ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 17 ಅಕ್ಟೋಬರ್ 2023, 15:26 IST
Last Updated 17 ಅಕ್ಟೋಬರ್ 2023, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲವು ಸಚಿವರು ಮತ್ತು ಅಧಿಕಾರಿಗಳು ಕಡತಗಳಲ್ಲಿ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯುತ್ತಾರೆ. ಈ ರೀತಿ ಇಂಗ್ಲಿಷ್‌ ಭಾಷೆಯ ಮೇಲೆ ವ್ಯಾಮೋಹ ಸರಿಯಲ್ಲ. ಆಡಳಿತದಲ್ಲಿ ಕನ್ನಡಕ್ಕೇ ಆದ್ಯತೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ–50ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯಗಳ ಜತೆ ಪತ್ರ ವ್ಯವಹಾರ ನಡೆಸುವಾಗ ಇಂಗ್ಲಿಷ್‌ ಬಳಸಬಹುದು. ರಾಜ್ಯದಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು’ ಎಂದರು.

ಕನ್ನಡ ಆಡಳಿತ ಭಾಷೆ ಎಂದು ಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ಸರಿಯಾಗಿ ಪಾಲನೆಯಾಗಿಲ್ಲ. ನಿರ್ಲಕ್ಷ್ಯವೇ ಇದಕ್ಕೆ ಕಾರಣ ಇರಬಹುದು. ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ, ಕನ್ನಡದ ಅನಿವಾರ್ಯವನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು.

‘ಕನ್ನಡಿಗರಲ್ಲಿ ಔದಾರ್ಯ ಜಾಸ್ತಿ ಇದೆ. ನೆರೆಯ ಅನೇಕ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯದಿದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಆದರೆ, ಕನ್ನಡ ಬಾರದಿದ್ದರೂ ಕರ್ನಾಟಕದಲ್ಲಿ ಬದುಕಬಹುದು. ಹೊರ ರಾಜ್ಯಗಳಿಂದ ಬಂದವರಿಗೆ ನಮ್ಮ ಭಾಷೆಯನ್ನು ಕಲಿಸುವ ಬದಲಿಗೆ ನಾವೇ ಅವರ ಭಾಷೆ ಕಲಿತು ವ್ಯವಹರಿಸುತ್ತಿದ್ದೇವೆ. ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡುವಂತಾಗಬೇಕು’ ಎಂದರು.

1956ರ ನವೆಂಬರ್‌ 1ರಂದು ಕರ್ನಾಟಕದ ಏಕೀಕರಣವಾಯಿತು. 1973ರ ನವೆಂಬರ್‌ 1ರಂದು ಕರ್ನಾಟಕ ಎಂದು ನಾಮಕರಣವಾಯಿತು. ಕರ್ನಾಟಕ ಸಂಭ್ರಮ–50ರ ಆಚರಣೆ ಕಳೆದ ವರ್ಷವೇ ಆರಂಭವಾಗಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಆ ಕೆಲಸ ಮಾಡಲಿಲ್ಲ. ಹಾಗೆಯೇ ಬಿಟ್ಟರೆ ಲೋಪವಾಗುತ್ತದೆ ಎಂಬ ಕಾರಣದಿಂದ ತಮ್ಮ ಸರ್ಕಾರ 2023ರ ನವೆಂಬರ್‌ 1 ರಿಂದ 2024ರ ನ.1 ರವರೆಗೆ ಕರ್ನಾಟಕ ಸಂಭ್ರಮ–50 ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕನ್ನಡದ ನೆಲ, ಜಲ, ಭಾಷೆ ಎಲ್ಲವನ್ನೂ ಒಳಗೊಂಡಂತೆ 50ರ ಸಂಭ್ರಮ ಆಚರಿಸಲಾಗುವುದು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ಕರ್ನಾಟಕದ ನಾಮಕರಣ ಸಮಾರಂಭವು ಬೆಂಗಳೂರು, ಹಂಪಿ ಮತ್ತು ಗದಗದಲ್ಲಿ ನಡೆದಿತ್ತು. ಅದೇ ಮಾದರಿಯಲ್ಲಿ 50ರ ಸಂಭ್ರಮದ ಮೊದಲ ಮೂರು ದಿನಗಳ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ಕಾನೂನು ಸಚಿವ ಎಚ್‌.ಕೆ. ಪಾಟೀಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ವಿಧಾನ ಪರಿಷತ್‌ ಸದಸ್ಯ ನಾಗರಾಜ್ ಯಾದವ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್‌. ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT