ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿಯಲ್ಲಿ ‘ತೈಲ ಸಮಾಗಮ 2020’ ಫೆಬ್ರವರಿ 29ರಿಂದ

ಪೆಟ್ರೋಲಿಯಂ ವಿತರಕರ ಸವಾಲುಗಳ ಕುರಿತು ಚರ್ಚೆ
Published : 13 ಜನವರಿ 2020, 14:27 IST
ಫಾಲೋ ಮಾಡಿ
Comments

ಮಂಗಳೂರು: ರಾಜ್ಯ ಪೆಟ್ರೋಲಿಯಂ ವಿತರಕರ ಸಮಾವೇಶ ‘ತೈಲ ಸಮಾಗಮ–2020’ ಉಡುಪಿ ನಗರದ ಬೈಪಾಸ್ ಬಳಿಯ ಹೋಟೆಲ್ ಲಿಗಾರ್ಡೋ ಸಭಾಂಗಣದಲ್ಲಿ ಫೆಬ್ರವರಿ 29 ಮತ್ತು ಮಾರ್ಚ್ 1ರಂದು ನಡೆಯಲಿದೆ.

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘಟನೆಯು ಸಮಾವೇಶವು ಆತಿಥ್ಯ ವಹಿಸಿದ್ದು, ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ ಕಂಪೆನಿಗಳ 4,400 ಹಾಗೂ ಇತರ 500 ವಿತರಕರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿತರಕರು ಪಾಲ್ಗೊಳ್ಳಲಿದ್ದಾರೆ’ ಎಂದು ಸಂಘಟನೆಯ ಅಧ್ಯಕ್ಷ ಪಿ.ವಾಮನ ಪೈ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 265 ಪೆಟ್ರೋಲಿಯಂ ಪಂಪ್‌ಗಳಿದ್ದು, ಈ ಹಿಂದೆ 2016ರಲ್ಲಿ ಮಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಿದ್ದೆವು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಆನಂದ ಕಾರ್ನಾಡ್ ಮಾತನಾಡಿ, ‘ಪೆಟ್ರೋಲ್ ಪಂಪ್ ಮಾಲೀಕರು (ವಿತರಕರು) ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲ. ಜೈವಿಕ ಇಂಧನ, ಎಲೆಕ್ಟ್ರಿಕ್‌ ವಾಹನಗಳು, ಸಿಎನ್‌ಜಿ ಪೈಪ್‌ಲೈನ್ ಮತ್ತಿತರ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಕುರಿತು ಸಮಾವೇಶದಲ್ಲಿ ಚಿಂತನ–ಮಂಥನ ನಡೆಸಲಾಗುವುದು’ ಎಂದರು.

‘ದೇಶದಲ್ಲಿ 56 ಸಾವಿರ ಪೆಟ್ರೋಲ್ ಪಂಪ್‌ಗಳಿದ್ದು, ಹೊಸದಾಗಿ 68 ಸಾವಿರಕ್ಕೆ ಕೇಂದ್ರವು ಪರವಾನಗಿ ನೀಡಿದೆ. ಇವುಗಳು ಅನುಷ್ಠಾನದ ಹಂತದಲ್ಲಿದ್ದು, ಉದ್ಯಮದ ದಿಕ್ಕೇ ಬದಲಾಗುವ ಅಪಾಯವಿದೆ. 2012ರಲ್ಲಿ ಪ್ರತಿ ಪಂಪ್‌ ತಿಂಗಳಿಗೆಸರಾಸರಿ 170 ಕಿಲೋ ಲೀಟರ್ಸ್ ಪೆಟ್ರೋಲ್‌ ಮಾರಾಟ ಮಾಡುತ್ತಿದ್ದರೆ, ಸದ್ಯ 150 ಕಿ.ಲೀ.ಗೆ ಇಳಿದಿದೆ. ಹೊಸ ಪಂಪ್‌ಗಳು ಆರಂಭಗೊಂಡರೆ, ಇದು 100 ಕಿ.ಲೀ.ಗೂ ಕೆಳಗಿಳಿಯುವ ಸಾಧ್ಯತೆ ಇದ್ದು, ಪಂಪ್ ಮಾಲೀಕರು ನಷ್ಟ ಅನುಭವಿಸಲಿದ್ದಾರೆ’ ಎಂದು ಅವರು ವಿವರಿಸಿದರು.

‘2012ರಲ್ಲಿ ಅಪೂರ್ವ ಚಂದ್ರ ಸಮಿತಿ ನೀಡಿದ ವರದಿ ಆಧಾರದಲ್ಲಿ ಪಂಪ್‌ಗಳಿಗೆ ಲಾಭಾಂಶವನ್ನು ನಿಗದಿ ಮಾಡಲಾಗಿತ್ತು. ಆ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಅಲ್ಲದೇ, ದರ ನಿಗದಿಯನ್ನು ಕಂಪೆನಿಗಳು ಮಾಡುತ್ತಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಹಾಗೂ ಬ್ಯಾರೆಲ್ ಕಚ್ಛಾ ಪೆಟ್ರೋಲ್ ಬೆಲೆಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಪ್ರತಿನಿತ್ಯ ದರ ವ್ಯತ್ಯಯವಾಗುತ್ತಿದೆ. ಇವುಗಳಿಂದ ನಮಗೆ ನಷ್ಟವಾಗಿದ್ದು, ವಿತರಕರ ಲಾಭಾಂಶವನ್ನು ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT