ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಟ್ರೇಲರ್ ಮಾತ್ರ, ಸಿನಿಮಾ ಬಾಕಿ ಇದೆ: ಮಹಿಳೆಯರ ಸಾಧನೆ ಬಗ್ಗೆ ರಾಷ್ಟ್ರಪತಿ ಪ್ರಶಂಸೆ

Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇದು ಟ್ರೇಲರ್ ಮಾತ್ರ, ಸಿನಿಮಾ ಇನ್ನೂ ಬಾಕಿ ಇದೆ...

– ದೇಶದಲ್ಲಿಯ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಸಾಧನೆ ಬಣ್ಣಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ ಮಾತಿದು. ಅವರ ಈ ಮಾತುಗಳನ್ನು ಕೇಳಿ ಇಡೀ ಸಭಾಂಗಣದಲ್ಲಿ ನಗುವಿನ ಅಲೆ ಆವರಿಸಿತು.  

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ನಡೆದ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. 

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳು ಉತ್ತಮ ಸಾಧನೆ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಮಹಿಳೆಯರು ದೊಡ್ಡ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಪ್ರಶಂಸಿಸಿದರು.  

‘ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಈ ಘಟಿಕೋತ್ಸವದಲ್ಲಿ 17 ಪದಕಗಳ ಪೈಕಿ 11 ಪದಕಗಳನ್ನು ಹೆಣ್ಣು ಮಕ್ಕಳು ಪಡೆದಿದ್ದಾರೆ. ಇದು ಟ್ರೇಲರ್ ಮಾತ್ರ, ಸಿನಿಮಾ ಬಾಕಿ ಇದೆ’ ಎಂದು ಅವರು ಹೆಣ್ಣು ಮಕ್ಕಳ ಈ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

‘ಗುರುಪೂರ್ಣಿಮೆಯ ದಿನ ಘಟಿಕೋತ್ಸವ ನಡೆಯುತ್ತಿದೆ. ಭಾರತೀಯ ಪರಂಪರೆಯಲ್ಲಿ ಗುರುಪೂರ್ಣಿಮೆಗೆ ವಿಶೇಷ ಸ್ಥಾನವಿದೆ. ನಮ್ಮ ಜೀವನ ನಿರ್ಮಿಸಿದ್ದು ಗುರು. ಗುರುವಿಗೆ ದೇವರ ಸ್ಥಾನ ನೀಡಲಾಗಿದೆ. ಇದನ್ನು ನಾವು, ನೀವೆಲ್ಲರೂ ಉಳಿಸಿಕೊಂಡು ಹೋಗುವ ಕೆಲಸವಾಗಬೇಕಿದೆ’ ಎಂದರು.

‘ನಮ್ಮ ಗುರುಕುಲ ಶಿಕ್ಷಣ ಪದ್ಧತಿಯು ವಿಶ್ವಕ್ಕೆ ಮಾದರಿಯಾಗಿದೆ. ಸತ್ಯಸಾಯಿ ಗ್ರಾಮದಲ್ಲಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಬಡವರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ’ ಎಂದು ಶ್ಲಾಘಿಸಿದರು. 

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಸತ್ಯಸಾಯಿ ಆಶ್ರಮದ ಮಧುಸೂದನ ಸಾಯಿ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಇದ್ದರು.

ಐದು ಮಂದಿಗೆ ಗೌರವ ಡಾಕ್ಟರೇಟ್

ಪರಿಸರ ಪ್ರೇಮಿ ತುಳಸಿಗೌಡ, ಸಂಗೀತ ವಿದ್ವಾನ್ ಆರ್‌.ಕೆ.ಪದ್ಮನಾಭ, ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಪುಲ್ಲೇಲ ಗೋಪಿಚಂದ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ವೇದ ವಿದ್ವಾಂಸ ಪ್ರೊ.ವಿಜಯ್ ಶಂಕರ್ ಶುಕ್ಲಾ ಅವರಿಗೆ ರಾಷ್ಟ್ರಪತಿಯವರು ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT