ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಶ್ರೇಷ್ಠ ಕೃತಿಗಳ ಪ್ರಕಟಣೆ..’

Last Updated 29 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

‘ಜಡಭರತ’ ಎನ್ನುವ ಕಾವ್ಯನಾಮದಿಂದ ಖ್ಯಾತರಾಗಿರುವ ಡಾ.ಜಿ.ಬಿ.ಜೋಶಿ ಅವರ ಕನಸಿನ ಕೂಸು ಧಾರವಾಡದ ಸುಭಾಸ ರಸ್ತೆಯ ಮನೋಹರ ಗ್ರಂಥಮಾಲೆ. ಕನ್ನಡ ತನ್ನದೇ ಆದ ಆಸ್ಮಿತೆಯೊಂದನ್ನು ಕಂಡು ಕೊಳ್ಳಲು ಹವಣಿಸುತ್ತಿದ್ದ ದಿನಗಳವು. ಅದರ ಪರಿಣಾಮವಾಗಿಯೇ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಒಂದುಗೂಡಬೇಕು. ಅದಕ್ಕೊಂದು ತನ್ನದೇ ಆದ ಸಾಮಾಜಿಕ, ಸಾಂಸ್ಕೃತಿಕ ಆಯಾಮ ದಕ್ಕಬೇಕು ಎನ್ನುವ ಕನಸೊಂದು ಇತಿಹಾಸದ ಅಂಗಳದಲ್ಲಿ ಮೂಡಿತು. ಅದಕ್ಕೆ ಕೇಂದ್ರ ಸ್ಥಳವಾಗಿದ್ದು ಧಾರವಾಡ.

ಆ ಸಂದರ್ಭದಲ್ಲಿ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಮಹನೀಯರು ತಮ್ಮದೇ ಆದ ವಿಧಾನಗಳಲ್ಲಿ ಕೆಲಸ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆ, ಕನ್ನಡ ಶಾಲೆಗಳ ಸ್ಥಾಪನೆ, ಗೆಳೆಯರ ಬಳಗದ ರೂಪಿತವಾದದ್ದು, ನಿರಂತರ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ್ದು, ಆ ಮೂಲಕ ಭಾಷೆಗೊಂದು ಗಟ್ಟಿ ನೆಲೆ ದೊರಕಿಸುವ ಪ್ರಯತ್ನಗಳು ನಡೆದವು. ಅವುಗಳ ಮುಂದುವರಿಕೆಯಾಗಿಯೇ ಧಾರವಾಡದಲ್ಲಿ ಹಲವು ಪ್ರಕಾಶನ ಸಂಸ್ಥೆಗಳು ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿ, ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಿದವು.

ಈ ನಿಟ್ಟಿನಲ್ಲಿಯೇ ಜಿ.ಬಿ.ಜೋಶಿ ಮನೋಹರ ಗ್ರಂಥಮಾಲೆ ಆರಂಭಿಸಿ ಕನ್ನಡದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಿ, ಮನೆ, ಮನೆಗೆ ಹೋಗಿ ಅವುಗಳನ್ನು ಖರೀದಿಸಿ, ಓದುವಂತೆ ಮಾಡಿದರು. ಕನ್ನಡದ ಪ್ರೀತಿಯನ್ನು ಮನೆ, ಮನದಂಗಳಕ್ಕೆ ತಲುಪಿಸಿದ ಕೀರ್ತಿ ಡಾ.ಜಿ.ಬಿ.ಜೋಶಿ ಅವರಿಗೆ ಸಲ್ಲುತ್ತದೆ. ಡಾ.ದ.ರಾ ಬೇಂದ್ರೆ, ಡಾ.ವಿ.ಕೃ.ಗೋಕಾಕ, ರಂ.ಶ್ರೀ ಮುಗಳಿ,ಡಾ.ಕೀರ್ತಿನಾಥ ಕುರ್ತಕೋಟಿ, ಡಾ.ಗಿರಡ್ಡಿ ಗೋವಿಂದರಾಜ್‌, ಡಾ.ಗಿರೀಶ ಕಾರ್ನಾಡರಂಥ ಸಾಹಿತ್ಯ ದಿಗ್ಗಜರು ಸಲಹೆಗಾರರಾಗಿ, ಗುಣಮಟ್ಟದ ಕೃತಿಗಳನ್ನು ಆಯ್ಕೆ ಮಾಡಿ, ಗ್ರಂಥಮಾಲೆಯ ಘನತೆಗೆ ಹೊಸ ಗರಿ ಮೂಡಿಸಿದರು.

1933ರಿಂದ ಕನ್ನಡದ ಸೇವೆಯಲ್ಲಿ ತೊಡಗಿರುವ ಮನೋಹರ ಗ್ರಂಥ ಮಾಲೆ ಇದುವರೆಗೆಕಾದಂಬರಿ, ಸಣ್ಣ ಕಥೆಗಳು, ಆತ್ಮಚರಿತ್ರೆ, ನಾಟಕಗಳು, ವಿಮರ್ಶೆ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿಗಳನ್ನು ಮುದ್ರಿಸಿ, ಸಾಹಿತ್ಯಾಸಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಜಿ.ಬಿ.ಜೋಶಿ ಅವರ ಕಾಲಾನಂತರ ಅವರ ಪುತ್ರ ಡಾ.ರಮಾಕಾಂತ ಜೋಶಿ ಮತ್ತು ಮೊಮ್ಮಗ ಸಮೀರ ಜೋಶಿ ಮನೋಹರ ಗ್ರಂಥಮಾಲೆಯ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜತೆಗೆ ಆಧುನಿಕತೆಯ ಮೆರುಗನ್ನು ನೀಡಿದ್ದಾರೆ.

‘ಆರಂಭದಲ್ಲಿ ಮನೋಹರ ಗ್ರಂಥಮಾಲೆ ಜವಾಬ್ದಾರಿಯನ್ನು ಅಜ್ಜ ಮತ್ತು ತಂದೆಯವರು ನೋಡಿಕೊಳ್ಳುತ್ತಿದ್ದರು. ತಂದೆಯವರ ತಮ್ಮ ಗೋಪಾಲ ಜೋಶಿ ರಾಜ್ಯದ ವಿವಿಧೆಡೆ ಸುತ್ತಿ ಪುಸ್ತಕಗಳನ್ನು ಮಾರಾಟ ಮಾಡಿ, ಚಂದಾದಾರರಿಗೆ ಪುಸ್ತಕಗಳನ್ನು ತಲುಪಿಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ನಾನು ಪದವಿ ಮುಗಿಸಿ, ಪುಣೆಯಲ್ಲಿ ಪ್ರಿಂಟಿಂಗ್‌ ಟೆಕ್ನಾಲಜಿ ಕೋರ್ಸ್‌ ಮುಗಿಸಿ ಬಂದ ನಂತರ ಗ್ರಂಥಮಾಲೆಯ ಜವಾಬ್ದಾರಿ ತೆಗೆದುಕಕೊಂಡೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇ–ಪುಸ್ತಕಗಳನ್ನು ಪರಿಚಯಿಸಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಸಾಹಿತ್ಯಪ್ರೇಮಿ ನಮ್ಮಿಂದ ಪ್ರಕಟವಾದ ಕೃತಿಗಳನ್ನು ಡೌನ್‌ಲೋಡ್‌ ಮಾಡಿ, ಓದಬಹುದು. ಗುಣಮಟ್ಟದ ಸಾಹಿತ್ಯ ಪ್ರಚುರಪಡಿಸುವ ಅಜ್ಜ ಜಿ.ಬಿ.ಜೋಶಿ ಅವರ ಅಪೇಕ್ಷೆಯನ್ನು ತಂದೆಯವರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ' ಎನ್ನುತ್ತಾರೆ ಮನೋಹರ ಗ್ರಂಥಮಾಲೆ ಸಮೀರ ಜೋಶಿ.

ರಾಜ್ಯ ಮತ್ತು ರಾಜ್ಯದ ಹೊರಗಡೆ ಚಂದಾದಾರರ ಬಳಗ ರೂಪಿಸಿಕೊಂಡಿರುವ ಮನೋಹರ ಗ್ರಂಥಮಾಲೆ ಪ್ರತಿ ವರ್ಷ ಓದುಗರಿಗೆ 800ರಿಂದ 1000 ಪುಟಗಳ ಉತ್ಕೃಷ್ಟಸಾಹಿತ್ಯ ಕೃತಿಗಳನ್ನು ನೀಡುತ್ತಾ, ಓದುವ ಅಭಿರುಚಿಯ ನಿರಂತರತೆಯನ್ನುಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಕನ್ನಡದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ಎನ್ನುತ್ತಾರೆ ಅವರು.

ಕೇವಲ ಮಾತು, ಭಾಷಣಗಳಲ್ಲಿನ ಭಾಷಾ ಅಭಿಮಾನದಿಂದ ಭಾಷೆ, ಉಳಿಯುವುದಿಲ್ಲ. ಬೆಳೆಯುವುದಿಲ್ಲ. ನಿಸ್ಪೃಹ ಮನಸ್ಸು ಮತ್ತು ಕೃತಿಯಿಂದ ಮಾತ್ರ ನಮ್ಮದೇ ಆದ ಕೊಡುಗೆ ನೀಡಲು ಸಾಧ್ಯ ಎನ್ನುವುದನ್ನು ಮನೋಹರ ಗ್ರಂಥಮಾಲೆ ಸಾಬೀತುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT