ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆರ್ಕ್ಟಿಕ್‌'ನಲ್ಲಿ ರಾಮನ್‌ ಸಂಸ್ಥೆ ಅಧ್ಯಯನ

Published 19 ಡಿಸೆಂಬರ್ 2023, 16:06 IST
Last Updated 19 ಡಿಸೆಂಬರ್ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: 'ಆರ್ಕ್ಟಿಕ್‌' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ.

ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್‌’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ.

ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್‌ಆರ್‌ಐನ ಎಲೆಕ್ಟ್ರಾನಿಕ್ಸ್‌ ಎಂಜನಿಯರಿಂಗ್‌ ಗ್ರೂಪ್ ವಿಭಾಗದ ಗಿರೀಶ್‌ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್‌ನ ಸ್ವಾಲ್ಬರ್ಡ್‌ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್‌ಆರ್‌ಐ ತಿಳಿಸಿದೆ.

ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್‌ ಏಜೆನ್ಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT