳ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ವರದಿ ಹೇಳಿದೆ. 

ಆದಾಯವೃದ್ಧಿಗೆ ಆಸ್ತಿ ಬಾಡಿಗೆಗೆ ಕೊಡಿ

ಮಾರುಕಟ್ಟೆ ಹಾಗೂ ಎಪಿಎಂಸಿ ವಶದಲ್ಲಿರುವ ಆಸ್ತಿಗಳನ್ನು ಬಾಡಿಗೆಗೆ ನೀಡುವ ಮೂಲಕ ಆದಾಯವೃದ್ಧಿಗೆ ಕ್ರಮವಹಿಸಲು ಸಮಿತಿ ಶಿಫಾರಸು ಮಾಡಿದೆ.

ಗೋದಾಮುಗಳು, ಆಸ್ತಿ, ಕಟ್ಟಡ, ನಿವೇಶಗಳನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ರೈತ ಉತ್ಪಾದಕ ಸಂಸ್ಥೆ, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ ದೀರ್ಘಾವಧಿ ಬಾಡಿಗೆ ನೀಡಬಹುದು. ಶೇ 50ರಿಂದ 60ರ ರಿಯಾಯಿತಿ ದರದಲ್ಲಿ ನೀಡಲು ಕಾನೂನಿಗೆ ತಿದ್ದುಪಡಿ ತರಬಹುದು ಎಂದು ವರದಿ ಹೇಳಿದೆ.

ಪ್ರಮುಖ ಶಿಫಾರಸುಗಳು

*ರೈತರೇ ಸಂಘಟಿತರಾಗಿ ಕೃಷಿ ಮಾರುಕಟ್ಟೆ ಪ್ರಾಂಗಣದ ಒಳಗೆ ನೇರವಾಗಿ ಮಾರಾಟ–ಖರೀದಿ ಮಾಡಲು ಪ್ರೋತ್ಸಾಹಿಸಬೇಕು. ರೈತ ಉತ್ಪಾದಕ ಸಂಘಗಳಿಗೆ ಅವಕಾಶ ಕಲ್ಪಿಸಬೇಕು

* ಮಾರುಕಟ್ಟೆ ಪ್ರಾಂಗಣದ ವಹಿವಾಟು ಹೆಚ್ಚಿಸಲು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾರುಕಟ್ಟೆ ಹೊರಗಿನ ವಹಿವಾಟು ಗಣನೀಯವಾಗಿ ತಗ್ಗಿಸಬೇಕು. ಅದಕ್ಕಾಗಿ ಉಪ ಮಾರುಕಟ್ಟೆಗಳ ಸಂಖ್ಯೆ ಹೆಚ್ಚಿಸಬೇಕು. ದುರ್ಬಲ ಎಪಿಎಂಸಿಗಳನ್ನು ಇತರೆ ಮಾರುಕಟ್ಟೆಗಳ ಒಳಗೆ ವಿಲೀನ ಮಾಡಬೇಕು

* ಎಪಿಎಂಸಿ ಒಳಗಿನ ಆಸ್ತಿಗಳಿಗೆ ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆ ಹೊರೆ ತಪ್ಪಿಸಲು ಮುನ್ಸಿಪಲ್‌ ಕಾಯ್ದೆಗೆ ತಿದ್ದುಪಡಿ ತರಬೇಕು. ಆಸ್ತಿಗಳ ವರ್ಗೀಕರಣ ಮಾಡಿ ಕಡಿಮೆ ಆಸ್ತಿ ತೆರಿಗೆ ನಿಗದಿ ಮಾಡಬೇಕು

* ರೈತರಿಂದ ನೇರವಾಗಿ ಭತ್ತ ಖರೀದಿಸುವ ಅಕ್ಕಿ ಗಿರಣಿ ಘಟಕಗಳನ್ನು ಎಪಿಎಂಸಿಯ ಉಪ ಮಾರುಕಟ್ಟೆ ಎಂದು ಪರಿಗಣಿಸಬೇಕು. ಪರವಾನಗಿ ಪಡೆದ ಎಪಿಎಂಸಿ ಹೊರಗಿನ ಅಧಿಸೂಚಿತ ಉತ್ಪನ್ನಗಳ ಸಂಸ್ಕರಣಾ ಘಟಕಗಳಿಗೆ ಶುಲ್ಕ ರಿಯಾಯಿತಿ ನೀಡಬೇಕು

*ಎಪಿಎಂಸಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತ್ವರಿತಗತಿಯಲ್ಲಿ ಸಿಬ್ಬಂದಿ ನೇಮಕ ಮಾಡಬೇಕು. ವಿಳಂಬವಾದಲ್ಲಿ ಮೀಸಲಾತಿ, ಅರ್ಹತೆ ಆಧಾರದಲ್ಲಿ ಹೊರಗುತ್ತಿಗೆ ಸಿಬ್ಬಂದಿ ನೇಮಿಸಬೇಕು

* ವ್ಯವಹಾರದ ಪಾರದರ್ಶಕತೆ, ತ್ವರಿತ ನಿರ್ವಹಣೆಗಾಗಿ ಮಾರುಕಟ್ಟೆಯ ಎಲ್ಲ ಚಟುವಟಿಕೆಗಳನ್ನೂ ಆನ್‌ಲೈನ್‌ ಮೂಲಕವೇ ನಡೆಸಬೇಕು

* ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕ ನಿಧಿ ಸ್ಥಾಪಿಸಬೇಕು. ಸರ್ಕಾರ ಆರ್ಥಿಕ ಸಹಾಯ ಒದಗಿಸಬೇಕು. ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ಪುನರ್‌ರಚಿಸಬೇಕು

* ಬೇಡಿಕೆ ಆಧಾರದ ಮೇಲೆ ಹೊಸ ಗೋದಾಮುಗಳನ್ನು ನಿರ್ಮಿಸಬೇಕು. ಹಣ್ಣು, ತರಕಾರಿಗಳಿಗೆ ಅಗತ್ಯ ಶೈತ್ಯಾಗಾರ ನಿರ್ಮಿಸಬೇಕು. ರೈತರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಒದಗಿಸಬೇಕು. ಪರವಾನಗಿ ಪ್ರಕ್ರಿಯೆ ಸರಳೀಕರಣಗೊಳಿಸಬೇಕು

* ಎಪಿಎಂಸಿ ಒಳಗೆ ಸೌರಶಕ್ತಿ ಉತ್ಪಾದನೆ, ಬಯೊ–ಸಿಎನ್‌ಜಿ ಘಟಕ, ಇ–ಚಾರ್ಜಿಂಗ್‌ ಕೇಂದ್ರ, ಪೆಟ್ರೋಲ್‌ ಬಂಕ್‌ ತೆರೆಯಬೇಕು

* ಎಪಿಎಂಸಿ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳು, ಆರೋಗ್ಯ ಯೋಜನೆ, ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು

* ದೇವನಹಳ್ಳಿ ಬಳಿ ಸುಸಜ್ಜಿತ, ಆಧುನಿಕ ಅಂತರಾಷ್ಟ್ರೀಯ ಹೂವಿನ ಮಾರುಕಟ್ಟೆ ಸ್ಥಾಪನೆ. ಇತರೆ ಹೂವುಗಳಿಗೂ ಅಗತ್ಯವಾದ ಮಾರುಕಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು

* ಕೃಷಿ ಮಾರುಕಟ್ಟೆ ಹಂತದಲ್ಲಿನ ವಿವಾದಗಳನ್ನು ಬಗೆಹರಿಸಲು ಕೃಷಿ ಮಾರಾಟ ನಿರ್ದೇಶಕರ ಅಧ್ಯಕ್ಷತೆಯಲ್ಲಿ ವಿವಾದ ಪರಿಶೀಲನಾ ಸಮಿತಿ ರಚನೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT