ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಪ್ರಕರಣ: ಸಿಬಿಐ ವಿಚಾರಣೆಯಲ್ಲಿ ಎಸ್ಐಟಿ ಮುಖ್ಯಸ್ಥ

Published 1 ಮೇ 2024, 22:27 IST
Last Updated 1 ಮೇ 2024, 22:27 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ (ವಿಶೇಷ ತನಿಖಾ ತಂಡ) ಬಿಜಯ್‌ ಕುಮಾರ್ ಸಿಂಗ್ ವಿರುದ್ಧ, ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಸಿಬಿಐ, ‘ಆಪರೇಷನ್ ಕನಕ್’ ಹೆಸರಿನಲ್ಲಿ ವಿಚಾರಣೆ ನಡೆಸುತ್ತಿದೆ.

‘ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ನಡೆದಿದೆ’ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕ ಸುದೀಪ್ ಸಿಂಗ್ ಸೇರಿದಂತೆ 74 ಆರೋಪಿಗಳ ವಿರುದ್ಧ 2023ರ ಜನವರಿ 10ರಂದು ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ‘ಆಪರೇಷನ್ ಕನಕ್‌’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ದೇಶದ 50 ಸ್ಥಳಗಳ ಮೇಲೆ ದಾಳಿ ಮಾಡಿದ್ದರು.

ಕರ್ನಾಟಕ ಕೇಡರ್‌ನ 1996 ಬ್ಯಾಚ್‌ ಐಪಿಎಸ್ ಅಧಿಕಾರಿಯಾದ ಬಿಜಯ್‌ ಕುಮಾರ್ ಸಿಂಗ್ (ಬಿ.ಕೆ.ಸಿಂಗ್) ಅವರನ್ನು ಎಫ್‌ಸಿಐನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ (ಸಿಬ್ಬಂದಿ) 2019ರ ಅಕ್ಟೋಬರ್ 17ರಂದು ನೇಮಕ ಮಾಡಲಾಗಿತ್ತು. ರಾಜ್ಯ ಸೇವೆಯಿಂದ ಬಿಡುಗಡೆಗೊಂಡಿದ್ದ ಬಿ.ಕೆ. ಸಿಂಗ್, ಕೇಂದ್ರ ಸೇವೆಯ ಹೊಸ ಜವಾಬ್ದಾರಿವಹಿಸಿಕೊಂಡಿದ್ದರು.

ಇವರ ಅಧಿಕಾರ ಅವಧಿಯಲ್ಲಿ ಎಫ್‌ಸಿಐನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಸಿಬಿಐ ಪತ್ತೆ ಮಾಡಿತ್ತು. ಚಂಡೀಗಢದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ದರ್ಜೆ ಅಧಿಕಾರಿ ಸೇರಿದಂತೆ ಹಲವರನ್ನು ಬಂಧಿಸಿತ್ತು. ಬಿ.ಕೆ. ಸಿಂಗ್ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಡಿಜಿಎಂ ರಾಜೀವ್‌ಕುಮಾರ್ ಮಿಶ್ರಾ ವಿರುದ್ಧವೂ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.

‘ಭ್ರಷ್ಟಾಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ’ ಎಂಬುದಾಗಿ ಬಿ.ಕೆ. ಸಿಂಗ್ ಹೇಳಿದ್ದರು. ಇದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು, ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. ಆದರೆ, ಸಿಂಗ್‌ ಅವರನ್ನು ಮೇಲಿಂದ ಮೇಲೆ ಪ್ರಕರಣದ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಅವಧಿಗೂ ಮುನ್ನವೇ ಸೇವೆಯಿಂದ ಬಿಡುಗಡೆ: ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಫ್‌ಸಿಐ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವಾಲಯ, ಬಿ.ಕೆ. ಸಿಂಗ್ ಹಾಗೂ ಇತರೆ ಅಧಿಕಾರಿಗಳನ್ನು ಅಧಿಕಾರ ಅವಧಿಗೂ ಮುನ್ನ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.

2019ರ ಅಕ್ಟೋಬರ್ 17ರಂದು ನೇಮಕಗೊಂಡಿದ್ದ ಬಿ.ಕೆ. ಸಿಂಗ್ ಅಧಿಕಾರ ಅವಧಿ ಐದು ವರ್ಷವಾಗಿತ್ತು. ಭ್ರಷ್ಟಾಚಾರ ಪ್ರಕರಣದಿಂದಾಗಿ, 2023ರ ನವೆಂಬರ್ 30ರಂದು ಬಿ.ಕೆ. ಸಿಂಗ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಅವರು ರಾಜ್ಯ ಸೇವೆಗೆ ವಾಪಸು ಬಂದಿದ್ದಾರೆ ಎಂಬುದು ದಾಖಲೆಗಳಿಂದ ಗೊತ್ತಾಗುತ್ತಿದೆ.

‘ಎಫ್‌ಸಿಐ ಭ್ರಷ್ಟಾಚಾರ ಪ್ರಕರಣದಲ್ಲಿ 74 ಆರೋಪಿಗಳು ಭಾಗಿಯಾಗಿರುವುದಕ್ಕೆ ಪುರಾವೆಗಳು ಸಿಕ್ಕಿದ್ದು, ಅವುಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ. 74 ಆರೋಪಿಗಳ ಪೈಕಿ 34 ಅಧಿಕಾರಿಗಳು ಸದ್ಯ ಕೆಲಸದಲ್ಲಿದ್ದಾರೆ. ಮೂವರು ಅಧಿಕಾರಿಗಳು ನಿವೃತ್ತರಾಗಿದ್ದಾರೆ. 17 ಖಾಸಗಿ ವ್ಯಕ್ತಿಗಳು ಹಾಗೂ 20 ಸಂಸ್ಥೆಗಳ ಪ್ರತಿನಿಧಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ’ ಎಂದು ಸಿಬಿಐ ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಎಡಿಜಿಪಿ ಬಿ.ಕೆ. ಸಿಂಗ್ ಅವರ ಪಾತ್ರವಿರುವ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ. ಆದರೆ, ವಿಚಾರಣೆ ಮಾತ್ರ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಪುರಾವೆಗಳು ಲಭ್ಯವಾದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡಕ್ಕೂ (ಎಸ್‌ಐಟಿ) ಬಿ.ಕೆ. ಸಿಂಗ್ ಅವರು ಮುಖ್ಯಸ್ಥರಾಗಿದ್ದರು. ಸಿಬಿಐ ವಿಚಾರಣೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿ.ಕೆ. ಸಿಂಗ್ ಅವರು ಲಭ್ಯರಾಗಲಿಲ್ಲ.

ಏನಿದು ಪ್ರಕರಣ?

ಅಕ್ಕಿ ಹಾಗೂ ಆಹಾರ ಧಾನ್ಯಗಳ ವ್ಯಾಪಾರಿಗಳು, ದೇಶದ ಹಲವೆಡೆ ಅಕ್ರಮವಾಗಿ ಗೋದಾಮು ತೆರೆದಿದ್ದರು. ಕಳಪೆ ಅಕ್ಕಿ– ಆಹಾರ ಧಾನ್ಯಗಳನ್ನು ಸಂಗ್ರಹಿಸಿ ದೇಶದ ಹಲವೆಡೆಗೆ ಟ್ರಕ್‌ಗಳ ಮೂಲಕ ಸರಬರಾಜು ಮಾಡುತ್ತಿದ್ದರು. ಇದನ್ನು ತಡೆಯಬೇಕಾದ ಎಫ್‌ಸಿಐ ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಏಜೆಂಟ್‌ರಿಂದ ಲಂಚ ಪಡೆಯುತ್ತಿದ್ದರು. ಪ್ರತಿ ಟ್ರಕ್‌ ಲೆಕ್ಕದಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಅಕ್ರಮದ ಬಗ್ಗೆ ದಾಖಲಾಗುವ ಪ್ರಕರಣಗಳ ವಿಚಾರಣೆಯಲ್ಲಿ ಆರೋಪಿಗಳ ಪರ ವರದಿ ತಯಾರಿಸಲು ಹಣ ಪಡೆಯುತ್ತಿದ್ದರೆಂಬ ಆರೋಪವಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಬಿಐ ಅಧಿಕಾರಿಗಳು, ರಹಸ್ಯ ಕಾರ್ಯಾಚರಣೆ ನಡೆಸಿ ಪುರಾವೆ ಸಂಗ್ರಹಿಸಿ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಎಫ್‌ಸಿಐ ಭ್ರಷ್ಟಾಚಾರ ಪ್ರಕರಣವನ್ನು ಭೇದಿಸಲು ‘ಆಪರೇಷನ್ ಕನಕ್‌’ ಕಾರ್ಯಾಚರಣೆ ಶುರು ಮಾಡಿದ್ದ ಸಿಬಿಐ ಅಧಿಕಾರಿಗಳು, ಪಂಜಾಬ್‌, ಉತ್ತರ ಪ್ರದೇಶ ಹಾಗೂ ಚಂಡೀಗಢದ 90 ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ಒಟ್ಟು ₹1.03 ಕೋಟಿ ನಗದು (ಅಧಿಕಾರಿಯೊಬ್ಬರ ಮನೆಯ ವಾಷಿಂಗ್‌ ಮಷಿನ್‌ನಲ್ಲಿ ₹ 80 ಲಕ್ಷ ಸಿಕ್ಕಿತ್ತು) ಹಾಗೂ ₹ 3 ಕೋಟಿ ಮೌಲ್ಯದ ಇತರೆ ಆಸ್ತಿಗಳನ್ನು ಜಪ್ತಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT