ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ಕುಡಿಯುವ ನೀರು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Published 10 ಜೂನ್ 2024, 20:30 IST
Last Updated 10 ಜೂನ್ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಅರ್ಜಿಯ ಕುರಿತಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ರಮೇಶ್ ಎಲ್.ನಾಯಕ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.

‘ರಾಯಚೂರು, ಚಿತ್ರದುರ್ಗ, ಮತ್ತು ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣ ಮರುಕಳಿಸುತ್ತಿವೆ. ಆದ್ದರಿಂದ, ಕುಡಿಯುವ ನೀರು ಮಲಿನವಾಗದಂತೆ ಅಗತ್ಯ ಕ್ರಮಕ್ಕೆ ನಿರ್ದೇಶಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ನೀರಿನ ಮೂಲಗಳನ್ನು ಆಗಾಗ್ಗೆ ಪರಿಶೀಲಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನೀರು ಸಂಗ್ರಹಾಗಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಸೂಚಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

‘ರಾಯಚೂರಿನಲ್ಲಿ 2022ರ ಜೂನ್‌ನಲ್ಲಿ ಕಲುಷಿತ ನೀರು ಕುಡಿದು ನಾಲ್ವರು ಸಾವನ್ನಪ್ಪಿದ್ದರು. 2023ರ ಮೇನಲ್ಲಿ ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ 3 ವರ್ಷದ ಮಗು ಸಾವನ್ನಪ್ಪಿತ್ತು. 2023ರ ಜುಲೈ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದ ಕಾರಣಕ್ಕೆ ಆರು ಮಂದಿ ಸಾವಿಗೀಡಾಗಿದ್ದರು. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಸರ್ಕಾರದ ಪ್ರಾಧಿಕಾರಗಳು ನಿರ್ಲಕ್ಷ್ಯ ತೋರುತ್ತಿವೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT