ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ವಿತೀಯ ಚಿತ್ರಕಲಾವಿದ ಎಸ್.ರಮೇಶ್

Last Updated 18 ಸೆಪ್ಟೆಂಬರ್ 2019, 19:56 IST
ಅಕ್ಷರ ಗಾತ್ರ

ನಲವತ್ತು ವರ್ಷಗಳ ಹಿಂದಿನ ಪ್ರಜಾವಾಣಿಯ ಪುರವಣಿ, ಸುಧಾ ಮತ್ತು ಮಯೂರ ಪತ್ರಿಕೆಗಳ ಸಂಚಿಕೆಯನ್ನು ತೆಗೆದು ನೋಡಿದರೆ ಅಲ್ಲಿ ಕಥೆಗಳ ಜೊತೆಗೆ ಪ್ರಕಟವಾಗುತ್ತಿದ್ದ ಚಿತ್ರಗಳನ್ನು ನೋಡಿ ಇಂದಿನ ಪೀಳಿಗೆ ದಿಗ್ಭ್ರಾಂತರಾಗದಿದ್ದರೆ ಕೇಳಿ!ಸತ್ಯಕಾಮರ ಧಾರಾವಾಹಿಗಳ ಅಪ್ಸರೆಯರು, ಋಷಿಗಳು, ಧೀರ ನಾಯಕರು, ಖಳರು ಕಾಗದದ ಮೇಲಿನಿಂದ ಎದ್ದು ಬರುತ್ತಿದ್ದಾರೇನೋ ಅನ್ನುವಂತೆ ಜೀವಂತವಾಗಿ ನಳನಳಿಸುತ್ತಿದ್ದರು. ‘ಯಾರ ಕಲೆ’ ಎಂದು ಪ್ರಶ್ನಿಸಬೇಕಾಗಿಯೇ ಇರಲಿಲ್ಲ. ಕಲಾವಿದರ ಸಹಿಯನ್ನೂ ಹುಡುಕಬೇಕಾಗಿರಲಿಲ್ಲ. ಎಸ್.ರಮೇಶ್ ಅವರ ವಿಶಿಷ್ಟ ಛಾಪು ಅಂದಿನ ಕರ್ನಾಟಕದ ಮನೆ ಮಾತಾಗಿತ್ತು.

ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಅಕ್ಷರಗಳು ಹೇಗೆ ಸುಂದರವಾಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟವರು ರಮೇಶ್. ಇಂದಿನ ಹಿರಿಯ ಕಲಾವಿದರ ದೊಡ್ಡ ತಂಡವೇ ರಮೇಶ್ ಅವರ ಗರಡಿಯಲ್ಲಿ ಪಳಗಿಬಂದಿದೆ. ಪ.ಸ.ಕುಮಾರ್ ಅವರು ಹೇಳುವಂತೆ ‘ಕನ್ನಡ ಪತ್ರಿಕೆಗಳಿಗೆ ರಮೇಶ್ ಅವರ ಕೊಡುಗೆ ದೊಡ್ಡದು. ಪತ್ರಿಕೆಗಳಲ್ಲಿ ಕನ್ನಡ ಅಕ್ಷರಗಳನ್ನು ಹೇಗೆ ಬರೆಯಬೇಕು ಅಂತ ತೋರಿಸಿಕೊಟ್ಟವರು. ಮೊದಲು ಎಲ್ಲರೂ ಸೈನ್ ಬೋರ್ಡ್ ಲೆಟರಿಂಗ್ ನ ಶೈಲಿಯನ್ನೇ ಪತ್ರಿಕೆಯಲ್ಲಿ ಬಳಸುತ್ತಿದ್ದರು. ಅದನ್ನು ಬಿಟ್ಟು ಆಕರ್ಷಕ ಶೈಲಿಯನ್ನು ತೋರಿಸಿಕೊಟ್ಟರು. ಲೆಟರಿಂಗ್‌ನಲ್ಲಿ ತುಂಬಾ ಪ್ರಯೋಗಗಳನ್ನೂ ಮಾಡಿದರು. ಉದಾಹರಣೆಗೆ ‘ಘನ’ ಎಂದು ಬರೆಯಬೇಕಾದರೆ ಅಕ್ಷರವೇ ಘನವನ್ನು ಪ್ರತಿನಿಧಿಸಬೇಕು, ಪದದ ಅರ್ಥಕ್ಕೂ, ಬರೆಯುವ ಶೈಲಿಗೂ ಸಂಬಂಧ ಇರಬೇಕು ಅಂತ ತೋರಿಸಿಕೊಟ್ಟರು. ಕನ್ನಡದಲ್ಲಿ ‘ಮುಸ್ಲಿಂ’ ಹಿನ್ನೆಲೆಯ ಕಥೆ ಬಂದರೆ ಅದರ ಶೀರ್ಷಿಕೆಯನ್ನು ಅರೇಬಿಕ್‌ ಶೈಲಿಯ ಕನ್ನಡದಲ್ಲಿ ಬರೆಯುವುದು ಹೇಗೆಂದು ತೋರಿಸಿಕೊಟ್ವ ಮೊದಲಿಗರು‘.

ಹಿಂದೆ ‘ಪ್ರಜಾವಾಣಿ’ಯ ಪುರವಣಿಯಲ್ಲಿ ವಿನ್ಯಾಸ ಮತ್ತು ಲೇ ಔಟ್ ಮುಖ್ಯವಾಗಿರಲಿಲ್ಲ. ಚಿತ್ರಗಳನ್ನು ಹಾಗೆಯೇ ಹಾಕುತ್ತಿದ್ದರು. ಚಿತ್ರ ಮತ್ತು ಬರಹವನ್ನು ಹೇಗೆ, ಯಾಕೆ ಹಾಕಬೇಕು, ವಿನ್ಯಾಸದ ಸೊಗಸು ಎಂದರೇನು ಎನ್ನುವುದನ್ನು ರಮೇಶ್‌ ತೋರಿಸಿಕೊಟ್ಟರು. ದೀಪಾವಳಿ ವಿಶೇಷ ಸಂಚಿಕೆಯನ್ನು ಮೊಟ್ಟಮೊದಲಿಗೆ ಹೊಸ ವಿನ್ಯಾಸದಲ್ಲಿ ತಂದರು. ಬಳಿಕ ಪ್ರಜಾವಾಣಿಯ ಹೆಜ್ಜೆಯಲ್ಲೇ ಉಳಿದ ಪತ್ರಿಕೆಗಳೂ ಸಾಗಿದವು.

ರಮೇಶ್ ಸುಮ್ಮನೆ ಊಹಿಸಿಕೊಂಡು ಚಿತ್ರ ಬರೆಯುತ್ತಿರಲಿಲ್ಲ. ಕಥೆ ಓದಿ ಅದಕ್ಕೆ ಬೇಕಾದ ರೆಫರೆನ್ಸ್ ಗಳನ್ನೂ ಹುಡುಕುತ್ತಿದ್ದರು. ಪತ್ರಿಕೆಗಳು, ಪುಸ್ತಕಗಳು, ಚಿತ್ರಗಳನ್ನು ನೋಡಿ ಅರಗಿಸಿಕೊಂಡು ನಂತರ ರಫ್ ಸ್ಕೆಚ್ ಹಾಕಿಕೊಂಡು ಅದು ಸರಿ ಅನ್ನಿಸಿದ ಮೇಲೆ ಅಂತಿಮ ಚಿತ್ರ ಬರೆಯುತ್ತಿದ್ದರು.ಅವರ ಸ್ಟ್ರೋಕ್ ಗಳಲ್ಲಿನ ಖಚಿತತೆ ಬಗ್ಗೆ ದಂತಕತೆಗಳೇ ಇವೆ. ಅವು ಎಷ್ಟು ಪರಿಪೂರ್ಣವೆಂದರೆ ಅದನ್ನು ನಕಲು ಮಾಡುವುದು ಸಾಧ್ಯವೇ ಇಲ್ಲ. ಒಂದು ಸಂದರ್ಭದಲ್ಲಿ ಪ.ಸ.ಕುಮಾರ್, ‘ರಮೇಶ್, ಆ ಸ್ಟ್ರೋಕ್ ಹೇಗೆ ಹೊಡೀತಾರೆ ಮಾರಾಯ!’ ಎಂದು ಚಂದ್ರನಾಥ್‌ಗೆ ಕೇಳಿದರಂತೆ. ‘ಸ್ಟ್ರೋಕ್ ಇರಲಿ, ಅವರು ವೈಟ್ ಕಟ್ ಮಾಡೋ ಮೆಥಡ್ ನೋಡಿ. ಅದನ್ನು ಪರ್ಫೆಕ್ಟ್ ಆಗಿ ಮಾಡಲು ಗಂಟೆಗಟ್ಟಲೆ ಹಿಡಿಯುತ್ತೆ. ಅದು ಸರಿ ಹೋಗದಿದ್ದರೆ ಚಿತ್ರ ಕೆಡುತ್ತೆ. ಆದರೆ, ರಮೇಶ್ ಅವರ ವೈಟ್ ಕಟ್ ಮಾಡೋ ರೀತಿ ಎಷ್ಟು ಅದ್ಭುತ ಅಂದರೆ ಸತ್ಯಕಾಮರ ಕಥೆಯಲ್ಲಿ ಅಪ್ಸರೆಯರು ಕೊಳದಲ್ಲಿ ತಾವರೆ ಹಿಡಿದು ನಿಂತಿದ್ದ ಚಿತ್ರ ಬರೆದರೆ, ಅವರ ಕೂದಲು, ಮೈ ಒದ್ದೆ ಆಗಿರುವ ಎಫೆಕ್ಟ್ ಇರುತ್ತೆ. ಆ ಟೆಕ್ನಿಕ್ ನ ಅಳವಡಿಸಿಕೊಂಡ ಬೇರೆ ಚಿತ್ರ ಕಲಾವಿದರು ಇರಲಿಲ್ಲ’ ಎಂದು ಚಂದ್ರನಾಥ್‌ ಹೇಳಿದರಂತೆ.

ಆಗ ಕನ್ನಡ ಪುಸ್ತಕಗಳ ಕವರ್ ಪೇಜ್ ಗೆ ಫೋರ್ ಕಲರ್ ಬ್ಲಾಕ್ ಇತ್ತು. ಆಫ್‌ಸೆಟ್ ಬಂದಿರಲಿಲ್ಲ. ಫೋರ್ ಕಲರ್ ಬ್ಲಾಕ್ ಚಿತ್ರ ಬರೆಯುವ ಪರಿಪೂರ್ಣ ಜ್ಞಾನ ರಮೇಶ್‌ರಿಗಿತ್ತು. ಆ ಕಾಲದ ಹಿರಿಯ ಲೇಖಕರೆಲ್ಲ ತಮ್ಮ ಪುಸ್ತಕಗಳಿಗೆ ರಮೇಶ್ ಕೈಯಲ್ಲೇ ಚಿತ್ರ ಬರೆಸಿಕೊಳ್ಳುತ್ತಿದ್ದರು. ಅನಕೃ, ತರಾಸು, ಸತ್ಯಕಾಮ, ಎಂ.ರಾಮಮೂರ್ತಿ, ಜಿ.ಪಿ.ರಾಜರತ್ನಂ, ನಿರಂಜನ, ಗೋಕಾಕ್, ಅನುಪಮಾ ನಿರಂಜನ, ಬೀಚಿ, ರಾಮಚಂದ್ರ ಶರ್ಮ ಎಲ್ಲರಿಗೂ ರಮೇಶ್ ಪ್ರಿಯರಾಗಿದ್ದರು.

ರಮೇಶ್ ಶಿಸ್ತಿನ ಮನುಷ್ಯ. ಬಿಳಿ ಬಟ್ಟೆಯಲ್ಲಿದ್ದರೂ ಸಣ್ಣ ಬಣ್ಣದ ಕಲೆ ಕೂಡಾ ಅವರ ಬಟ್ಟೆಯ ಮೇಲೆ ಇರುತ್ತಿರಲಿಲ್ಲ. ಅವರ ವರ್ಕಿಂಗ್ ಟೇಬಲ್ ಹೊಳೆಯುವಷ್ಟು ಸ್ವಚ್ಛವಾಗಿರುತ್ತಿತ್ತು. ಬ್ರಶ್ ಗಳನ್ನೂ ತೊಳೆದು ಹೊಸದರಂತೆ ಇಡುತ್ತಿದ್ದರು.‘ಪ್ರತಿಯೊಂದು ಚಿತ್ರದ ಬೆನ್ನಲ್ಲಿ, ಅದು ಯಾರ ಕಥೆ, ಪ್ರಕಟವಾದ ದಿನಾಂಕ ಮುಂತಾದ ವಿವರಗಳನ್ನು ಬರೆದಿಡುತ್ತಿದ್ದರು. ಎಲ್ಲ ಚಿತ್ರಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿ ಇಡುತ್ತಿದ್ದರು. ಈಗಲೂ ಅವರ ಮನೆಯಲ್ಲಿ ಚಿತ್ರಗಳು ನಿನ್ನೆ ಮೊನ್ನೆ ಇಟ್ಟ ಹಾಗೇ ಕಾಣಿಸುತ್ತವೆ’ ಎನ್ನುತ್ತಾರೆ ಪ.ಸ.ಕುಮಾರ್.ನಿವೃತ್ತಿ ಹೊಂದಿದ ಮೇಲೂ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೃಜನಶೀಲರಾಗಿ ದುಡಿದ ರಮೇಶ್ ಅದ್ವಿತೀಯ ಕಲಾವಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT