ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಪೂರ್ಣ ಕುಂಭ ಮೆರವಣಿಗೆಗೆ ವಿರೋಧ

ಮಹಿಳಾ ಶೋಷಣೆಯ ಇನ್ನೊಂದು ಮುಖ: ಆಕ್ರೋಶ
Last Updated 29 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಧಾರವಾಡ/ ಹುಬ್ಬಳ್ಳಿ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ‘1001 ಸುಮಂಗಲಿಯರಿಂದ ಕುಂಭ ಮೆರವಣಿಗೆ’ ಆಯೋಜಿಸುವುದಕ್ಕೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹುಬ್ಬಳ್ಳಿಯ ಚಿಂತನ ವೇದಿಕೆ ವಿರೋಧ ವ್ಯಕ್ತಪಡಿಸಿವೆ.

ಈ ಕುರಿತು ಜಿಲ್ಲಾಧಿಕಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿರುವ ಒಕ್ಕೂಟ, ‘ಸಮಾನತೆಯ ಸಮಾಜ ಕಟ್ಟಲು ಕೈ ಜೋಡಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಸುಮಂಗಲಿಯರು ಅಮಂಗಲಿಯರು ಎಂಬ ತಾರತಮ್ಯ ಎಣಿಸುವುದು ಖೇದದ ಸಂಗತಿಯಲ್ಲವೇ’ ಎಂದು ಪ್ರಶ್ನಿಸಿದೆ.

ನುಡಿಜಾತ್ರೆಯನ್ನು ಧಾರ್ಮಿಕ ಸಮಾವೇಶವನ್ನಾಗಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಒಕ್ಕೂಟವು, ‘ಮಠಮಾನ್ಯಗಳಲ್ಲಿ ಒಂದು ಧಾರ್ಮಿಕ ಸಂಪ್ರದಾಯವಾಗಿ ರೂಢಿಯಲ್ಲಿರುವ ಈ ಪದ್ಧತಿಯು, ಹಲವಾರು ಮತಧರ್ಮದವರು ಸಮಾನತೆಯ ಭಾವದಿಂದ ಭಾಗವಹಿಸುವ ಸಾಹಿತ್ಯ ಸಮ್ಮೇಳನದಲ್ಲಿ ಬೇಕಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಕುಂಭ ಮೆರವಣಿಗೆ ನಿಲ್ಲಿಸದಿದ್ದರೆ ಕುಂಭ ಕಸಿದು ಒಡೆಯುವಂಥ ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಒಕ್ಕೂಟದ ಶಾರದಾ ದಾಬಡೆ, ‘ಸಮ್ಮೇಳನದ ಇಂಥ ಸಂದರ್ಭದಲ್ಲಿ ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಸಂಘ ಇತ್ಯಾದಿ ಕಡೆಯಿಂದ ಮಹಿಳೆಯರನ್ನು ಕರೆತರುತ್ತಾರೆ. ಪೂರ್ಣಕುಂಭ ಎಂದರೆ ಸಹಜವಾಗಿ ವಿಧವೆಯರನ್ನು ಕಡೆಗಣಿಸಲಾಗುತ್ತದೆ. ಜತೆಗೆ ಇದಕ್ಕೆ ಸಂಪ್ರದಾಯದ ಸ್ಪರ್ಶ ಬರುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಈ ಹಿಂದೆಯೂ ನಡೆದಿರಲಿಲ್ಲ. ಈಗ ಇವರು ಏಕೆ ಮಾಡುತ್ತಿದ್ದಾರೆ?’ ಎಂದು ಕೇಳಿದರು.

‘ಮಹಿಳೆಯರ ಶೋಷಣೆ ಸಲ್ಲದು: ‘ಪ್ರಸ್ತುತ ಸಾಹಿತ್ಯ ಲೋಕದಲ್ಲಿ ಪ್ರಗತಿಪರ ಚಿಂತನೆಗಳು ನಡೆದಿರುವಾಗ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿದಂತೆ ಸಾವಿರಾರು ಮಹಿಳೆಯರಿಗೆ ಕನ್ನಡದ ಧ್ವಜ ವರ್ಣದ ಸೀರೆ ಉಡಿಸಿ ತಲೆಯ ಮೇಲೆ ಕೊಡ ಹೊರಿಸಿ ಮೆರವಣಿಗೆ ಮಾಡುವುದು ನಿಜಕ್ಕೂ ಸ್ತ್ರೀ ಕುಲಕ್ಕೆ ಅಪಚಾರ ಮಾಡಿದಂತೆ’ ಎಂದು ನಗರದ ಚಿಂತನ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT