ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸಾಲಕ್ಕೂ, ನಿಮ್ಮ ಸಾಲಕ್ಕೂ ವ್ಯತ್ಯಾಸವಿದೆ: ಸಿಎಂಗೆ ಅಶೋಕ ತೀರುಗೇಟು

Published 5 ಏಪ್ರಿಲ್ 2024, 4:32 IST
Last Updated 5 ಏಪ್ರಿಲ್ 2024, 4:32 IST
ಅಕ್ಷರ ಗಾತ್ರ

ಬೆಂಗಳೂರು: 'ಸಿದ್ದರಾಮಯ್ಯ ಅವರೇ, ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ. ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ತಾವು ಮಾಡಿರುವ ಸಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಿಮಗೆ ಅರ್ಥವಾಗುವುದಿದ್ದರೆ ಓದಿಕೊಳ್ಳಿ' ಎಂದು ವಿಪಕ್ಷ ನಾಯಕ ಆರ್‌. ಅಶೋಕ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 2024ರ ಮಧ್ಯಂತರ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಸತತ ನಾಲ್ಕನೇ ವರ್ಷವೂ ಶೇ 11.1ರಷ್ಟು ಹೆಚ್ಚಿಸಿದೆ. ಇದರಿಂದ ಬಂಡವಾಳ ವೆಚ್ಚ ₹11.11 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದು ದೇಶದ ಜಿಡಿಪಿಯ ಶೇ 3.4ರಷ್ಟು ಆಗಿದೆ.

ಅದೇ ನಿಮ್ಮ ಕಾರ್ಯವೈಖರಿ ನೋಡಿ. 2023-24 ರಲ್ಲಿ ತಾವು ಮಂಡಿಸಿದ ಬಜೆಟ್ ಗಾತ್ರ ₹3.27 ಲಕ್ಷ ಕೋಟಿ. ಅದರಲ್ಲಿ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು ₹54,000 ಕೋಟಿ. ಅದೇ 2024-2025ರ ಆರ್ಥಿಕ ಸಾಲಿಗೆ ತಾವು ಮಂಡಿಸಿರುವ ಕರ್ನಾಟಕದ ಬಜೆಟ್ ಗಾತ್ರ ₹3,71,383 ಕೋಟಿ. ಅಂದರೆ 2023-24 ರಲ್ಲಿ ತಾವು ಮಂಡಿಸಿದ #3.27 ಲಕ್ಷ ಕೋಟಿಗಿಂತ ದೊಡ್ಡದು. ಜೊತೆಗೆ ಕಳೆದ ವರ್ಷಕ್ಕಿಂತ ಸುಮಾರು ₹25 ಸಾವಿರ ಕೋಟಿ ಹೆಚ್ಚಿನ ಸಾಲ ಕೂಡ ಮಾಡಿದ್ದೀರಿ. ಆದರೆ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು ಕೇವಲ ₹55,000 ಕೋಟಿ, ಅಂದರೆ ಕಳೆದ ವರ್ಷಕ್ಕಿಂತ ಹೆಚ್ಚಾದ ಮೊತ್ತ ಎಷ್ಟು? ಕೇವಲ ₹1,000 ಕೋಟಿ. ಅಂದರೆ ಬಂಡವಾಳ ವೆಚ್ಚ ಹೆಚ್ಚಳವಾಗಿದ್ದು ಕೇವಲ ಶೇ 1.85 ರಷ್ಟು ಎಂದು ಹೆಳಿದ್ದಾರೆ.

ಬಜೆಟ್ ಗಾತ್ರ ಹೆಚ್ಚಾದರೂ, ಸಾಲ ಹೆಚ್ಚಾದರೂ, ಬಂಡವಾಳ ವೆಚ್ಚ ಮಾತ್ರ ಯಾಕೆ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಸಿಎಂ ಅವರೇ?, ಸಾಲದ ದುಡ್ಡೆಲ್ಲಾ ಎಲ್ಲಿ ಹೋಗುತ್ತಿದೆ?, ಹೆಚ್ಚಾದ ಬಜೆಟ್ ಗಾತ್ರವೆಲ್ಲಾ ಎಲ್ಲಿ ಹೋಯ್ತು?. ನಿಮ್ಮ ಬಳಿ ಇದಕ್ಕೆಲ್ಲಾ ಉತ್ತರ ಇದೆಯೇ? ಎಂದು ಆರ್‌. ಅಶೋಕ ಪ್ರಶ್ನಿಸಿದ್ದಾರೆ.

ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ?: ಪ್ರಶ್ನಿಸಿದ್ದ ಸಿಎಂ

ಇದಕ್ಕೂ ಮುನ್ನ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ' ಅಶೋಕ ಅವರೇ, ನಿಮಗೆ ಈ ಆರ್ಥಿಕ ವ್ಯವಹಾರಗಳು ಅರ್ಥವಾಗುವುದಿದ್ದರೆ ಸ್ವಲ್ಪ ಕೇಳಿಸಿಕೊಳ್ಳಿ. ನಮ್ಮ ರಾಜ್ಯ ಸರ್ಕಾರದ ಸಾಲ ‘ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್‌ಆರ್‌ಬಿ)ಯ ವ್ಯಾಪ್ತಿಯಲ್ಲಿಯೇ ಇದೆ. ನಮ್ಮ ಸಾಲ ಒಟ್ಟು ಸಾಲ ಒಂದು ಲಕ್ಷ ಕೋಟಿಯನ್ನು ಮೀರಿದ್ದರೂ ಅದು ನಮ್ಮ ಜಿಎಸ್‌ಡಿಪಿಯ ಶೇ 25ರ ಮಿತಿಯೊಳಗೆಯೇ ಇದೆ. ನಮ್ಮ ಹಣಕಾಸು ಕೊರತೆ ಕೂಡಾ ಜಿಎಸ್‌ಡಿಪಿಯ ಶೇಕಡಾ ಮೂರನ್ನು ಮೀರಿಲ್ಲ.

ಕೇಂದ್ರದ ಬಿಜೆಪಿ ಸರ್ಕಾರದ ನೇತೃತ್ವದ ಆಡಳಿತದಲ್ಲಿ ಸರ್ಕಾರದ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ, ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ವೈಯಕ್ತಿಕ ಸಾಲ ಕೂಡಾ ಹೆಚ್ಚಾಗುತ್ತಿದ್ದರೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿಯತ್ತಿದೆ. ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ? ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT