ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ; ಪೊಲೀಸರು ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ತನ್ನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯ ಮುದ್ದತು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಮುಂದೆ ಗುರುವಾರಕ್ಕೆ (ಆ.22) ನಿಗದಿಯಾಗಿತ್ತು.
ಆದರೆ, ದಿನದ ಕಾಸ್‌ಲಿಸ್ಟ್‌ನಲ್ಲಿ ಪ್ರಕರಣದ ಸಂಖ್ಯೆ ನಮೂದಾಗಿರದ ಕಾರಣ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಅವರು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರಿ ಬೆಳಿಗ್ಗೆ ತುರ್ತು ಮೆಮೊ ಸಲ್ಲಿಸಿದರು.
ನ್ಯಾಯಪೀಠವು, ಈ ಮೆಮೊ ಅನ್ನು ದಿನದ ಕಲಾಪದ ಕೊನೆಗೆ ಕೈಗೆತ್ತಿಕೊಂಡಿತಾದರೂ, ‘ಈಗ ಸಂಜೆ 5 ಗಂಟೆಯಾಗಿರುವ ಕಾರಣ ವಾದ ಆಲಿಸಲು ಸಮಯಾವಕಾಶದ ಕೊರತೆ ಇದೆ’ ಎಂಬ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿತು. ಬಿ.ಎಸ್.ಯಡಿಯೂರಪ್ಪ ಪರ ವಕೀಲೆ ಸ್ವಾಮಿನಿ ಗಣೇಶ ಮೋಹನಂಬಾಳ್ ಹಾಗೂ ಸಂತ್ರಸ್ತ ಬಾಲಕಿಯ ಪರವಾಗಿ ಎಸ್.ಬಾಲನ್ ಹಾಜರಿದ್ದರು.