ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕದಲ್ಲಿ ರಾಹುಲ್‌– ಡಿಕೆಶಿ ಭೇಟಿ: ಕಾಂಗ್ರೆಸ್‌ನಲ್ಲಿ ಚರ್ಚೆ

Published : 11 ಸೆಪ್ಟೆಂಬರ್ 2024, 15:36 IST
Last Updated : 11 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟು ಕೆಲವು ಸಚಿವರು ಹೇಳಿಕೆಗಳನ್ನು ನೀಡುತ್ತಿರುವ ಮಧ್ಯೆಯೇ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ಭೇಟಿ ಮಾಡಿರುವುದು ಕಾಂಗ್ರೆಸ್‌ ವಲಯದಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅನುಮತಿ ನೀಡಿರುವ ಪ್ರಕರಣದಲ್ಲಿ ಹೈಕೋರ್ಟ್ ನೀಡಲಿರುವ ತೀರ್ಪಿನ ಕಡೆಗೆ ಕಾಂಗ್ರೆಸ್‌ ನಾಯಕರ ಚಿತ್ತ ನೆಟ್ಟಿದೆ. ಈ ನಡುವೆ, ‘ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ’ ಎನ್ನುತ್ತಲೇ ಕೆಲವು ಸಚಿವರು ಮುಖ್ಯಮಂತ್ರಿ ಪಟ್ಟದ ಮೇಲಿನ ತಮ್ಮ ಆಸೆ ವ್ಯಕ್ತಪಡಿಸುತ್ತಿರುವುದಕ್ಕೆ ಪಕ್ಷದ ನಾಯಕರಲ್ಲಿ ಭಿನ್ನ ಧ್ವನಿ ಕೇಳಿಸಿದೆ.

ರಾಹುಲ್‌ ಗಾಂಧಿ ಅವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಶಿವಕುಮಾರ್‌ ಕೂಡಾ ಅಮೆರಿಕ ಪ್ರವಾಸಕ್ಕೆ ತೆರಳಿರುವುದು ಕಾಂಗ್ರೆಸ್‌ನಲ್ಲೇ ಚರ್ಚೆ ಹುಟ್ಟು ಹಾಕಿತ್ತು. ಅದಕ್ಕೆ ಪೂರಕವೆಂಬಂತೆ ಇಬ್ಬರೂ ಅಲ್ಲಿನ ಹೋಟೆಲೊಂದರಲ್ಲಿ ಮುಖಾಮುಖಿ ಆಗಿದ್ದಾರೆ.

‘ಅಮೆರಿಕ ಪ್ರವಾಸ ಖಾಸಗಿಯಾಗಿದ್ದು, ಕುಟುಂಬ ಸಮೇತ ಹೋಗುತ್ತಿದ್ದೇನೆ. ಅಲ್ಲಿ ಯಾವ ನಾಯಕರನ್ನೂ ನಾನು ಭೇಟಿ ಮಾಡುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದ್ದರು. ಆದರೆ, ರಾಹುಲ್‌ ಗಾಂಧಿಯನ್ನು ವಾಷಿಂಗ್ಟನ್‌ ಡಿಸಿಯಲ್ಲಿ ತಮ್ಮ ಪತ್ನಿ ಉಷಾ ಜೊತೆ ಭೇಟಿಯಾಗಿರುವ ಶಿವಕುಮಾರ್‌ ಕೆಲಹೊತ್ತು ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ. ಇಬ್ಬರು ನಡುವಿನ ಮಾತುಕತೆ ಏನು ಎಂಬುದು ಬಹಿರಂಗವಾಗಿಲ್ಲ. ಹಾಗಿದ್ದರೂ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆ ಬಿರುಸುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT