ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಮತ್ತಷ್ಟು ರಾಜಕಾರಣಿಗಳ ನಂಟು

Last Updated 5 ಮೇ 2022, 8:33 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ರುದ್ರಗೌಡ ಡಿ. ಪಾಟೀಲ ಜೊತೆಗೆ, ಜಿಲ್ಲೆಯ ಇನ್ನೂ ಕೆಲವು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಕೈಜೋಡಿಸಿದ ಗುಮಾನಿ ಎದ್ದಿದೆ.

‘ಕೆಲವು ನಾಯಕರ ಜೊತೆಗಿದ್ದರು’ ಎಂದು ಸ್ವತಃ ರುದ್ರಗೌಡ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಎರಡೂ ಪಕ್ಷಗಳ ‘ಆ’ ನಾಯಕರಲ್ಲಿ ಈಗ ನಡುಕ ಶುರುವಾಗಿದೆ.

ರುದ್ರಗೌಡ ಯಾರ ಹೆಸರು ಹೇಳಬಹುದು ಎಂಬ ಪ್ರಶ್ನೆ ಎರಡೂ ಪಕ್ಷಗಳಲ್ಲಿ ಸುಳಿದಾಡುತ್ತಿದೆ. ಕೆಲವರು ತಮ್ಮ ಹಿಂಬಾಲಕರನ್ನು ರುದ್ರಗೌಡ ಭೇಟಿಗೆ ಕಳುಹಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಹೆಸರು ಬಾಯಿಬಿಡದಂತೆ ಒತ್ತಡ ಹೇರಲು ಇನ್ನಿಲ್ಲದ ದಾರಿ ಹುಡುಕುತ್ತಿದ್ದಾರೆ. ಆದರೆ, ಸಿಐಡಿ ಅಧಿಕಾರಿಗಳು ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ.

ತಮ್ಮ ಆಪ್ತರು, ಬೆಂಬಲಿಗರನ್ನು ಈ ನಾಯಕರೇ ರುದ್ರಗೌಡಗೆ ಪರಿಚಯ ಮಾಡಿಸಿ, ಕೆಲಸ ಮಾಡಿಕೊಡುವಂತೆ ಕೇಳಿದ್ದರು. ಜಿಲ್ಲೆಯಲ್ಲಿ ತಮಗೆ ಪರಿಚಯ ಇರುವ ಪೊಲೀಸ್‌ ಅಧಿಕಾರಿಗಳ ಮೂಲಕವೂ ಹೇಳಿಸಿದ್ದರು. ಹೀಗಾಗಿ, ಅಕ್ರಮದ ಸುಳಿ ಸುತ್ತಿಕೊಂಡು ತಮ್ಮ ಕುತ್ತಿಗೆಗೆ ಬಂದು ಬಿಟ್ಟೀತು ಎಂಬ ಭಯ ಅವರಲ್ಲಿ ಮೂಡಿದೆ ಎಂಬುದು ಮೂಲಗಳ ಮಾಹಿತಿ.

₹ 2 ಕೋಟಿ ಪಡೆದಿದ್ದ ಸಿಪಿಐ

ನಾಲ್ವರು ಅಭ್ಯರ್ಥಿಗಳನ್ನು ನೇಮಕ ಮಾಡುವ ಸಲುವಾಗಿ ರುದ್ರಗೌಡ ಹಾಗೂ ಸಿಪಿಐ ಸೇರಿಕೊಂಡು ₹ 2 ಕೋಟಿ ಪಡೆದಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಂದ ತಕ್ಷಣ ಸಿಪಿಐ ಕೈಗೆ ₹ 2 ಕೋಟಿ ಬಂದು ಸೇರಿತ್ತು. ಇದರಲ್ಲಿ ರುದ್ರಗೌಡಗೂ ಸಮಪಾಲು ಎಂದು ‘ಡೀಲ್‌’ ಆಗಿತ್ತು. ಆದರೆ, ರುದ್ರಗೌಡ ಅವರಿಗೆ ಚೆಳ್ಳೆಹಣ್ಣು ತಿನ್ನಿಸಿದ ಸಿಪಿಐ ₹ 75 ಲಕ್ಷ ಮಾತ್ರ ನೀಡಿದ್ದು ವಿಚಾರಣೆ ವೇಳೆ ಗೊತ್ತಾಗಿದೆ ಎನ್ನುತ್ತವೆ ಮೂಲಗಳು.

ಉಳಿದ ₹ 25 ಲಕ್ಷದ ವಿಚಾರವಾಗಿ ರುದ್ರಗೌಡ ಹಾಗೂ ಸಿಪಿಐ ಮಧ್ಯೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಈ ಡೀಲ್‌ ಕುದುರಿಸಲು ಮುಂದಾಗಿದ್ದು ಜಿಲ್ಲೆಯ ಬಿಜೆಪಿಯ ಒಬ್ಬ ಪ್ರಭಾವಿ ನಾಯಕ. ಆ ನಾಯಕನೇ ನಾಲ್ವರೂ ಅಭ್ಯರ್ಥಿಗಳನ್ನು ಸಿಪಿಐಗೆ ಪರಿಚಯ ಮಾಡಿಕೊಟ್ಟಿದ್ದರು. ಅವರನ್ನು ಪಾಸ್ ಮಾಡುವ ಜವಾಬ್ದಾರಿಯನ್ನು ಸಿಪಿಐ ಹಾಗೂ ಬಿಜೆಪಿ ನಾಯಕ ಸೇರಿಕೊಂಡು ರುದ್ರಗೌಡಗೆ ವಹಿಸಿಕೊಟ್ಟಿದ್ದರು. ಈ ಬಗ್ಗೆ ತನಿಖಾಧಿಕಾರಿಗಳ ಮುಂದೆ ರುದ್ರಗೌಡ ಬಾಯಿ ಬಿಟ್ಟಿದ್ದಾಗಿ, ಮೂಲಗಳು ಮಾಹಿತಿ ನೀಡಿವೆ.

ಸಿಐಡಿ ಅಧಿಕಾರಿಗಳು ಈಗಾಗಲೇ ಒಂದು ಬಾರಿ ಸಿಪಿಐ ಕರೆಯಿಸಿ ವಿಚಾರಣೆ ಕೂಡ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT