ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ಸಮೂಹಕ್ಕೆ ‘ನಿಪುಣ’ ಕೌಶಲದ ಬಲ

ಹೂಡಿಕೆಗೆ ಕಾಂಗ್ಸ್‌ಬರ್ಗ್ ಡಿಜಿಟಲ್‌ ಕಂಪನಿಗೆ ಮನವಿ
Published : 10 ಸೆಪ್ಟೆಂಬರ್ 2024, 16:31 IST
Last Updated : 10 ಸೆಪ್ಟೆಂಬರ್ 2024, 16:31 IST
ಫಾಲೋ ಮಾಡಿ
Comments

ಬೆಂಗಳೂರು: ‘ನಿಪುಣ’ ಕಾರ್ಯಕ್ರಮ ನಿರ್ದಿಷ್ಟವಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ಲೌಡ್‌ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ನಿಖರ ಕೌಶಲದೊಂದಿಗೆ ಯುವ ಸಮೂಹವನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ’ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಾಂಗ್ಸ್‌ಬರ್ಗ್ ಡಿಜಿಟಲ್‌ನ ಅಧ್ಯಕ್ಷ ಮತ್ತು ಸಿಇಒ ಶೇನ್ ಮೆಕ್‌ಆರ್ಡಲ್ ಹಾಗೂ ಕಾಂಗ್ಸ್‌ಬರ್ಗ್‌ ಡಿಜಿಟಲ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ನೇತೃತ್ವದ ನಿಯೋಗ ಮಂಗಳವಾರ ತಮ್ಮನ್ನು ಭೇಟಿ ಮಾಡಿದಾಗ, ಕೈಗಾರಿಕಾ–ನಿರ್ದಿಷ್ಟ ಕೌಶಲ್ಯ ಅಭಿವೃದ್ಧಿಗಾಗಿ ಯೋಜಿಸಲಾಗಿರುವ ‘ನಿಪುಣ’ ಕಾರ್ಯಕ್ರಮ ಬಳಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು.

‘ನಿಪುಣ ಸಾಮಾನ್ಯ ತರಬೇತಿ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮ ನಿರ್ದಿಷ್ಟ ಉದ್ಯಮದ ಅಗತ್ಯಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಉದ್ಯೋಗಿಗಳ ಬೇಡಿಕೆಗಳನ್ನು ಪೂರೈಸಲು ಕಾಂಗ್ಸ್‌ಬರ್ಗ್ ಡಿಜಿಟಲ್‌ನಂತಹ ಕಂಪನಿಗಳೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ’ ಎಂದು ಪ್ರಿಯಾಂಕ್ ಹೇಳಿದರು.

‘ಆವಿಷ್ಕಾರ ಮತ್ತು ಪ್ರತಿಭೆಗಳ ಅಭಿವೃದ್ಧಿಯಲ್ಲಿ ನಾರ್ವೆಯೊಂದಿಗೆ ಪಾಲುದಾರಿಕೆಗೆ ರಾಜ್ಯ ಮುಕ್ತ ಮನಸ್ಸು ಹೊಂದಿದೆ. ಜಾಗತಿಕ ಗುಣಮಟ್ಟವನ್ನು ಪೂರೈಸಲು ಕರ್ನಾಟಕದ ಅತ್ಯುನ್ನತ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಸಚಿವರು ಸೂಚಿಸಿದರು.

ಕಾಂಗ್ಸ್‌ಬರ್ಗ್‌ ಡಿಜಿಟಲ್‌ನ ಅಧ್ಯಕ್ಷ ಮತ್ತು ಸಿಇಒ ಶೇನ್ ಮೆಕ್‌ ಆರ್ಡಲ್‌ ಮಾತನಾಡಿ, ‘ಬೆಂಗಳೂರು ನಮ್ಮ ಜಾಗತಿಕ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಭಾಗವಾಗಿದೆ. ಸ್ಥಳೀಯ ಪ್ರತಿಭೆಗಳ ವಲಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಉತ್ಸುಕರಾಗಿದ್ದೇವೆ. ಕೃತಕ ಬುದ್ಧಿಮತ್ತೆಯನ್ನು ಬೆಳೆಸಲು ಕರ್ನಾಟಕ ಪರಿಪೂರ್ಣ ಸ್ಥಳ. ನಾವೀನ್ಯತೆಗೆ ಚಾಲನೆ ನೀಡುವುದರ ಜತೆಗೆ ನಾರ್ವೆಯ ಹೆಚ್ಚಿನ ಕಂಪನಿಗಳನ್ನು ಕರ್ನಾಟಕಕ್ಕೆ ತರಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT