ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪರ ಸರ್ಕಾರದ ಸಾರ್ಥಕ ವರ್ಷ: ರಣದೀಪ್‌ ಸಿಂಗ್‌ ಸುರ್ಜೇವಾಲಾ

Published 20 ಮೇ 2024, 0:26 IST
Last Updated 20 ಮೇ 2024, 0:26 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಒಂದು ವರ್ಷವನ್ನು ಸಾರ್ಥಕವಾಗಿ ಪೂರೈಸಿದೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರವು ಸೋಮವಾರ ವರ್ಷ ಪೂರೈಸುತ್ತಿರುವ ಪ್ರಯುಕ್ತ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲವು 4.60 ಕೋಟಿ ಜನರನ್ನು ತಲುಪುತ್ತಿದೆ. ಬಡವರು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಶ್ರಮಿಕ ವರ್ಗದ ಎಲ್ಲ ಜನರಿಗೂ ನಮ್ಮ ಸರ್ಕಾರ ಶಕ್ತಿ ತುಂಬಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜಗತ್ತಿನಲ್ಲೇ ಇತಿಹಾಸ ನಿರ್ಮಿಸಿದೆ’ ಎಂದಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ಅಕ್ಕಿ ಒದಗಿಸದೇ ಅಸಹಕಾರ ತೋರಿದ್ದರೂ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನಗದು ವರ್ಗಾಯಿಸುವ ಮೂಲಕ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಬರ ಪರಿಹಾರ ನೀಡುವುದು ವಿಳಂಬ ಮಾಡಿದರೂ ರಾಜ್ಯ ಸರ್ಕಾರ ತಾನೇ ಮೊದಲ ಕಂತಿನ ಪರಿಹಾರ ಪಾವತಿಸಿದೆ. ಆ ಮೂಲಕ ಈ ಸರ್ಕಾರವು ರೈತರ ಪರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಇದು ರಾಜ್ಯದ ಜನರನ್ನು ಸಶಕ್ತ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವ ಸರ್ಕಾರ’ ಎಂದು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT