ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷದ ಶುದ್ಧೀಕರಣ: ವರಿಷ್ಠರಿಗೆ ಪತ್ರ– ಡಿ.ವಿ. ಸದಾನಂದಗೌಡ

Published 2 ಜುಲೈ 2024, 16:04 IST
Last Updated 2 ಜುಲೈ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ಶುದ್ದೀಕರಣಕ್ಕೆ ಒತ್ತಾಯಿಸಿ ವರಿಷ್ಠರಿಗೆ ಪತ್ರ ಬರೆದಿದ್ದೇನೆ. ಪಕ್ಷ ಸರಿಯಾಗಬೇಕು ಎಂಬುದಷ್ಟೇ ಪತ್ರದ ಉದ್ದೇಶ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

‘ಪತ್ರವನ್ನು ಪಕ್ಷದ ಹಿತದೃಷ್ಟಿಯಿಂದ ಬರೆದಿದ್ದೇನೆ. ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ನಾನು ಪತ್ರ ಬರೆದ ವಿಚಾರ ತಿಳಿದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಗೆ ಬಂದು ಚರ್ಚೆ ನಡೆಸಿದರು. ಪಕ್ಷದಲ್ಲಿ ಎಲ್ಲವೂ ಸರಿ ಹೋಗದಿದ್ದರೆ ನನ್ನನ್ನು ಹೊರಗೆ ಹಾಕಿದರೂ ಬೇಸರವಿಲ್ಲ ಎಂದು ಅವರು ಹೇಳಿದರು. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದವರು ಎಷ್ಟೇ ದೊಡ್ಡವರಿರಲಿ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂತಹ ಕಠಿಣ ಕ್ರಮದ ಅಗತ್ಯವಿದೆ’ ಎಂದು ಅವರು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣದವರ ವಿರುದ್ಧ ವರಿಷ್ಠರಿಗೆ ಚಾರ್ಜ್‌ಶೀಟ್‌ ಕಳಿಸಲಾಗುವುದು. ವಿಜಯೇಂದ್ರ ಅವರ ಬಗ್ಗೆ ಹೇಳುತ್ತಿಲ್ಲ. ಅವರು ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳ ಮೊದಲು ಜವಾಬ್ದಾರಿ ತೆಗೆದುಕೊಂಡಿದ್ದರು. ಅತಿಯಾದ ವಿಶ್ವಾಸದಿಂದ 9 ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ನಾನೂ ಸೇರಿ ಎಲ್ಲರೂ ಕಾರಣರು’ ಎಂದರು.

‘ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಳಮಟ್ಟದಿಂದ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುವಲ್ಲಿ ನಾನು ಸೇರಿ ಎಲ್ಲರೂ ವಿಫಲರಾಗಿದ್ದೇವೆ. ಚಾರ್ಜ್‌ಶೀಟ್‌ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಹೋಗುತ್ತದೆ. ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಪರಾಮರ್ಶೆ ನಡೆಸಬೇಕಾಗಿತ್ತು. ಇದೇ 4ರಂದು ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ಫಲಿತಾಂಶ ಮತ್ತು ಇತರ ಅಂಶಗಳ ಕುರಿತು ಚರ್ಚೆ ಆಗಬಹುದು’ ಎಂದು ಸದಾನಂದಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT