ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ | ‘ಆತ್ಮಸಾಕ್ಷಿ’ ಹೆಸರಲ್ಲಿ ಎಸ್.ಟಿ. ಸೋಮಶೇಖರ್ ಸಡ್ಡು

ಮತ ಹಿಡಿದಿಟ್ಟುಕೊಳ್ಳಲು ಬಿಜೆಪಿ ವಿಫಲ l ಫಲ ನೀಡದ ಎಚ್.ಡಿ.ಕೆ ಲೆಕ್ಕಾಚಾರ
Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಿದ್ದೇನೆ’ ಎಂದು ಹೇಳಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್, ಬಿಜೆಪಿ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.

ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಸೋಮಶೇಖರ್, ತಿಂಗಳಿನಿಂದೀಚೆಗೆ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು, ಕಾಂಗ್ರೆಸ್ ಭೋಜನ ಕೂಟದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ  ಅವರು ಅಡ್ಡ ಮತದಾನ ಮಾಡಬಹುದು ಎಂಬ ಅನುಮಾನ ಬಿಜೆಪಿಯವರಿಗೆ ಮೊದಲೇ ಇತ್ತು. ಹಲವು ಸುತ್ತಿನ ಮನವೊಲಿಕೆಯೂ ನಡೆದಿತ್ತು. ಜೆಡಿಎಸ್‌ ಅಭ್ಯರ್ಥಿಗೆ ಮತ ಚಲಾಯಿಸುವುದಿಲ್ಲ ಎಂಬ ಅವರ ಪಟ್ಟಿಗೆ ಮಣಿದಿದ್ದ ಬಿಜೆಪಿ ನಾಯಕರು, ತಮ್ಮದೇ ಪಕ್ಷದ ನಾರಾಯಣಸಾ ಭಾಂಡಗೆ ಅವರಿಗೆ ಮತ ಹಾಕಲು ಸೂಚಿಸಿದ್ದರು.

ಮಂಗಳವಾರ ಬೆಳಿಗ್ಗೆಯಿಂದಲೂ ಬಿಜೆಪಿ ನಾಯಕರ ಸಂಪರ್ಕದಿಂದ ದೂರ ಉಳಿದಿದ್ದ ಸೋಮಶೇಖರ್‌, ವಿಧಾನಸೌಧಕ್ಕೆ ಬಂದು ನೇರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಚೇರಿಗೆ ಹೋದರು. ಅಲ್ಲಿ ಕೆಲಕಾಲ ಚರ್ಚೆ ನಡೆಸಿದ ಬಳಿಕ ಮತಗಟ್ಟೆಯತ್ತ ತೆರಳಿದರು.

ಮತ ಚಲಾಯಿಸಿ ಹೊರ ಬಂದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಆತ್ಮಸಾಕ್ಷಿಯ ಮತ ಹಾಕಿದ್ದೇನೆ’ ಎಂದು ಒಗಟಾಗಿ ಹೇಳಿದರು. ಬಿಜೆಪಿಯ ಚುನಾವಣಾ ಏಜೆಂಟರು ಸೋಮಶೇಖರ್‌ ಅಡ್ಡ ಮತ ಚಲಾಯಿಸಿರುವುದನ್ನು ಖಚಿತಪಡಿಸಿದರು.

ಮತ ಚಲಾವಣೆಗೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ್ದ ಸೋಮಶೇಖರ್‌, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಮತಗಟ್ಟೆ ಹೋದ ಸೋಮಶೇಖರ್, ಕಾಂಗ್ರೆಸ್‌ನ ಅಜಯ್‌ ಮಾಕನ್‌, ಸೈಯ್ಯದ್ ನಾಸಿರ್ ಹುಸೇನ್ ಮತ್ತು ಚಂದ್ರಶೇಖರ್‌ ಅವರಿಗೆ ಮತ ಚಲಾಯಿಸಿ ಬಿಜೆಪಿಯ ಚುನಾವಣಾ ಏಜೆಂಟ್ ಆಗಿದ್ದ ಅರವಿಂದ ಬೆಲ್ಲದ ಅವರಿಗೆ ತೋರಿಸಿದರು. ‘ಇದು ಸರಿಯಲ್ಲ, ಮತವನ್ನು ರದ್ದು ಮಾಡಿ, ಬೇರೆ ಮತಪತ್ರ ನೀಡಲೇ’ ಎಂದು ಬೆಲ್ಲದ ಪ್ರಶ್ನಿಸಿದಾಗ, ‘ಅಗತ್ಯವಿಲ್ಲ. ತೋರಿಸುತ್ತಿದ್ದೇನೆ ನೋಡಿ’ ಎಂದು ಸೋಮಶೇಖರ್ ಉತ್ತರಿಸಿ ಮತ ಚಲಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ, ಶಿವರಾಂ ಹೆಬ್ಬಾರ್‌ ಅವರು ಮತದಾನಕ್ಕೆ ಬರಲೇ ಇಲ್ಲ. ಹೆಬ್ಬಾರ್ ಅವರು ವಿಪ್‌ ಸ್ವೀಕರಿಸದ ಕಾರಣ ಶಾಸಕರ ಭವನದಲ್ಲಿರುವ ಅವರ ಕೊಠಡಿಯ ಬಾಗಿಲಿಗೇ ವಿಪ್‌ ಪ್ರತಿಯನ್ನು ಬೆಳಿಗ್ಗೆ ಅಂಟಿಸಲಾಯಿತು. ಅವರು ಬಿಜೆಪಿ ನಾಯಕರ ದೂರವಾಣಿ ಕರೆ ಸ್ವೀಕರಿಸಲಿಲ್ಲ. ಮತದಾನದಿಂದ ದೂರ ಇರುವುದಾಗಿ ಹೇಳಿದ್ದ ಶಿವರಾಂ ಹೆಬ್ಬಾರ್‌ ಅವರನ್ನು ಕಾಂಗ್ರೆಸ್‌ ನಾಯಕರು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು. ಅಡ್ಡ ಮತದಾನ ಮಾಡಿದರೆ ಬಿಜೆಪಿಯಿಂದ ಶಿಸ್ತುಕ್ರಮ ಮಾತ್ರವಲ್ಲದೇ, ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬ ಆತಂಕ ವ್ಯಕ್ತಪಡಿಸಿದಾಗ, ‘ಏನೂ ಆಗದಂತೆ ನೋಡಿಕೊಳ್ಳುತ್ತೇವೆ’ ಎಂಬ ಆಭಯವನ್ನು ಕಾಂಗ್ರೆಸ್‌ ನಾಯಕರು ನೀಡಿದರು ಎಂದು ಮೂಲಗಳು ಹೇಳಿವೆ.

ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿದ ಕಾರಣ ಕಾರ್ಯತಂತ್ರ ಬದಲಿಸಿಕೊಂಡ ಬಿಜೆಪಿ ನಾಯಕರು ಡಾ.ಭರತ್‌ ಶೆಟ್ಟಿ ಅವರು ಜೆಡಿಎಸ್‌ ಬದಲಿಗೆ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಲು ನಿರ್ದೇಶನ ನೀಡಿದರು. ಹೆಬ್ಬಾರ್‌ ಗೈರಾಗುವುದು ಖಾತರಿಯಾದ ಬಳಿಕ ಭರತ್‌ ಮತ ಚಲಾಯಿಸಿದರು.

ತಮ್ಮ ಶಾಸಕರಿಂದ ಅಡ್ಡ ಮತದಾನ ಆಗಬಹುದು ಅಥವಾ ಗೈರು ಆಗಬಹುದು ಎಂಬ ಆತಂಕ ಜೆಡಿಎಸ್‌ನಲ್ಲೂ ಇತ್ತು. ಯಾರೂ ಅಡ್ಡ ಮತದಾನ ಮಾಡದೇ, ಗೈರಾಗದೇ ಇದ್ದದ್ದು ಜೆಡಿಎಸ್‌ ನಾಯಕರಿಗೆ ಸಮಾಧಾನ ತಂದಿತು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ವಿರೋಧಪಕ್ಷದ ನಾಯಕರ ಕಚೇರಿಯಲ್ಲೇ ಇದ್ದು, ಕ್ಷಣ ಕ್ಷಣದ ವಿದ್ಯಮಾನಗಳ ಬಗ್ಗೆ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಿದರು.

‘ಮೈತ್ರಿ’ 2ನೇ ಸೋಲು

ಬಿಜೆಪಿ– ಜೆಡಿಎಸ್‌ ಮೈತ್ರಿ ಆದ ಬಳಿಕ ಎರಡನೇ ಸೋಲು ಅನುಭವಿಸಿದೆ. ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಆ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿ ಸೋತರೆ, ರಾಜ್ಯಸಭಾ ಚುನಾವಣೆಯಲ್ಲೂ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲು ಅನುಭವಿಸಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದೇ ಎಂಬ ಚರ್ಚೆಯೂ ಆರಂಭವಾಗಿದೆ.

ಈ ಚುನಾವಣೆಗಳಿಗೂ ಮುನ್ನ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷೇತರರ ಮತಗಳು ಮತ್ತು ಕಾಂಗ್ರೆಸ್‌ನ ಕೆಲ ಮತಗಳನ್ನು ಸೆಳೆಯುವ ಯೋಜನೆ ರೂಪಿಸಿದ್ದರು. ಕೆಲವರನ್ನು ಸಂಪರ್ಕಿಸಿದ್ದರು. ಆದರೆ, ತಂತ್ರ ವಿಫಲವಾಯಿತು.

ಹಿಂದಿನ ಅಡ್ಡಮತದಾನ ಪ್ರಕರಣಗಳು

2013–18ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಜೆಡಿಎಸ್‌ನ ಎಂಟು ಶಾಸಕರು ಕಾಂಗ್ರೆಸ್‌ ಪರವಾಗಿ ಅಡ್ಡ ಮತದಾನ ಮಾಡಿ, ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. 2022ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲೂ ಜೆಡಿಎಸ್‌ನ ಇಬ್ಬರು ಶಾಸಕರು ಅಡ್ಡಮತದಾನ ಮಾಡಿ, ಉಚ್ಚಾಟನೆಯ ಶಿಕ್ಷೆ ಅನುಭವಿಸಿದ್ದರು. 2016ರಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಬಿ.ಜೆಡ್. ಜಮೀರ್ ಅಹಮದ್‌, ಎನ್‌.ಚಲುವರಾಯಸ್ವಾಮಿ, ಎಚ್‌.ಸಿ. ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಭೀಮಾನಾಯ್ಕ, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಮತ್ತು ಇಕ್ಬಾಲ್‌ ಅನ್ಸಾರಿ ಅಡ್ಡ ಮತದಾನ ಮಾಡಿದ್ದರು. ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಇವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಜೆಡಿಎಸ್‌, ಅಂದಿನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ದೂರು ನೀಡಿತ್ತು. ಆದರೆ, ಸಭಾಧ್ಯಕ್ಷರು ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. 2022ರಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಎಸ್.ಆರ್‌. ಶ್ರೀನಿವಾಸ್ ಮತ್ತು ಕೆ.ಶ್ರೀನಿವಾಸ್‌ಗೌಡ ಅವರು ಅಡ್ಡಮತದಾನ ಮಾಡಿದ್ದರು. ಇವರನ್ನೂ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು ನೀಡಲಾಗಿತ್ತು.

ಇಡೀ ದಿನ ಸತಾಯಿಸಿದ ಹೆಬ್ಬಾರ್‌

ಮಂಗಳವಾರ ಬೆಳಿಗ್ಗೆ 9ಕ್ಕೆ ಆರಂಭವಾದ ಮತದಾನ ಸಂಜೆ 4ರವರೆಗೂ ನಡೆಯಿತು. ಬಿಜೆಪಿಯ ಎಸ್. ಸುರೇಶ್‌ ಕುಮಾರ್‌ ಮೊದಲು ಮತ ಚಲಾಯಿಸಿದರು. ಮಾನ್ಯತಾ ಟೆಕ್‌ ಪಾರ್ಕ್‌ನ ಹಿಲ್ಟನ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌ ಶಾಸಕರು, ಒಟ್ಟಾಗಿ ಬಸ್‌ನಲ್ಲಿ ವಿಧಾನಸೌಧಕ್ಕೆ ಬಂದು ಮತ ಹಾಕಿದರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಬಹುತೇಕ ಶಾಸಕರು ಮತ ಚಲಾಯಿಸಿದ್ದರು.

ಹನೂರು ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ಪಿ. ಮಂಜುನಾಥ್‌ ಕೊನೆಯವರಾಗಿ ಮತ ಚಲಾಯಿಸಿದರು. ಶಿವರಾಂ ಹೆಬ್ಬಾರ್‌ ಇಡೀ ದಿನ ಮತಗಟ್ಟೆಯತ್ತ ಸುಳಿಯಲಿಲ್ಲ. ಆಗ ಬರುತ್ತಾರೆ, ಈಗ ಬರುತ್ತಾರೆ ಎಂಬ ಕುತೂಹಲ ಕೊನೆಯವರೆಗೂ ಉಳಿದಿತ್ತು. ವಿಧಾನಸೌಧದ ಕೊಠಡಿ ಯೊಂದರಲ್ಲಿ ಕುಳಿತಿದ್ದು, ಇನ್ನೇನು ಮತದಾನಕ್ಕೆ ಬರುತ್ತಾರೆ ಎಂಬ ಸುದ್ದಿಗಳು ಆಗಾಗ ಹರಿದಾಡಿದವು. ಆದರೆ, ಮತದಾನದ ಅವಧಿ ಮುಗಿಯುವವರೆಗೂ ಅವರು ಮತಗಟ್ಟೆಯತ್ತ ಸುಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT