ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯಿತಿ ಮನವಿ ಪರಿಶೀಲಿಸಿ ಕ್ರಮ: ಸರ್ಕಾರ

ಶಸ್ತ್ರಾಸ್ತ್ರ ಒಪ್ಪಿಸುವ ಆದೇಶ ರದ್ದು ಕೋರಿದ ಅರ್ಜಿ
Published 10 ಏಪ್ರಿಲ್ 2024, 16:34 IST
Last Updated 10 ಏಪ್ರಿಲ್ 2024, 16:34 IST
ಅಕ್ಷರ ಗಾತ್ರ

ಬೆಂಗಳೂರು: ‌‘ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯ ಪಾಲನೆಗೆ ಅನುಗುಣವಾಗಿ ಸರ್ಕಾರದ ಸುಪರ್ದಿಗೆ ಒಪ್ಪಿಸಲಾಗಿರುವ ಬಂದೂಕು ಹಿಂದಿರುಗಿಸುವಂತೆ ಕೋರಿ ಅಧಿಕೃತ ಪರವಾನಗಿದಾರರು ಮನವಿ ಸಲ್ಲಿಸಿದರೆ, ಅಂತಹ ಮನವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್‌ ಜನರಲ್ ಹೈಕೋರ್ಟ್‌ಗೆ ಅರುಹಿದ್ದಾರೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರನಾಡು ಗ್ರಾಮದ ಕೃಷಿಕ ಕೆ.ವಿ.ಪ್ರಸಾದ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಉತ್ತರಿಸಿ, ‘ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಇದರ ಅನುಸಾರ ಪರವಾನಗಿ ಹೊಂದಿದ ಆಯುಧಗಳನ್ನು ಠೇವಣಿ ಇರಿಸುವಂತೆ ಸ್ಥಳೀಯವಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಗತ್ಯ ಇರುವವರಿಗೆ ಇದರಿಂದ ವಿನಾಯಿತಿ ನೀಡಬಹುದಾಗಿದೆ. ಆದರೆ, ಇದನ್ನು ಆಯಾ ಜಿಲ್ಲಾಧಿಕಾರಿಗಳೇ ನಿರ್ಧರಿಸಲಿದ್ದಾರೆ’ ಎಂದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಅರ್ಜಿದಾರರು ಮನವಿ ಸಲ್ಲಿಸಿದರೆ, ಎರಡು ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಿ’ ಎಂದು ಸೂಚಿಸಿತು. ಪ್ರಕರಣದ ಪ್ರತಿವಾದಿಗಳಾದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸುಳ್ಯ ತಾಲ್ಲೂಕು ತಹಶೀಲ್ದಾರ್, ಬೆಳ್ಳಾರೆ ಪೊಲೀಸ್‌ ಠಾಣೆಯ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಮನವಿ ಏನು?: ‘ನಾನೊಬ್ಬ ಕೃಷಿಕ. ನಾನು ಜನವಿರಳವಾದ ಬೆಳ್ಳಾರೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ಹೀಗಾಗಿ, ನನ್ನ ಜೀವ ರಕ್ಷಣೆ ಮತ್ತು ಕೃಷಿ ಚಟುವಟಿಕೆ ವೇಳೆ ವನ್ಯಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ನನಗೆ ಬಂದೂಕಿನ ಅಗತ್ಯವಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನನ್ನ ಬಂದೂಕನ್ನು ತನ್ನ ಸುಪರ್ದಿಗೆ ಪಡೆದಿದೆ. ಆಯುಧ ಸುಪರ್ದಿಗೆ ಪಡೆಯುವ ಆದೇಶದಿಂದ ನನಗೆ ವಿನಾಯಿತಿ ನೀಡುವಂತೆ ಕೋರಲಾದ ಮನವಿಯನ್ನು ತಿರಸ್ಕರಿಸಲಾಗಿದೆ. ಇದು ಸಹಜ ನ್ಯಾಯತ‌ತ್ವ ಹಾಗೂ ಸಂವಿಧಾನದ 14, 16 ಮ‌ತ್ತು 21ನೇ ವಿಧಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸರ್ಕಾರ ಈ ಸಂಬಂಧ 2024ರ ಮಾರ್ಚ್‌ 26ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ಕೆ.ರವಿಶಂಕರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT