ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಲಯ ವಿಭಾಗ ಕಚೇರಿ

Published 11 ಜನವರಿ 2024, 14:04 IST
Last Updated 11 ಜನವರಿ 2024, 14:04 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಗಳ ವಲಯ ವಿಭಾಗೀಯ ಕಚೇರಿಯನ್ನು ಬೆಳಗಾವಿಯಲ್ಲಿ ತೆರೆಯಲು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಕಚೇರಿಯ ವಲಯ ವಿಭಾಗ ಶೀಘ್ರದಲ್ಲಿ ಬೆಳಗಾವಿಯಲ್ಲೂ ಕಾರ್ಯನಿರ್ವಹಿಸಲಿದೆ. ಉತ್ತರ ವಲಯ (ಧಾರವಾಡ) ಮತ್ತು ಈಶಾನ್ಯ ವಲಯ (ಕಲಬುರಗಿ)ಗಳನ್ನೂ ಇದೇ ಕಚೇರಿಗೆ ಸೇರಿಸಲಾಗಿದೆ. ಈ ಕುರಿತು ಜ.9ರಂದು ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ಮುಖ್ಯ ಎಂಜಿನಿಯರ್, ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 37 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೂತನ ವಲಯ ಕಚೇರಿಗೆ ಸ್ಥಳಾಂತರಿಸಬೇಕು. ಇಲ್ಲವೇ, ಮರು ಹೊಂದಾಣಿಕೆ ಮಾಡಿ ನಿಯೋಜನೆ ಮಾಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

‘ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಪ್ರತಿ ವರ್ಷ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುತ್ತಲೇ ಇದೆ. ಆದರೂ ಕಾಮಗಾರಿಗಳ ಅನುಷ್ಠಾನನದಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ರಾಜ್ಯಕ್ಕೆ ದೊರೆತ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇರುವುದು ಕೂಡ ಅನುಷ್ಠಾನ ಹಿನ್ನೆಡೆಗೆ ಕಾರಣ. ಪರಿಣಾಮಕಾರಿ ಅನುಷ್ಠಾನಕ್ಕಾಗಿ ಉತ್ತರ ಮತ್ತು ಈಶಾನ್ಯ ವಲಯ ಒಳಗೊಂಡಂತೆ ಬೆಳಗಾವಿಯಲ್ಲಿ ವಲಯ ಕಚೇರಿ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧೀನ ಕಾರ್ಯದರ್ಶಿ ರಘುನಾಥಗೌಡ ಪಾಟೀಲ ಆದೇಶದಲ್ಲಿ ತಿಳಿಸಿದ್ದಾರೆ.

‘ದಕ್ಷಿಣ ಮತ್ತು ಕೇಂದ್ರ ವಲಯ ವ್ಯಾಪ್ತಿಯಲ್ಲಿ 2,221.96 ಕಿ.ಮೀ ಉದ್ದದ ಹೆದ್ದಾರಿ ಮತ್ತು ಉತ್ತರ ಹಾಗೂ ಈಶಾನ್ಯ ವಲಯ ವ್ಯಾಪ್ತಿಯಲ್ಲಿ 1,607.40 ಕಿ.ಮೀ ಉದ್ದದ ಹೆದ್ದಾರಿ ಬರುತ್ತದೆ. ಹೊಸ ಕಚೇರಿಯ ವ್ಯಾಪ್ತಿಗೆ ಉತ್ತರ ವಲಯ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳು ಮತ್ತು ಈಶಾನ್ಯ ವಲಯ ವ್ಯಾಪ್ತಿಯ ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಭೌಗೋಳಿಕ ಪ್ರದೇಶ ಒಳಪಡಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT