ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯು ಉಪನ್ಯಾಸಕ ಹುದ್ದೆಗೆ ಬಡ್ತಿ: ಪರೀಕ್ಷೆ ರದ್ದತಿಗೆ ಸಭೆ- ಮಧು ಬಂಗಾರಪ್ಪ

Published 7 ಡಿಸೆಂಬರ್ 2023, 14:48 IST
Last Updated 7 ಡಿಸೆಂಬರ್ 2023, 14:48 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ‘ಪ್ರೌಢ ಶಾಲಾ ಶಿಕ್ಷಕರು ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆಯಲು ಅರ್ಹತಾ ಪರೀಕ್ಷೆ ಬರೆಯಬೇಕೆಂಬ ನಿಯಮವನ್ನು ರದ್ದು ಮಾಡುವ ಸಂಬಂಧ ಅಧಿವೇಶನ ಮುಗಿಯುವುದರ ಒಳಗೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಜೆಡಿಎಸ್‌ನ ಮರಿತಿಬ್ಬೇ ಗೌಡ ಅವರು ಶಿಕ್ಷಕರ ಬಡ್ತಿ ನಿಯಮದಲ್ಲಿರುವ ಲೋಪಗಳ ಕುರಿತಂತೆ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ‘ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ವೇಳೆ ಶೇ 75ರಷ್ಟು ನೇರ ನೇಮಕಾತಿ ಹಾಗೂ ಶೇ 25ರಷ್ಟು ಹುದ್ದೆಗಳನ್ನು ಪ್ರೌಢಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಭರ್ತಿ ಮಾಡಲಾಗುತ್ತಿದೆ. ಉಪನ್ಯಾಸಕರಾಗಿ ಬಡ್ತಿ ಪಡೆಯಲು ಇಚ್ಛಿಸುವ ಶಿಕ್ಷಕರು ಅರ್ಹತಾ ಪರೀಕ್ಷೆ ಬರೆಯಬೇಕಿದ್ದು, ಪರೀಕ್ಷೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದವರು ಶೇ 55 ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ಶೇ 50ರಷ್ಟು ಅಂಕ ಪಡೆಯಬೇಕಿದೆ’ ಎಂದು ಹೇಳಿದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮರಿತಿಬ್ಬೇಗೌಡ ಸೇರಿದಂತೆ ವಿರೋಧ ‍ಪಕ್ಷದ ಸದಸ್ಯರು, ‘ಬಡ್ತಿಗಾಗಿ ಪ್ರೌಢಶಾಲಾ ಶಿಕ್ಷಕರು ಪರೀಕ್ಷೆ ಬರೆಯುವ ನಿಯಮದಿಂದಾಗಿ ಶಿಕ್ಷಕರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಒಂದೇ ಇಲಾಖೆ ಅಡಿಯಲ್ಲಿ ಬಡ್ತಿ ನೀಡುವ ಅನುಪಾತದಲ್ಲಿ ಎರಡು ನಿಯಮವಿರುವುದು ಸರಿಯಲ್ಲ. ಪ್ರೌಢಶಾಲೆಗೆ ಬಡ್ತಿ ಪಡೆಯುವ ಶಿಕ್ಷಕರ ಪ್ರಮಾಣದಂತೆಯೇ ಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯುವ ಪ್ರೌಢಶಾಲಾ ಶಿಕ್ಷಕರ ಪ್ರಮಾಣ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಏಳು ವಿವಿ: ಸಿಎಂ ಜೊತೆ ಚರ್ಚಿಸಿ ತೀರ್ಮಾನ’

ವಿಧಾನ ಪರಿಷತ್‌: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಏಳು ವಿಶ್ವವಿದ್ಯಾಯಗಳ ಸ್ಥಾಪಿಸಿದ್ದು, ಅವುಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದರು.

2022ರಲ್ಲಿ ಸ್ಥಾಪಿಸಲಾದ ಏಳು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಕುರಿತಂತೆ ಜೆಡಿಎಸ್‌ನ ಗೋವಿಂದರಾಜು, ಕೆ.ಎ. ತಿಪ್ಪೇಸ್ವಾಮಿ ಮತ್ತು ಸೂರಜ್‌ ರೇವಣ್ಣ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ‘ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಅಧಿನಿಯಮ 2022ರ ಅಡಿಯಲ್ಲಿ ಚಾಮರಾಜನಗರ, ಹಾಸನ, ಬೀದರ್, ಕೊಪ್ಪಳ, ಹಾವೇರಿ, ಕೊಡಗು ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ’ ಎಂದರು.

‘ಈ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆಯದೇ ಸರ್ಕಾರಿ ಆದೇಶದ ಮೇಲೆ ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಇದು ಅವೈಜ್ಞಾನಿಕ ಕ್ರಮ. ಅಲ್ಲದೆ, ನಮ್ಮ ಸರ್ಕಾರ ನೇಮಿಸಿದ್ದ ಸಮಿತಿಯು ಸಲ್ಲಿಸಿರುವ ವರದಿಯಂತೆ ಒಂದು ವಿಶ್ವವಿದ್ಯಾಲಯ ಸ್ಥಾಪಿಸಿ, ಮೂಲಸೌಕರ್ಯ ಕಲ್ಪಿಸಲು ಮತ್ತು ಐದು ವರ್ಷ ನಿರ್ವಹಿಸಲು ₹342 ಕೋಟಿ ಅವಶ್ಯಕತೆಯಿದೆ. ಆದರೆ ಹೊಸ ವಿಶ್ವವಿದ್ಯಾಲಯಗಳಿಗೆ ಆವರ್ತಕ ವೆಚ್ಚವಾಗಿ ತಲಾ ₹2 ಕೋಟಿ ನಿಗದಿಪಡಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT