ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಆರೋಪ- ಕರ್ನಾಟಕದ ಆತ್ಮಕ್ಕೆ ಪೆಟ್ಟು: ಅಶೋಕ

Published 28 ಫೆಬ್ರುವರಿ 2024, 16:29 IST
Last Updated 28 ಫೆಬ್ರುವರಿ 2024, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಧಾನಸೌಧದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಲಾಗಿದೆ. ಇದು ಏಳು ಕೋಟಿ ಕನ್ನಡಿಗರ ಆತ್ಮವಿರುವ ಜಾಗ. ಅದಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ರಾಜ್ಯದ ಜನರಲ್ಲಿ ಭೀತಿಯ ವಾತಾವರಣ ಮೂಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಧಾನಸೌಧದಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಿ ಮಾತನಾಡಿದ ಅವರು, ಈ ಘಟನೆಯ ಬಳಿಕ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿರುವುದನ್ನು ನೋಡಿದರೆ ಸರ್ಕಾರದ ಮೇಲೆಯೇ ಸಂಶಯ ಬರುವಂತಾಗಿದೆ. ಸರ್ಕಾರದಲ್ಲಿರುವವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

‘ನಮ್ಮ ಸೈನಿಕರು ಹಗಲು ರಾತ್ರಿ ಎನ್ನದೇ ತಮ್ಮ ಪ್ರಾಣ ಪಣವಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಆದರೆ, ಯಾರೋ ಕೆಲವರು ವಿಧಾನಸೌಧದಕ್ಕೆ ಬಂದು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗುತ್ತಾರೆ. ಇವರಿಗೆ ಎಷ್ಟು ಧೈರ್ಯ. ನಾವು ಯಾವ ಮುಖ ಇಟ್ಟುಕೊಂಡು ಸೈನಿಕರನ್ನು ನೋಡಬೇಕು’ ಎಂದು ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.

‘ಆ ರೀತಿ ಕೂಗಿದವರು ಯಾರೋ ಪಾಕಿಸ್ತಾನಿಯೇ ಇರಬೇಕು. ಈ ದೇಶದ ಅನ್ನ ತಿಂದವರು, ನೀರು ಕುಡಿದವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಇನ್ನೆಷ್ಟು ಭಯೋತ್ಪಾದಕರು ಬಂದಿರಬಹುದು. ಈ ರೀತಿ ಕೂಗಿದವರ ವಿರುದ್ಧ ಸರ್ಕಾರ ಒಂದು ಸಣ್ಣ ಕ್ರಮವನ್ನೂ ಕೈಗೊಳ್ಳದೇ ಮೌನವಹಿಸಿರುವುದು ಅಚ್ಚರಿ ಮೂಡಿಸುತ್ತದೆ. ಇವರನ್ನು ಕೆಂಪು ರತ್ನಗಂಬಳಿ ಹಾಸಿ ಒಳಗೆ ಬಿಟ್ಟವರು ಯಾರು? ನಾಸಿರ್ ಹುಸೇನ್‌ಗೆ ಹೇಗೆ ಟಿಕೆಟ್ ನೀಡಿದಿರಿ’ ಎಂದು ಪ್ರಶ್ನಿಸಿದಾಗ ಸಚಿವ ದಿನೇಶ್‌ ಗುಂಡೂರಾವ್‌ ಆಕ್ಷೇಪ ವ್ಯಕ್ತಪಡಿಸಿದರು.

‘ನಾಸಿರ್‌ ಹುಸೇನ್ ಅವರನ್ನು ಪ್ರಶ್ನಿಸಲು ಹೋದ ಮಾಧ್ಯಮ ಪ್ರತಿನಿಧಿಗಳಿಗೇ ಬೆದರಿಕೆ ಹಾಕಿ ಗೆಟ್‌ಔಟ್‌ ಎಂದಿದ್ದಾರೆ. ಮಾಧ್ಯಮಗಳು ತಪ್ಪು ಮಾಡಿದ್ದರೆ ಅವರನ್ನು ಬಂಧಿಸಿ, ಆರೋಪ ಮಾಡಿರುವ ನನ್ನನ್ನೂ ಬಂಧಿಸಿ. ಓಟಿನ ಆಸೆಗೆ ಪಿಎಫ್‌ಐ, ಕೆಎಫ್‌ಡಿಯಂತಹ ಸಂಘಟನೆಗಳ ಮೇಲೆ ವ್ಯಾಮೋಹ ಬೆಳೆಸಿಕೊಳ್ಳಬೇಡಿ’ ಎಂದು ಅಶೋಕ ಹೇಳಿದರು.

ಕಾಂಗ್ರೆಸ್‌ನ ಪಿ.ಎಂ. ನರೇಂದ್ರ ಸ್ವಾಮಿ ಮಾತನಾಡಿ, ‘ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದವರನ್ನೂ ತನಿಖೆಗೆ ಒಳಪಡಿಸಬೇಕು. ತಿರುಚಿದ ವಿಡಿಯೊವನ್ನೂ ಪರಿಶೀಲನೆಗೆ ಒಳಪಡಿಸಬೇಕು. ಇವೆಲ್ಲ ಗೋದಿ ಮೀಡಿಯಾದ ಕೆಲಸ’ ಎಂದು ಹೇಳಿದರು.

‘ದೇಶ ಭಕ್ತಿಯನ್ನು ನಾವು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ. ಇಂದಿರಾಗಾಂಧಿ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದವರು’ ಎಂದು ನರೇಂದ್ರಸ್ವಾಮಿ ಎದೆ ತಟ್ಟಿಕೊಂಡು ಏರಿದ ಧ್ವನಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT