ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದು ಮುಸಾವೀರ್: ಎನ್‌ಐಎ

Published 5 ಏಪ್ರಿಲ್ 2024, 14:05 IST
Last Updated 5 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದು ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್’ ಎಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಮುಸಾವೀರ್ ಬಾಂಬ್ ಇಟ್ಟಿದ್ದನೆಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಹೀಗಾಗಿ, ಈತನೇ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಎಂಬುದು ಗೊತ್ತಾಗಿದೆ’ ಎಂದಿದ್ದಾರೆ.

‘ಮುಸಾವೀರ್ ಕೃತ್ಯಕ್ಕೆ ಅಬ್ದುಲ್ ಮಥೀನ್ ಹೆಚ್ಚು ಸಹಕಾರ ನೀಡಿದ್ದ. ಸ್ಫೋಟದ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತನೇ ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದನೆಂಬ ಮಾಹಿತಿ ಇದೆ’ ಎಂದು ಹೇಳಿದ್ದಾರೆ.

‘ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶಂಕಿತರ ಬಗ್ಗೆ ಹಲವು ಪುರಾವೆಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಬಂಧಿಸಲಾಗಿದ್ದ ಮುಜಮೀಲ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಸಾಕಷ್ಟು ಮಾಹಿತಿ ಬಾಯ್ಬಿಟ್ಟಿದ್ದಾನೆ’ ಎಂದು ತಿಳಿಸಿದ್ದಾರೆ.

ಸ್ನೇಹಿತರು, ಆಪ್ತರಿಗೆ ನೋಟಿಸ್: ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಮುಜಮೀಲ್ ಶರೀಫ್‌ನನ್ನು ಎನ್‌ಐಎ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಬಾಂಬ್ ಇರಿಸಿದ್ದ ಎನ್ನಲಾದ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅದಕ್ಕೆ ಸಹಕರಿಸಿದ್ದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ತಲೆಮರೆಸಿಕೊಂಡಿದ್ದಾನೆ.

ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಎನ್‌ಐಎ ಅಧಿಕಾರಿಗಳು, ಶಂಕಿತರ ಸ್ನೇಹಿತರು ಹಾಗೂ ಆಪ್ತರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

‘ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ಬಗ್ಗೆ ಸುಳಿವು ನೀಡಿದವರಿಗೆ ₹ 20 ಲಕ್ಷ ಬಹುಮಾನ ಘೋಷಿಸಲಾಗಿದೆ. ಜೊತೆಗೆ, ಅವರಿಬ್ಬರ ಸ್ನೇಹಿತರು ಹಾಗೂ ಆಪ್ತರ ಪಟ್ಟಿ ಸಿದ್ಧಪಡಿಸಲಾಗಿದೆ. ಅವರೆಲ್ಲರನ್ನೂ ವಿಚಾರಣೆ ನಡೆಸಿ, ಶಂಕಿತರು ಎಲ್ಲಿದ್ದಾರೆ? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಎನ್‌ಐಎ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT